ಬಾಗ್ದಾದ್, ಜು.02 www.bengaluruwire.com: ಇರಾಕ್ ಇತಿಹಾಸದಲ್ಲೇ ಅತ್ಯಂತ ಬೃಹತ್ ಹಾಗೂ ಅಭೂತಪೂರ್ವ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ನಡೆದಿದ್ದು, ಇಡೀ ವಿಶ್ವವೇ ಬೆಚ್ಚಿಬೀಳುವಂತಹ ಆಘಾತಕಾರಿ ಸತ್ಯಗಳು ಹೊರಬಂದಿವೆ.
ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಸಿಡಿದೆದ್ದಿರುವ ಇರಾಕ್ ಸರ್ಕಾರ ನಡೆಸಿದ ಸರಣಿ ದಾಳಿಯಲ್ಲಿ, ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ, ನಗದು ಮತ್ತು ಬೇನಾಮಿ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋಪುರದಂತೆ ಜೋಡಿಸಿಟ್ಟಿದ್ದ ₹146 ಕೋಟಿ ನಗದು ಕ್ಯಾಶ್:
ಈ ಮಹಾ ಬೇಟೆಯಲ್ಲಿ ಅತ್ಯಂತ ಆಘಾತಕಾರಿ ಸಂಗತಿ ಎಂದರೆ, ದೇಶದ ಪ್ರಮುಖ ಸಂಸದೆ ಆಲಿಯಾ ನಾಸಿಫ್ (Alia Nassif) ಅವರ ಮನೆಯಲ್ಲೇ ಕೋಟ್ಯಂತರ ರೂಪಾಯಿ ನಗದು ಮತ್ತು ಕಣ್ಣು ಕೋರೈಸುವ ಅಕ್ರಮ ಸಂಪತ್ತು ಪತ್ತೆಯಾಗಿದೆ. ಅಧಿಕಾರಿಗಳು ಆಕೆಯ ನಿವಾಸದ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ 20 ಬಿಲಿಯನ್ ಇರಾಕಿ ದಿನಾರ್ (ಅಂದಾಜು 146 ರಿಂದ 148 ಕೋಟಿ ರೂಪಾಯಿ) ನಗದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಈ ಕಪ್ಪುಹಣವನ್ನು ಮನೆಯಲ್ಲಿ ಗೋಪುರದ ಮಾದರಿಯಲ್ಲಿ ಜೋಡಿಸಿಟ್ಟಿರುವುದು ತನಿಖಾಧಿಕಾರಿಗಳನ್ನೇ ದಂಗಾಗಿಸಿದೆ.

ಶುದ್ಧ ಚಿನ್ನದ ಒಳ ಉಡುಪು, ₹805 ಕೋಟಿಯ ಆಸ್ತಿ ಪತ್ರಗಳು ಜಪ್ತಿ:

ಇರಾಕ್ ಸಂಸದೆಯ ನಿವಾಸದಲ್ಲಿ ಪತ್ತೆಯಾದ ಮತ್ತೊಂದು ವಿಲಾಸಿ ಹಾಗೂ ವಿಚಿತ್ರ ಸಂಗತಿಯೆಂದರೆ, ಆಕೆ ಶುದ್ಧ ಚಿನ್ನದಿಂದಲೇ ತಯಾರಿಸಿದ ಒಳ ಉಡುಪನ್ನು ಹೊಂದಿದ್ದರು ಎನ್ನಲಾಗಿದೆ. ಇದರೊಂದಿಗೆ ಸುಮಾರು 805 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ರಗಳನ್ನು ಮತ್ತು ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಸಂಸದೆ ಆಲಿಯಾ ನಾಸಿಫ್ ಹಾಗೂ ಆಕೆಯ ಮಗನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಭಾಷಣ ಬಿಗಿಯುತ್ತಿದ್ದಾಕೆಯೇ ಈಗ ಲಾಕ್!:
ಬಂಧಿತ ಆಲಿಯಾ ನಾಸಿಫ್ ಈ ಹಿಂದೆ ಇರಾಕ್ನ ಮಾಜಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು ಮತ್ತು ಪ್ರಸ್ತುತ ‘ಸ್ಟೇಟ್ ಆಫ್ ಲಾ ಕೋಲಿಷನ್’ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಈಕೆ, ಈ ಹಿಂದೆ ಸಾರ್ವಜನಿಕ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಅಬ್ಬರದ ಭಾಷಣಗಳನ್ನು ಮಾಡಿ ಭಾರೀ ಖ್ಯಾತಿ ಗಳಿಸಿದ್ದರು. ಆದರೆ ಈಗ ಸ್ವತಃ ತಾನೇ ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರದ ಮಹಾಕೂಪದಲ್ಲಿ ಸಿಲುಕಿ ಜೈಲು ಸೇರಿರುವುದು ಇರಾಕ್ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಸಚಿವ ನೀಡಿದ ಸುಳಿವಿನಿಂದ ಸಿಕ್ಕಿಬಿದ್ದ ಜಾಲ:
ಇರಾಕ್ ಪ್ರಧಾನಿ ಅಲಿ ಅಲ್ ಜೈದಿ ಅವರ ನೇರ ನಿರ್ದೇಶನದ ಮೇರೆಗೆ ಈ ಇಡೀ ರಹಸ್ಯ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ತಿಂಗಳು ಭ್ರಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಇರಾಕ್ನ ಮಾಜಿ ಸಚಿವ ಅದ್ನಾನ್ ಅಲ್ ಜುಮೈಲಿ ನೀಡಿದ ಸ್ಪೋಟಕ ಮಾಹಿತಿ ಹಾಗೂ ಸುಳಿವುಗಳ ಆಧಾರದ ಮೇಲೆ ಈ ಸರಣಿ ದಾಳಿಗಳನ್ನು ನಡೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕೇವಲ ಆಲಿಯಾ ಮಾತ್ರವಲ್ಲದೆ, ಇರಾಕ್ನ ಹಲವಾರು ಸಂಸದರು ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಕಪ್ಪುಹಣದ ಬೇಟೆಯನ್ನು ಆಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದ್ದು, ಇನ್ನು ಹಲವು ರಾಜಕೀಯ ಮುಖಂಡರ ತಲೆದಂಡವಾಗುವ ಸಾಧ್ಯತೆಯಿದೆ.





















