ಬೆಂಗಳೂರು, ಜೂ.17 www.bengaluruwire.com: ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಅಧಿಕಾರಿಗಳು ಮತ್ತು ನೌಕರರಿಗೆ “ಕರ್ತವ್ಯ” (KAAMS) ಮೊಬೈಲ್ ಅಪ್ಲಿಕೇಶನ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಸೂಚಿಸಿದೆ. ಆದರೆ, ರಾಜ್ಯಾದ್ಯಂತ ಬರೋಬ್ಬರಿ 2,13,925 ಮಂದಿ ಸರ್ಕಾರಿ ನೌಕರರು ಇನ್ನೂ ಈ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಜೂ.04 ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯದರ್ಶಿಗಳ ಸಭೆಯಲ್ಲಿ, ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಜೂ.16 ರ ಅಂಕಿಅಂಶಗಳ ಪ್ರಕಾರ, ಒಟ್ಟು 4,77,960 ಸರ್ಕಾರಿ ನೌಕರರ ಪೈಕಿ 2,64,035 ಮಂದಿ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಉಳಿದ 2,13,925 ಅಧಿಕಾರಿ ಹಾಗೂ ನೌಕರರು ಕರ್ತವ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಅತಿ ಹೆಚ್ಚು ನೋಂದಾಯಿಸದ ನೌಕರರು ಬೆಂಗಳೂರು ನಗರ ಜಿಲ್ಲೆಯಲ್ಲಿದ್ದು (50,187), ನಂತರದ ಸ್ಥಾನಗಳಲ್ಲಿ ಮೈಸೂರು (12,483) ಹಾಗೂ ಬೆಳಗಾವಿ (12,424) ಜಿಲ್ಲೆಯಲ್ಲಿದ್ದಾರೆ.
ಜೂ.16 ರ ಒಂದು ದಿನದ ಅಂಕಿಅಂಶದಲ್ಲಿ ನೋಂದಾಯಿಸಿಕೊಂಡ ಒಟ್ಟಾರೆ 2,64,035 ಸರ್ಕಾರಿ ನೌಕರರ ಪೈಕಿ ಇಂದು ಕರ್ತವ್ಯಕ್ಕೆ ಹಾಜರಾದವರ ಸಂಖ್ಯೆ 2,29,625 ಆದರೆ ಕಚೇರಿ ಕೆಲಸಕ್ಕೆ ಗೈರುಹಾಜರಾದವರ ಸಂಖ್ಯೆ ಬರೋಬ್ಬರಿ 34,410 ಮಂದಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿರುವ ಮುಖ್ಯ ಕಾರ್ಯದರ್ಶಿಗಳು, ಆ್ಯಪ್‌ನಲ್ಲಿ ನೋಂದಾಯಿಸದ ನೌಕರರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ವೈಯಕ್ತಿಕವಾಗಿ ಗಮನಹರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು 7 ದಿನಗಳೊಳಗಾಗಿ ಸಲ್ಲಿಸುವಂತೆ ಗಡುವು ನೀಡಿದ್ದಾರೆ.




















