ಬೆಂಗಳೂರು, ಜು.26 www.bengaluruwire.com: ನಗರಾಭಿವೃದ್ಧಿ ಇಲಾಖೆಯು (UDD) ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರಿಗೆ ಸಮಾಧಾನ ಸಂಗತಿಯನ್ನು ನೀಡಿದೆ.
ಹೊಸದಾಗಿ ‘ಎ’ ಖಾತಾ ಪಡೆಯಲು ಇದ್ದ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಬೆಲೆಯ (Guidance Value) ಶೇಕಡ 5 ರಿಂದ ಶೇಕಡ 2ಕ್ಕೆ ಕಡಿತಗೊಳಿಸಿ ಸರ್ಕಾರವು ಆದೇಶ ಹೊರಡಿಸಿದೆ. ಈ ಸೀಮಿತ ಅವಧಿಯ ವಿನಾಯಿತಿಯು ದಿನಾಂಕ ಆಗಸ್ಟ್ 23 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.
ಈ ಹಿಂದೆ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತಿಸಲು ಮಾತ್ರ ಶುಲ್ಕವನ್ನು ಶೇ.2ಕ್ಕೆ ಇಳಿಸಲಾಗಿತ್ತು, ಆದರೆ ಏಕ ನಿವೇಶನ ಅನುಮೋದನೆಯಡಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವವರಿಗೆ ಶೇ.5ರಷ್ಟು ಶುಲ್ಕವೇ ಮುಂದುವರೆದಿತ್ತು. ಈ ರೀತಿಯ ಎರಡು ಪ್ರಕರಣಗಳಲ್ಲಿ ಬೇರೆ ಬೇರೆ ಶುಲ್ಕ ವಿಧಿಸಿರುವುದು ಆಸ್ತಿ ಮಾಲೀಕರಲ್ಲಿ ಗೊಂದಲ ಉಂಟುಮಾಡಿತ್ತು ಮತ್ತು ಇದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದ್ದರು.
ಸರ್ಕಾರ ಹೊರಡಿಸಿರುವ ತಿದ್ದುಪಡಿ ಆದೇಶದ ಪ್ರಕಾರ, ಶೇ.5ರಷ್ಟು ಶುಲ್ಕವು ಕಡಿಮೆ ವಿಸ್ತೀರ್ಣ ಇರುವ ಸ್ವತ್ತುಗಳನ್ನು ಹೊಂದಿರುವ ಬಡ ವರ್ಗದ ಸಾಮಾನ್ಯ ನಾಗರೀಕರಿಗೆ ಆರ್ಥಿಕ ಹೊರೆಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೊಸದಾಗಿ ‘ಎ’ ಖಾತಾ ಪಡೆಯಲು ಸುಮಾರು 5 ಲಕ್ಷ ಪ್ರಕರಣಗಳು ಇರುವುದಾಗಿ ಅಂದಾಜಿಸಲಾಗಿದ್ದು, ಈ ಏಕ ರೂಪದ ಶುಲ್ಕ ನೀತಿಯಿಂದ ಹೆಚ್ಚಿನ ಆಸ್ತಿ ಮಾಲೀಕರು ಪ್ರಯೋಜನ ಪಡೆಯಲಿದ್ದಾರೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ಆದಾಯ ಹೆಚ್ಚಳಕ್ಕೂ ಇದು ಸಹಕಾರಿಯಾಗಲಿದೆ.

ಆದೇಶದ ಪ್ರಮುಖ ನಿಬಂಧನೆಗಳು ಇಲ್ಲಿವೆ:
ದಿನಾಂಕ 23.08.2026 ರವರೆಗೆ ಹೊಸದಾಗಿ ‘ಎ’ ಖಾತಾ ಪಡೆಯಲು ಅರ್ಜಿ ಸಲ್ಲಿಸುವ ಪ್ರಕರಣಗಳಲ್ಲಿ ಮಾತ್ರ ಶುಲ್ಕವನ್ನು ಶೇ.5 ರಿಂದ ಶೇ.2 ಕ್ಕೆ ಕಡಿತಗೊಳಿಸಿ ಪಾವತಿಸಿಕೊಳ್ಳಲಾಗುವುದು.
’ಎ’ ಖಾತಾ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿ, ಅನುಮೋದನೆಯಾಗಿದ್ದರೂ ಮೊತ್ತ ಪಾವತಿಸದೇ ಬಾಕಿ ಉಳಿದಿರುವ ಪ್ರಕರಣಗಳಿಗೂ ದಿನಾಂಕ 23.08.2026 ರೊಳಗಾಗಿ ಪಾವತಿಸಿದಲ್ಲಿ ಈ ಶೇ.2 ರಷ್ಟು ದರ ಅನ್ವಯವಾಗುತ್ತದೆ.
ಈ ಪ್ರಕರಣಗಳಲ್ಲಿ ಆನ್ಲೈನ್ (online) ವ್ಯವಸ್ಥೆ ಮುಖಾಂತರ ಪರಿಷ್ಕೃತ ಡಿಮ್ಯಾಂಡ್ ನೋಟಿಸ್ (demand notice) ನೀಡಲಾಗುವುದು.
ಶೇ.2 ರಷ್ಟು ದರದಲ್ಲಿ ಪಾವತಿಸುವ ಈ ಅವಕಾಶವು 23.08.2026ರ ನಂತರ ಅಸ್ತಿತ್ವದಲ್ಲಿರುವುದಿಲ್ಲ. ತದನಂತರ ಸ್ವೀಕೃತವಾಗುವ ಅರ್ಜಿಗಳಿಗೆ ಹಳೆಯ ನಿಯಮದಂತೆ ಶೇ.5 ರಷ್ಟು ಮೊತ್ತವನ್ನೇ ಪಾವತಿಸಿಕೊಳ್ಳಲಾಗುವುದು.
ನಿಗದಿತ ಅವಧಿ ಮುಕ್ತಾಯಗೊಂಡ ನಂತರ ಈ ರಿಯಾಯಿತಿಯನ್ನು ನೀಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆಮಾಡಿ, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.





















