ಬೆಂಗಳೂರು : ಏರೊ ಇಂಡಿಯಾ ಶೋ-2021ರಲ್ಲಿ ದೇಶ ವಿದೇಶಗಳ ರಕ್ಷಣೆ ಹಾಗೂ ವೈಮಾನಿಕ ತಂತ್ರಜ್ಞಾನಗಳ ಪ್ರದರ್ಶನದಲ್ಲಿ ಆಲ್ಫಾ ಡಿಸೈನ್ ಟೆಕ್ನಾಲಜಿಯ ಮಳಿಗೆಯಲ್ಲಿ, ಶತ್ರುಗಳ ಮೇಲೆ ಕಣ್ಗಾವಲಿಡುವ ಐವೊರಿ ಥರ್ಮಲ್ ಕ್ಯಾಮರಾ ಹಾಗೂ ನಾಸಾ ತಂತ್ರಜ್ಞಾನದ ವಿಟಾಲ್ ಸ್ಮಾರ್ಟ್ ವೆಂಟಿಲೇಟರ್ ಎಲ್ಲರ ಗಮನ ಸೆಳೆಯುತ್ತಿದೆ.
ಯುದ್ಧ ಸಂದರ್ಭದಲ್ಲಿ ಮತ್ತು ದೇಶದ ರಕ್ಷಣೆ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ಆಲ್ಫಾ ಕಂಪನಿ ಅಭಿವೃದ್ಧಿಪಡಿಸಿರುವ ಐವೊರಿ ಥರ್ಮಲ್ ಇಮೇಜ್ ಕ್ಯಾಮರಾ ಬಹಳ ಉಪಯುಕ್ತವಾಗಿದೆ. 5 ಕಿಲೋ ಮೀಟರ್ ದೂರದಲ್ಲಿನ ಶತ್ರು ಪಾಳೇಯದ ಮೇಲೆ ಹದ್ದುಗಣ್ಣನಿಟ್ಟು ಯುದ್ಧದ ಟ್ಯಾಂಕರ್ ಗಳ ಮೂಲಕ ಗುರಿಯಿಟ್ಟು ಹೊಡೆಯುವ ಅವಕಾಶವಿದೆ.
ಇದೇ ರೀತಿ ಚಲಿಸುವ ವಸ್ತುಗಳನ್ನು ಥರ್ಮಲ್ ಇಮೇಜ್ ತಂತ್ರಜ್ಞಾನದ ಮೂಲಕ ಗುರುತಿಸಬಹುದಾಗಿದೆ. ಆ ಮೂಲಕ ಉಗ್ರರು ಅಥವಾ ಶತ್ರುಗಳ ಮೇಲೆ ಶಸ್ತ್ರಾಸ್ತ್ರ ಬಳಸಿ ಫೈರಿಂಗ್ ಮಾಡಬಹುದಾಗಿದೆ. ಸಾಮಾನ್ಯವಾಗಿ ಈ ಯಂತ್ರಗಳನ್ನು ಗಡಿಭದ್ರತೆ, ವಾಯುಪಡೆ, ನೌಕಾಪಡೆ ಮತ್ತಿತರ ಕಡೆ ಬಳಸಲಾಗುತ್ತದೆ.
ಪಾಲಿಕೋಟೆಡ್ ಕಾರ್ಬನ್ ವಸ್ತುವಿನಿಂದ ತಯಾರಿಸಲಾದ ಐವೊರಿ ಥರ್ಮಲ್ ಇಮೇಜ್ ಕ್ಯಾಮರಾ, ಶತ್ರು ರಾಷ್ಟ್ರಗಳ ರಾಡಾರ್ ನಿಂದ ಗುರುತಿಸಲು ಸಾಧ್ಯವಾಗುವುದಿಲ್ಲ. ಆಲ್ಫಾ ಕಂಪನಿಯು ಈಗಾಗಲೇ 700ಕ್ಕೂ ಹೆಚ್ಚು ಈ ರೀತಿಯ ಕ್ಯಾಮರಾಗಳನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್ )ಗೆ ಪೂರೈಕೆ ಮಾಡಿದೆ. ಭಾರತೀಯ ನೌಕಾಪಡೆ, ವಾಯುಪಡೆಗೂ ಈ ಯಂತ್ರವನ್ನು ಸದ್ಯದಲ್ಲೇ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ.
