ಬೆಂಗಳೂರು, ಜು.25 www.bengaluruwire.com: ಪೈಲಟ್ ಆಗಬೇಕೆಂಬ ಮಧ್ಯಮ ವರ್ಗ ಹಾಗೂ ಬಡ ಮಕ್ಕಳ ಕನಸಿಗೆ ವರದಾನವಾಗಿರುವ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯ (Jakkur Aerodrome) ಪರವಾನಗಿಯನ್ನು ಮುಂದಿನ ಐದು ವರ್ಷಗಳ ಕಾಲ ನವೀಕರಣ ಮಾಡಲಾಗಿದೆ.
ಅಲ್ಲದೆ, ಮೈಸೂರು ಮತ್ತು ಹಾಸನದಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ ಆರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಬುಧವಾರ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಭೇಟಿ ನೀಡಿ, ಚಟುವಟಿಕೆಗಳ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂದಿನ 5 ವರ್ಷಗಳವರೆಗೆ ಲೈಸೆನ್ಸ್ ರಿನಿವಲ್:

1940ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಸಾವಿರಾರು ಪೈಲಟ್‌ಗಳನ್ನು ದೇಶಕ್ಕೆ ನೀಡಿದೆ. ಮಧ್ಯಮ ವರ್ಗದ ಮಕ್ಕಳಿಗೆ ಇದೊಂದು ವರದಾನ. ಸಂಸ್ಥೆಯ ಲೈಸೆನ್ಸ್ ರದ್ದಾಗಿತ್ತು, ಆದರೆ ಡಿಜಿಸಿಎ (DGCA) ಕಟ್ಟುನಿಟ್ಟಿನ ಪರಿಶೀಲನೆ ಬಳಿಕ ಇದೀಗ ಮುಂದಿನ ಐದು ವರ್ಷಕ್ಕೆ ಲೈಸೆನ್ಸ್ ನವೀಕರಿಸಿದೆ. ಪ್ರಸ್ತುತ 5 ಏರ್‌ಕ್ರಾಫ್ಟ್‌ಗಳಿದ್ದು, ಹೊಸದಾಗಿ 2 ಏರ್‌ಕ್ರಾಫ್ಟ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಖರೀದಿಸಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು. ರನ್‌ವೇಯನ್ನು 954 ಮೀಟರ್‌ನಿಂದ 160 ಮೀಟರ್ ಹೆಚ್ಚುವರಿಯಾಗಿ ವಿಸ್ತರಿಸಲು 10 ಎಕರೆ ಭೂಸ್ವಾಧೀನದ ಪ್ರಸ್ತಾವನೆ ಇದ್ದು, ಸ್ಥಳೀಯ ಕಟ್ಟಡಗಳ ನಿರ್ಬಂಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.
ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್:
ಬೆಂಗಳೂರಿನಲ್ಲಿ ಏರ್ ಟ್ರಾಫಿಕ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಲಾಗಿದೆ. ಇಲ್ಲಿಂದ ಟೇಕ್ ಆಫ್ ಆಗಿ, ಮೈಸೂರಿನಲ್ಲಿ ಲ್ಯಾಂಡ್ ಆಗುವ ‘ಟಚ್ ಆ್ಯಂಡ್ ಗೋ’ ವಿಧಾನಕ್ಕೆ ಅಲ್ಲಿ ಅವಕಾಶವಿದೆ. ಅದೇ ರೀತಿ ಹಾಸನದಲ್ಲೂ ಸ್ಯಾಟಲೈಟ್ ಬೇಸ್ ಮಾಡುವ ಉದ್ದೇಶವಿದೆ ಎಂದು ಅವರು ಮಾಹಿತಿ ನೀಡಿದರು. ಇಲಾಖೆಯ ಹೆಸರನ್ನು ‘ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ’ ಎಂದು ಬದಲಾಯಿಸಲು ಕ್ಯಾಬಿನೆಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಪೈಲಟ್ ತರಬೇತಿ ಶುಲ್ಕ ಹಾಗೂ ಉದ್ಯೋಗಾವಕಾಶ:
ದೇಶದಲ್ಲಿ ಏವಿಯೇಷನ್ ವಲಯ ಬೆಳೆಯುತ್ತಿದ್ದು, ಸುಮಾರು 35 ಸಾವಿರ ಪೈಲಟ್‌ಗಳ ಅವಶ್ಯಕತೆ ಸೃಷ್ಟಿಯಾಗಲಿದೆ.
ಪಿಪಿಎಲ್ (PPL – 40 ಗಂಟೆಗಳ ತರಬೇತಿ): ಕರ್ನಾಟಕದವರಿಗೆ 10 ಲಕ್ಷ ರೂ., ಹೊರರಾಜ್ಯದವರಿಗೆ 15 ಲಕ್ಷ ರೂ.
ಸಿಪಿಎಲ್ (CPL – 180 ಗಂಟೆಗಳ ತರಬೇತಿ): ಕರ್ನಾಟಕದವರಿಗೆ 37 ಲಕ್ಷ ರೂ., ಹೊರರಾಜ್ಯದವರಿಗೆ 42 ಲಕ್ಷ ರೂ. ಈ ಸಂಸ್ಥೆಯಲ್ಲಿ ಗುಣಮಟ್ಟದ ತರಬೇತಿ ಪಡೆದವರಿಗೆ ಉದ್ಯೋಗ ಖಚಿತ ಎಂದು ಅವರು ವಿವರಿಸಿದರು.
ಬರ ಪರಿಸ್ಥಿತಿ ನಿರ್ವಹಣೆಗೆ ಹಣದ ಕೊರತೆಯಿಲ್ಲ:
ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಕಂದಾಯ ಸಚಿವರು, ಮೈಸೂರು ಕಂದಾಯ ವಿಭಾಗದ ಪರಿಶೀಲನೆ ಬಳಿಕ ಬರದ ಸಂಪೂರ್ಣ ಚಿತ್ರಣ ಸಿಗಲಿದೆ ಎಂದರು. ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ರೂ. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ನೀಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 329 ಕೋಟಿ ರೂ. ಇದ್ದು, ಹಣದ ಕೊರತೆ ಇಲ್ಲ. ಮಳೆಯಾಗದಿದ್ದರೆ ಆಗಸ್ಟ್ ಎರಡನೇ ವಾರದ ಬಳಿಕ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನೀಟ್ ಅಕ್ರಮ: ಸಿಇಟಿ ಮರು ಆರಂಭಕ್ಕೆ ಆಗ್ರಹ:
ನೀಟ್ (NEET) ಪರೀಕ್ಷೆ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮರುಪರೀಕ್ಷೆಯಲ್ಲೂ ಹಲವರು ಅರ್ಹತೆ ಪಡೆದಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ರಾಜ್ಯದಲ್ಲಿ ಮತ್ತೆ ‘ಸಿಇಟಿ’ (CET) ವ್ಯವಸ್ಥೆ ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವುದಾಗಿ ಡಾ. ಜಿ. ಪರಮೇಶ್ವರ ತಿಳಿಸಿದರು.
ಈ ಸಂದರ್ಭದಲ್ಲಿ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನದ ರಾಜ್ ಸಿಂಗ್ ಅವರು, ಆಯುಕ್ತರಾದ ಎಂ.ಎನ್.ಅನುಚೇತ್ ಅವರು, ಸರ್ಕಾರಿ ವಿಮಾನಯಾನ ತರಬೇತಿ ಶಾಲೆಯ ನಿರ್ದೇಶಕರಾದ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.



















