ಬೆಂಗಳೂರು, ಜು.23 www.bengaluruwire.com: ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ಮತ್ತೆ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳವು (KMF) ತನ್ನ ಜನಪ್ರಿಯ ‘ನಂದಿನಿ’ ಬ್ರ್ಯಾಂಡ್‌ನ ತುಪ್ಪ ಹಾಗೂ ಬೆಣ್ಣೆ ದರವನ್ನು ದಿಢೀರ್ ಆಗಿ ಹೆಚ್ಚಿಸಿ ಆದೇಶ ಹೊರಡಿಸಿದೆ. ನೂತನ ದರಗಳು ಜುಲೈ 24 ರಿಂದಲೇ ಜಾರಿಗೆ ಬರಲಿವೆ ಎಂದು ಕೆಎಂಎಫ್ ಮೂಲಗಳು ಖಚಿತಪಡಿಸಿವೆ.
ಹೊಸ ದರಗಳ ವಿವರ ಇಲ್ಲಿದೆ:
ಗ್ರಾಹಕರು ಇನ್ನು ಮುಂದೆ ಒಂದು ಲೀಟರ್ ಸ್ಯಾಚೆಟ್ ತುಪ್ಪ ಹಾಗೂ ಒಂದು ಕೆಜಿ ಬೆಣ್ಣೆ ಖರೀದಿಸಲು ಜೇಬಿಗೆ ಕತ್ತರಿ ಬೀಳಲಿದೆ.
ನಂದಿನಿ ತುಪ್ಪ (Ghee): ಪ್ರತಿ ಲೀಟರ್ ತುಪ್ಪದ ದರವನ್ನು ₹15 ರಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ₹700 ಇದ್ದ ಲೀಟರ್ ತುಪ್ಪದ ಬೆಲೆ ಈಗ ₹715 ಕ್ಕೆ ಏರಿಕೆಯಾಗಿದೆ.

ನಂದಿನಿ ಬೆಣ್ಣೆ (Butter): ಪ್ರತಿ ಕೆಜಿ ಬೆಣ್ಣೆಯ ದರದಲ್ಲಿ ಭಾರಿ ಅಂದರೆ ₹50 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ₹610 ಇದ್ದ ಬೆಣ್ಣೆ ದರ ನಾಳೆಯಿಂದ ₹660 ಕ್ಕೆ ಮುಟ್ಟಲಿದೆ.
ಕಳೆದ ವರ್ಷವೂ ಏರಿಕೆಯಾಗಿದ್ದ ದರ:
ಕೆಎಂಎಫ್ ಪದೇ ಪದೇ ದರ ಏರಿಕೆ ಮಾಡುತ್ತಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವರ್ಷ ಅಂದರೆ 2025ರ ನವೆಂಬರ್ 7ರಂದು ಲೀಟರ್ ತುಪ್ಪಕ್ಕೆ ಬರೋಬ್ಬರಿ ₹90 ಹಾಗೂ ಕೆಜಿ ಬೆಣ್ಣೆಗೆ ₹38 ರಷ್ಟು ಏರಿಕೆ ಮಾಡಲಾಗಿತ್ತು. ಆ ಬಳಿಕ ಲೀಟರ್ ತುಪ್ಪದ ದರವು ₹700 ಹಾಗೂ ಬೆಣ್ಣೆ ಕೆಜಿ ದರವು ₹610 ತಲುಪಿತ್ತು. ಇದೀಗ ಕೇವಲ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ.
ಹೋಟೆಲ್, ಬೇಕರಿ ತಿನಿಸುಗಳ ಬೆಲೆ ಏರಿಕೆ ಭೀತಿ:
ನಂದಿನಿ ತುಪ್ಪ ಹಾಗೂ ಬೆಣ್ಣೆಯನ್ನು ಹೋಟೆಲ್‌ಗಳು, ದರ್ಶಿನಿಗಳು, ಬೇಕರಿಗಳು ಹಾಗೂ ಸಿಹಿತಿಂಡಿ (ಸ್ವೀಟ್ಸ್) ತಯಾರಕರು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಇದೀಗ ಪ್ರಮುಖ ಕಚ್ಚಾವಸ್ತುಗಳ ದರ ಏರಿಕೆಯಾಗಿರುವುದರಿಂದ, ಹೋಟೆಲ್ ಊಟ, ತಿಂಡಿ ಮತ್ತು ಬೇಕರಿ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ದರ ಏರಿಕೆ ಪರೋಕ್ಷವಾಗಿ ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಲಿದೆ.
ನಂದಿನಿ ತುಪ್ಪದ ದರ ಶೇ.3 ರ ಒಳಗಿದೆ, ತಿಂಡಿ ಬೆಲೆ ಏರಿಕೆ ಮಾಡಲ್ಲ:
“ಇತರೆ ಸಂಸ್ಥೆಗಳಿಗೆ ಹೋಲಿಸಿದರೆ ನಂದಿನಿ ತುಪ್ಪದ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಿದೆ. ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟ ಹಾಗೂ ಕಡಿಮೆ ದರದಲ್ಲಿ ದೊರಕುವ ನಂದಿನಿ ತುಪ್ಪದಲ್ಲಿ ಲೀಟರ್ ಗೆ ₹15 ಪರಿಷ್ಕೃತಗೊಳಿಸಿರುವುದು ಶೇ.3ರ ಏರಿಕೆಗಿಂತ ಕಡಿಮೆಯಿದೆ. ಹೀಗಾಗಿ ಹೋಟೆಲ್ ಗಳಲ್ಲಿ ತಿಂಡಿ ದರದಲ್ಲಿ ವ್ಯತ್ಯಾಸ ಮಾಡುವುದಿಲ್ಲ” ಎಂದು ಬೆಂಗಳೂರು ಹೊಟೇಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.


















