ಬೆಂಗಳೂರು, ಜೂ.23 www.bengaluruwire.com: ಭಾರತದ ಸಿಲಿಕಾನ್ ವ್ಯಾಲಿ, ನವೋದ್ಯಮಗಳ ನೆಚ್ಚಿನ ತಾಣ ಎಂದೇ ಕರೆಯಲ್ಪಡುವ ಬೆಂಗಳೂರಿಗೆ ಇದು ಕೊಂಚ ನಿರಾಸೆಯ ಸುದ್ದಿ. ನವೀನ ತಂತ್ರಜ್ಞಾನದ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದ ‘ಬಯೋಕಂಪ್ಯೂಟ್’ (BioCompute) ಸ್ಟಾರ್ಟಪ್ ತನ್ನ ಕಾರ್ಯಾಚರಣೆಯನ್ನು ಬೆಂಗಳೂರಿನಿಂದ ಅಮೆರಿಕಾಗೆ (US) ಸಂಪೂರ್ಣವಾಗಿ ಸ್ಥಳಾಂತರಿಸುವುದಾಗಿ ಘೋಷಿಸಿದೆ.
“ಭಾರತ ಇನ್ನೂ ಸಿದ್ಧವಾಗಿಲ್ಲ” ಎಂದಿದ್ದೇಕೆ?:
ಬಯೋಕಂಪ್ಯೂಟ್ ಸಂಸ್ಥಾಪಕಿ ಅನಘಾ ರಾಜೇಶ್ (Anagha Rajesh) ಈ ನಿರ್ಧಾರವನ್ನು ಪ್ರಕಟಿಸಿದ್ದು, “ಈ ರೀತಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಬೆಳೆಸಲು ಭಾರತ ಇನ್ನೂ ಸಿದ್ಧವಾಗಿಲ್ಲ” ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಸಂಸ್ಥೆಯು ಜಗತ್ತಿನ ಮೊದಲ ಡಿಎನ್ಎ (DNA) ಡೇಟಾ ಸ್ಟೋರೇಜ್ ಚಿಪ್‌ಗಳನ್ನು ಅಭಿವೃದ್ಧಿಪಡಿಸುವ ಅಂತಿಮ ಹಂತದತ್ತ ಹೆಜ್ಜೆ ಇಡುತ್ತಿದೆ. ಇಂತಹ ಸಂಕೀರ್ಣ ತಂತ್ರಜ್ಞಾನದ ಸಂಶೋಧನೆಗೆ ಬೇಕಾದ ಅತ್ಯಾಧುನಿಕ ಮೂಲಸೌಕರ್ಯಗಳು ಮತ್ತು ಪೂರಕ ವ್ಯವಸ್ಥೆ ಭಾರತದಲ್ಲಿ ಕೊರತೆಯಿದೆ ಎಂಬುದನ್ನು ಅವರು ಪರೋಕ್ಷವಾಗಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಡಿಎನ್ಎ ಡೇಟಾ ಸ್ಟೋರೇಜ್ ತಂತ್ರಜ್ಞಾನ?

ಇದು ಭವಿಷ್ಯದ ಡೇಟಾ ಶೇಖರಣಾ ತಂತ್ರಜ್ಞಾನವಾಗಿದೆ. ಹಾರ್ಡ್ ಡಿಸ್ಕ್ ಗಳಿಗೆ ಬದಲಾಗಿ, ಡಿಎನ್ಎ ಅಣುಗಳ ಮೂಲಕ ಬೃಹತ್ ಪ್ರಮಾಣದ ಡೇಟಾವನ್ನು ಸುರಕ್ಷಿತವಾಗಿ ಶೇಖರಿಸಿಡುವ ಕ್ರಾಂತಿಕಾರಿ ಹೆಜ್ಜೆ ಇದಾಗಿದೆ.
ಈ ತಂತ್ರಜ್ಞಾನದ ಯಶಸ್ವಿ ಅಭಿವೃದ್ಧಿಗೆ ಅತ್ಯಾಧುನಿಕ ಲ್ಯಾಬೊರೇಟರಿಗಳು, ಸಂಶೋಧಕರು ಮತ್ತು ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯ ಅಗತ್ಯವಿದೆ.
ಟೆಕ್ ವಲಯದಲ್ಲಿ ಭಾರೀ ಚರ್ಚೆ:
ಬೆಂಗಳೂರು ಮೂಲದ ಸ್ಟಾರ್ಟಪ್ ಒಂದು ಜಾಗತಿಕ ಮಟ್ಟದ ಸಾಧನೆಗೆ ಕೈಹಾಕುವ ಹೊತ್ತಿಗೆ ಅಮೆರಿಕಾದತ್ತ ಮುಖ ಮಾಡಿರುವುದು ಭಾರತೀಯ ಟೆಕ್ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಭಾರತದಲ್ಲಿ ಡೀಪ್-ಟೆಕ್ (Deep-Tech) ಮತ್ತು ಬಯೋ-ಟೆಕ್ (Bio-Tech) ಸ್ಟಾರ್ಟಪ್‌ಗಳಿಗೆ ಅಗತ್ಯವಿರುವ ಬೆಂಬಲ ಮತ್ತು ಮೂಲಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವನ್ನು ಈ ಘಟನೆ ಎತ್ತಿತೋರಿಸಿದೆ.



















