ಬೆಂಗಳೂರು, ಆ.13 www.bengaluruwire.com: ಭಾರತದ ಮಹಾನಗರಗಳಲ್ಲಿ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು (eVTOL) ಬರಲಿವೆ.
ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಫೌಂಡೇಶನ್ (BeST) ಹಾಗೂ ಸಾರ್ಲಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ನಗರ ವಾಯು ಸಂಚಾರ (UAM) ಕುರಿತು ಜಂಟಿ ಸಂಶೋಧನೆ ನಡೆಸಲು ಅಧಿಕೃತವಾಗಿ ಮಹತ್ವದ ಒಡಂಬಡಿಕೆಗೆ (MoU) ಸಹಿ ಹಾಕಿವೆ.
ಭಾರತೀಯ ನಗರಗಳಲ್ಲಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ಏರ್ ಟ್ಯಾಕ್ಸಿಗಳನ್ನು ಪರಿಚಯಿಸಲು ಅಗತ್ಯವಿರುವ ವೈಜ್ಞಾನಿಕ ಹಾಗೂ ಸಾಮಾಜಿಕ ತಳಪಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ರೂಪುಗೊಂಡಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಪ್ರೊ. ಆಶಿಶ್ ವರ್ಮಾ ಅವರ ನೇತೃತ್ವದಲ್ಲಿ ಈ ಬಹು-ವರ್ಷದ ಸಂಶೋಧನಾ ಕಾರ್ಯಕ್ರಮವು ನಡೆಯಲಿದೆ. ಆರಂಭದಲ್ಲಿ ಬೆಂಗಳೂರು ಮತ್ತು ಇತರೆ ಎರಡು ಭಾರತೀಯ ನಗರಗಳಲ್ಲಿ ಈ ಸಂಶೋಧನೆ ಹಾಗೂ ವಾಯು ಸಂಚಾರದ ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲಾಗುತ್ತದೆ.

ಸಾರ್ಲಾ ಏವಿಯೇಷನ್ ಸಂಸ್ಥೆಯು ಕೇವಲ ವಿಮಾನ ತಯಾರಿಕೆಗೆ ಮಾತ್ರ ಸೀಮಿತವಾಗದೆ, ಭಾರತದಲ್ಲಿ eVTOL ಅಳವಡಿಕೆಗೆ ಬೇಕಾದ ಮೂಲಸೌಕರ್ಯ ಮತ್ತು ನೀತಿ ನಿರೂಪಣೆಯ ಪರಿಸರ ವ್ಯವಸ್ಥೆಯನ್ನು ರೂಪಿಸುವ ಗುರಿ ಹೊಂದಿದೆ. ಶೂನ್ಯ (Shunya) ಹೆಸರಿನ 6+1 ಆಸನ ಸಾಮರ್ಥ್ಯದ eVTOL ವಿಮಾನದ ಮೂಲಕ ನಗರ ಮತ್ತು ಪ್ರಾದೇಶಿಕ ಸಂಚಾರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಈ ಯೋಜನೆ ಸಹಕಾರಿಯಾಗಲಿದೆ. ಈ ಸಂಶೋಧನೆಯ ವರದಿಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸೇರಿದಂತೆ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ ಸಲ್ಲಿಕೆ ಮಾಡಲಾಗುತ್ತದೆ.


















