ಬೆಂಗಳೂರು, ಜು.23 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆದ ತಕ್ಷಣ ದ್ವಿಚಕ್ರ ವಾಹನ ಸವಾರರು ಫುಟ್ಪಾತ್ (Footpath Riding) ಏರಿ ಚಲಾಯಿಸುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ.
ಇದರಿಂದ ಪಾದಚಾರಿಗಳು, ವೃದ್ಧರು ಹಾಗೂ ಶಾಲಾ ಮಕ್ಕಳು ಪ್ರತಿದಿನ ಪರದಾಡುವಂತಾಗಿದ್ದು, ಅಪಘಾತದ ಭೀತಿಯಲ್ಲಿಯೇ ರಸ್ತೆ ಬದಿಯಲ್ಲಿ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪುಂಡಾಟಿಕೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಈಗ ಕಠಿಣ ಹೆಜ್ಜೆ ಇಡಲು ಮುಂದಾಗಿದೆ.
ಹೌದು, ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ಬರೋಬ್ಬರಿ 5,000 ರೂಪಾಯಿವರೆಗೆ ಹೆಚ್ಚಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ವೈರಲ್ ಆಗಿರುವ ಪತ್ರದಲ್ಲಿ ಏನಿದೆ?:

ಜು.22 ರ ಪತ್ರದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಪಾದಚಾರಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

”ಬೆಂಗಳೂರು ನಗರ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಇದರಿಂದ ಪಾದಚಾರಿಗಳ ಜೀವಕ್ಕೆ ಅಪಾಯ ಉಂಟಾಗುವ ಸಂಭವವಿರುತ್ತದೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಅನುಕೂಲವಾಗುವಂತೆ ಪಾದಚಾರಿಗಳ ಮಾರ್ಗಗಳಲ್ಲಿ ವಾಹನ ಚಲಾಯಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ರೂ.5,000 ವರೆಗೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದೆ” ಎಂದು ಸಾರಿಗೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಹಾಲಿ ದಂಡದ ಮೊತ್ತ ಎಷ್ಟು?:
ಪ್ರಸ್ತುತ ಮೋಟಾರು ವಾಹನ ಕಾಯ್ದೆ ಪ್ರಕಾರ, ಕರ್ನಾಟಕದಲ್ಲಿ ಫುಟ್ಪಾತ್ ಮೇಲೆ ವಾಹನ ಚಲಾಯಿಸಿದರೆ ಅಥವಾ ಪಾರ್ಕಿಂಗ್ ಮಾಡಿದರೆ ₹500 ರಿಂದ ₹1,000 ವರೆಗೆ ದಂಡ ವಿಧಿಸಲಾಗುತ್ತಿದೆ. ಆದರೆ, ಈ ಸಣ್ಣ ಮೊತ್ತದ ದಂಡ ವಾಹನ ಸವಾರರಲ್ಲಿ ಯಾವುದೇ ಭಯ ಹುಟ್ಟಿಸುತ್ತಿಲ್ಲ. ದಂಡ ಕಟ್ಟಿಯಾದರೂ ಸರಿ ಫುಟ್ಪಾತ್ ಮೇಲೆಯೇ ವಾಹನ ಓಡಿಸುತ್ತೇವೆ ಎಂಬ ನಿರ್ಲಕ್ಷ್ಯ ಮನೋಭಾವ ಸವಾರರಲ್ಲಿ ಹೆಚ್ಚಾಗಿದೆ. ಹೀಗಾಗಿ ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಪಾದಚಾರಿಗಳ ಹರ್ಷ:
ಸಚಿವ ಕೃಷ್ಣ ಬೈರೇಗೌಡ ಅವರ ಈ ದಿಟ್ಟ ನಿರ್ಧಾರಕ್ಕೆ ಬೆಂಗಳೂರಿನ ನಾಗರಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪ್ರಸ್ತಾವನೆಗೆ ಸಾರಿಗೆ ಇಲಾಖೆ ಒಪ್ಪಿಗೆ ಸೂಚಿಸಿ, ಶೀಘ್ರದಲ್ಲೇ ₹5,000 ದಂಡದ ನಿಯಮ ಜಾರಿಗೆ ಬಂದರೆ, ನಗರದ ಫುಟ್ಪಾತ್ಗಳು ಮತ್ತೆ ಪಾದಚಾರಿಗಳಿಗೆ ಮಾತ್ರ ಮುಕ್ತವಾಗಿರಲಿವೆ ಎಂಬ ವಿಶ್ವಾಸ ಮೂಡಿದೆ.




















