ಬೆಂಗಳೂರು, ಆ.18 www.bengaluruwire.com: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ, ಕಲಬುರಗಿ ನಿವಾಸ, ಕೆಪಿಎಸ್‌ಸಿ ಕಚೇರಿ (ಉದ್ಯೋಗ ಸೌಧ) ಸೇರಿದಂತೆ ಕರ್ನಾಟಕ ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಟ್ಟು 21 ಸ್ಥಳಗಳಲ್ಲಿ ಏಕಕಾಲದಲ್ಲಿ ಮೆಗಾ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಇಡಿ ಅಧಿಕಾರಿಗಳ ಎಂಟ್ರಿ:
ಬೆಂಗಳೂರಿನ ಉದ್ಯೋಗ ಸೌಧದಲ್ಲಿರುವ ಕೆಪಿಎಸ್‌ಸಿ ಪ್ರಧಾನ ಕಚೇರಿಗೆ ಕಚೇರಿ ವೇಳೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುತ್ತಿದ್ದಂತೆಯೇ ಸಿಆರ್‌ಪಿಎಫ್ (CRPF) ಭದ್ರತೆಯೊಂದಿಗೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಮಹತ್ವದ ಕಡತಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಪಿಎಸ್‌ಸಿ ಕಚೇರಿಯ ಮೇಲೆ ಇಡಿ ನೇರವಾಗಿ ದಾಳಿ ನಡೆಸಿರುವುದು ತೀವ್ರ ಸಂಚಲನ ಮೂಡಿಸಿದೆ.

ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ:
ಪಶುಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳಿಂದ ತಲಾ ₹70 ಲಕ್ಷದಿಂದ ₹80 ಲಕ್ಷ ರೂಪಾಯಿವರೆಗೆ ಲಂಚ ಪಡೆದಿರುವುದು, ಓಎಂಆರ್ (OMR) ಶೀಟ್ ತಿದ್ದುಪಡಿ ಹಾಗೂ ಡಿಜಿಟಲ್ ಮೌಲ್ಯಮಾಪನದಲ್ಲಿ ಗೋಲ್‌ಮಾಲ್ ನಡೆಸಿರುವ ಆರೋಪಗಳಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಎಫ್‌ಐಆರ್ (FIR) ದಾಖಲಾಗಿದ್ದವು. ಈ ಎಫ್‌ಐಆರ್ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ಕೈಗೆತ್ತಿಕೊಂಡಿದೆ.
ಎಲ್ಲೆಲ್ಲಿ ದಾಳಿ?:
ಪ್ರಮುಖ ಸ್ಥಳಗಳು: ಕೆಪಿಎಸ್‌ಸಿ ಮುಖ್ಯ ಕಚೇರಿ, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಡಾಲರ್ಸ್ ಕಾಲೋನಿ ಹಾಗೂ ಕಲಬುರಗಿ ನಿವಾಸಗಳು.
ಸದಸ್ಯರು ಮತ್ತು ಏಜೆನ್ಸಿಗಳು: ಕೆಪಿಎಸ್‌ಸಿ ಸದಸ್ಯ ಶಾಂತ ಹೊಸಮನಿ, ಡಿಜಿಟಲ್ ಮೌಲ್ಯಮಾಪನ ನಡೆಸುತ್ತಿದ್ದ ‘ಎಡುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಚೇರಿಗಳು.
ವ್ಯಾಪ್ತಿ: ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ರಾಯಚೂರು, ಕಾರವಾರ, ಕಲಬುರಗಿ ಹಾಗೂ ಗುಜರಾತ್‌ನ ಅಹಮದಾಬಾದ್ ಸೇರಿದಂತೆ ಒಟ್ಟು 21 ಕಡೆಗಳಲ್ಲಿ ಇಡಿ ಪರಿಶೀಲನೆ ನಡೆಸುತ್ತಿದೆ.
ಹೈಕೋರ್ಟ್ ಮೊರೆ ಹೋಗಿದ್ದ ಸಾಹುಕಾರ್:
ನೇಮಕಾತಿ ಅಕ್ರಮ ಹಾಗೂ ನಕಲಿ ಜಾತಿ-ಆದಾಯ ಪ್ರಮಾಣಪತ್ರ ಸಲ್ಲಿಸಿ ಪುತ್ರಿಯರ ನೇಮಕಾತಿ ಮಾಡಿಕೊಂಡ ಆರೋಪದ ಮೇಲೆ ರಾಜ್ಯಪಾಲರ ಆದೇಶದಂತೆ ಅಮಾನತುಗೊಂಡಿದ್ದ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, ಬಂಧನದ ಭೀತಿಯಿಂದ ಅವರು ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸಂಬಂಧಪಟ್ಟ ತನಿಖಾ ಸಂಸ್ಥೆ ಹಾಗೂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತ್ತು. ಇದರ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.



