ನಾಸಾದಿಂದ 45 ದಿನದಲ್ಲಿ ಪುಟ್ಟಗಾತ್ರದ ವೆಂಟಿಲೇಟರ್ ಉತ್ಪಾದನೆ :
ಕೋವಿಡ್ ಸಂಕಷ್ಠದ ಕಾಲದಲ್ಲಿ ಕೇವಲ 45 ದಿನಗಳಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಟಾಲ್ ಎಂಬ ಪರಿಣಾಮಕಾರಿ ವೆಂಟಿಲೇಟರ್ ಗಳನ್ನು ತಯಾರು ಮಾಡಿತ್ತು. ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಎರಡು ಕೆಜಿ ಗಾತ್ರದ ಈ ಪುಟ್ಟ ಕಂಪ್ರೆಸರ್ ವೆಂಟಿಲೇಟರ್ ಗಳನ್ನು ಬಳಸಿಕೊಂಡು ಅಮ್ಲಜನಕ ಸಿಲಿಂಡರ್ ಸಹಾಯದಿಂದ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ. ಕೋವಿಡ್ ಸೋಂಕು ತಾರಕಕ್ಕೇರಿದ ಸಂದರ್ಭದಲ್ಲಿ ದೇಶವೂ ಸೇರಿದಂತೆ ವಿಶ್ವದ ಎಲ್ಲೆಡೆ ಕೋವಿಡ್ ಸೋಂಕಿನಿಂದ ಗಂಭೀರ ಉಸಿರಾಟದ ತೊಂದರೆಯಿಂದ ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಟಾಲ್ ಕಂಪ್ರೆಸರ್ ವೆಂಟಿಲೇಟರ್ ಅನುಕೂಲ ಹೊಂದಿದೆ.
ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲದ ಸ್ಥಳದಲ್ಲಿ, ಸಿಯಾಚಿನ್ ನಂತಹ ವಿಶ್ವದ ಎತ್ತಿ ಎತ್ತರದ ಹಿಮದ ಕಣಿವೆಯಲ್ಲೂ ಸುಲಭವಾಗಿ ಪುಟ್ಟ ಗಾತ್ರದ ವಿಟಾಲ್ ಕಂಪ್ರೆಸರ್ ವೆಂಟಿಲೇಟರ್ ಗಳನ್ನು ಆಮ್ಲಜನಕ ಸಿಲಿಂಡರ್ ಬಳಸಿಕೊಂಡು ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬಹುದಾಗಿದೆ.
ನಾಸಾ ಅಭಿವೃದ್ಧಿಪಡಿಸಿದ ಈ ವಿಟಾಲ್ ಕಂಪ್ರೆಸರ್ ವೆಂಟಿಲೇಟರ್ ಗಳನ್ನು ವಿಶ್ವದ 500 ಕಂಪನಿಗಳು ಉತ್ಪಾದಿಸಲು ಅನುಮತಿ ನೀಡುವಂತೆ ಅರ್ಜಿ ಹಾಕಿತ್ತು. ಆ ಪೈಕಿ 30 ಕಂಪನಿಗಳಿಗೆ ಮಾತ್ರ ನಾಸಾ ಲೈಸೆನ್ಸ್ ನೀಡಿತ್ತು. ದೇಶದಲ್ಲಿ ಆಲ್ಫಾ ಡಿಸೈನ್ ಟೆಕ್ನಾಲಜಿ ಸೇರಿದಂತೆ ಕೇವಲ 3 ಕಂಪನಿಗಳಿಗೆ ಮಾತ್ರ ವಿಟಾಲ್ ಯಂತ್ರ ಉತ್ಪಾದಿಸಲು ಲೈಸೆನ್ಸ್ ಲಭಿಸಿದೆ. ಸಾಮಾನ್ಯವಾಗಿ ಕೃತಕ ಉಸಿರಾಟದ ವ್ಯವಸ್ಥೆಯ ಯಂತ್ರಗಳನ್ನು ಎಲೆಕ್ಟ್ರಾನಿಕ್ ಬಿಡಿಭಾಗಗಳೇ ಹೆಚ್ಚಿರುತ್ತದೆ. ಆದ್ರೆ ಈ ವೆಂಟಿಲೇಟರ್ ಎಲೆಕ್ಟ್ರೋ ಮೆಕಾನಿಕ್ ಆಧಾರಿತವಾಗಿದ್ದು, ಕಠಿಣ ಪರಿಸ್ಥಿತಿಯಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.