ಬೆಂಗಳೂರು, ಜು.23 www.bengaluruwire.com: ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಿರ್ಬಂಧಿಸಿದೆ.
ಜು.23 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಪಾರಿವಾಳಗಳಿಗೆ ಅನಿಯಂತ್ರಿತವಾಗಿ ಆಹಾರ ನೀಡುವುದರಿಂದ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು, ಅವುಗಳ ಹಿಕ್ಕೆಗಳಿಂದ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳು:
ವೈದ್ಯಕೀಯ ತಜ್ಞರ ವರದಿಗಳ ಪ್ರಕಾರ, ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ‘ಹೈಪರ್ಸೆನ್ಸಿಟಿವಿಟಿ ನ್ಯುಮೋನೈಟಿಸ್’ (Hypersensitivity pneumonitis) ನಂತಹ ಗಂಭೀರ ಶ್ವಾಸಕೋಶದ ಕಾಯಿಲೆಗಳು ಉಂಟಾಗುತ್ತವೆ. ಮಕ್ಕಳು, ವೃದ್ಧರು ಮತ್ತು ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚಿನ ಅಪಾಯವಿದೆ.

ಅಂತರ್ಜಾಲದಲ್ಲಿ ಲಭ್ಯವಿರುವ ವೈದ್ಯಕೀಯ ಮಾಹಿತಿಗಳ ಪ್ರಕಾರ, ಪಾರಿವಾಳದ ಹಿಕ್ಕೆಗಳು ಒಣಗಿದಾಗ ಸೂಕ್ಷ್ಮ ಧೂಳಿನ ಕಣಗಳಾಗಿ ಮಾರ್ಪಟ್ಟು ಗಾಳಿಯಲ್ಲಿ ಸೇರುತ್ತವೆ. ಇವುಗಳನ್ನು ಉಸಿರಾಡುವುದರಿಂದ ಶ್ವಾಸಕೋಶದಲ್ಲಿ ಅಲರ್ಜಿ ಮತ್ತು ಉರಿಯೂತ ಉಂಟಾಗುತ್ತದೆ.
ಕಾಲಕ್ರಮೇಣ ಇದು ಶ್ವಾಸಕೋಶದ ಶಾಶ್ವತ ಹಾನಿಗೆ (Pulmonary Fibrosis) ಕಾರಣವಾಗಬಹುದು. ಜೊತೆಗೆ, ಹಿಸ್ಟೋಪ್ಲಾಸ್ಮೋಸಿಸ್ (Histoplasmosis) ಮತ್ತು ಕ್ರಿಪ್ಟೋಕಾಕೋಸಿಸ್ (Cryptococcosis) ನಂತಹ ಅಪಾಯಕಾರಿ ಶಿಲೀಂಧ್ರಗಳ ಸೋಂಕು ಕೂಡ ಹರಡುವ ಸಾಧ್ಯತೆಗಳಿರುತ್ತವೆ.
ಆದೇಶದಲ್ಲಿರುವ ಪ್ರಮುಖ ನಿಯಮಗಳು:
ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯಕ್ಕೆ ಹಾನಿಯುಂಟುಮಾಡುವ ಯಾವುದೇ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಇತರ ಮಹಾನಗರ ಪಾಲಿಕೆಗಳ ಆಯುಕ್ತರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಗೊತ್ತುಪಡಿಸಿದ (Designated) ಸ್ಥಳಗಳಲ್ಲಿ ಮಾತ್ರ ನಿಯಂತ್ರಿತ ರೀತಿಯಲ್ಲಿ ಆಹಾರ ನೀಡಲು ಅವಕಾಶವಿರುತ್ತದೆ.
ಈ ನಿಗದಿತ ಸ್ಥಳಗಳಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಅನುಮತಿ ಇದೆ. ಫುಟ್ಪಾತ್, ರಸ್ತೆ ಅಥವಾ ಇತರ ಖಾಸಗಿ/ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡಲು ಅವಕಾಶವಿಲ್ಲ.
ನಿಗದಿತ ಸ್ಥಳಗಳ ನಿರ್ವಹಣೆ ಮತ್ತು ಸ್ವಚ್ಛತೆಯ ಜವಾಬ್ದಾರಿಯನ್ನು ಎನ್ಜಿಒ (NGO) ಅಥವಾ ಚಾರಿಟಬಲ್ ಸಂಸ್ಥೆಗಳು ವಹಿಸಿಕೊಳ್ಳಬೇಕು. ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ವಿಮಾನ ನಿಲ್ದಾಣಗಳ ಸಮೀಪ ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳಗಳನ್ನು ಮಾಡುವಂತಿಲ್ಲ.
ವಸತಿ ಸಮುಚ್ಚಯಗಳ ನಿವಾಸಿಗಳು ತಮ್ಮ ಟೆರೇಸ್, ಬಾಲ್ಕನಿ ಮತ್ತು ಛಾವಣಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ನೆರೆಹೊರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಾಮಫಲಕಗಳು ಮತ್ತು ಬ್ಯಾನರ್ಗಳನ್ನು ಅಳವಡಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ನಿಯಮಗಳ ಪಾಲನೆಗಾಗಿ ಸಂಬಂಧಪಟ್ಟ ವಲಯ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.




















