ಬೆಂಗಳೂರು, ಜೂ.06 www.bengaluruwire.com: ಸಿಲಿಕಾನ್ ಸಿಟಿ ಎಂಬ ಖ್ಯಾತಿಯ ಜೊತೆಗೆ ತನ್ನ ಹಳೆಯ ಹೆಮ್ಮೆಯಾದ ‘ಉದ್ಯಾನ ನಗರಿ’ (Garden City) ಬಿರುದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮಹತ್ವದ ಹೆಜ್ಜೆಯನ್ನಿಟ್ಟಿದೆ.
ನಗರದಲ್ಲಿ ಕಣ್ಮರೆಯಾಗುತ್ತಿರುವ ಹಸಿರು ಹೊದಿಕೆಯನ್ನು ಮರುಸ್ಥಾಪಿಸಲು ಹಾಗೂ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಬಿಡಿಎ ವತಿಯಿಂದ ಅಭಿವೃದ್ಧಿಪಡಿಸಲಾದ ‘ಗ್ರೀನ್ ಬೆಂಗಳೂರು’ (Green Bengaluru) ಅಧಿಕೃತ ಜಾಲತಾಣವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.
ಬಿಡಿಎ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರು ನೂತನ ಜಾಲತಾಣಕ್ಕೆ (https://greenbengalurubybda.in/) ಚಾಲನೆ ನೀಡಿದರು. ಇದೇ ವೇಳೆ ವಿಶ್ವ ಪರಿಸರ ದಿನದ ಅಂಗವಾಗಿ ಪ್ರಾಧಿಕಾರದ ಆವರಣದಲ್ಲಿ ಸಸಿಯೊಂದನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಈ ನೂತನ ಡಿಜಿಟಲ್ ಪ್ಲಾಟ್‌ಫಾರ್ಮ್ ಕೇವಲ ಮಾಹಿತಿಗಾಗಿ ಮಾತ್ರ ಸೀಮಿತವಾಗಿರದೆ, ನಗರದ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣೆಯ ಪ್ರಮುಖ ಆಡಳಿತಾತ್ಮಕ ಅಸ್ತ್ರವಾಗಿ ಕಾರ್ಯನಿರ್ವಹಿಸಲಿದೆ. ಬಿಡಿಎ ವ್ಯಾಪ್ತಿಯ ಪ್ರಮುಖ ಬಡಾವಣೆಗಳಾದ ಬನಶಂಕರಿ, ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಡಾ. ಶಿವರಾಮಕಾರಂತ ಬಡಾವಣೆಗಳಲ್ಲಿ ಪರಿಸರ ನಿಯಮಗಳನುಸಾರ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

’ಗ್ರೀನ್ ಬೆಂಗಳೂರು’ ಯೋಜನೆಯ ಪ್ರಮುಖ ಅಂಶಗಳು:
ಜಿಯೋ-ಟ್ಯಾಗಿಂಗ್ ಮತ್ತು ಡ್ರೋನ್ ನಿಗಾ: ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಹೊಸ ಬಡಾವಣೆಗಳು ಹಾಗೂ ಮುಕ್ತ ವಲಯಗಳಲ್ಲಿ ನೆಡಲಾಗುವ ಪ್ರತಿಯೊಂದು ಸಸಿಯನ್ನೂ ಜಿಯೋ-ಮ್ಯಾಪಿಂಗ್ (Geo-tagging) ಮಾಡಲಾಗುತ್ತದೆ. ಅಲ್ಲದೆ, ಡ್ರೋನ್ ಸಮೀಕ್ಷೆಗಳ ಮೂಲಕ ಸಸಿಗಳ ಬೆಳವಣಿಗೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಸಿಗಳ ದೀರ್ಘಕಾಲೀನ ಉಳಿವಿಗಾಗಿ 3 ವರ್ಷಗಳ ಸಮರ್ಪಿತ ನಿರ್ವಹಣಾ ಯೋಜನೆಯನ್ನು ರೂಪಿಸಲಾಗಿದೆ.
ಸಾರ್ವಜನಿಕರು ಹಾಗೂ ಎನ್‌ಜಿಒಗಳ ಸಹಭಾಗಿತ್ವ: ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಹೀಗಾಗಿ, ಸ್ಥಳೀಯ ನಿವಾಸಿಗಳು, ಸ್ವಯಂಸೇವಾ ಸಂಸ್ಥೆಗಳು (NGOs) ತಮ್ಮ ಬಡಾವಣೆಯ ಉದ್ಯಾನವನಗಳನ್ನು ದತ್ತು ಪಡೆದು ಪೋಷಿಸಲು ಈ ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮುಕ್ತ ಆಹ್ವಾನ: ಬಿಡಿಎ ವ್ಯಾಪ್ತಿಯ ಎಲ್ಲಾ ನಿವಾಸಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಐಟಿ ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಇಂದೇ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ನಡೆಯಲಿರುವ ಬೃಹತ್ ಸಸಿ ನೆಡುವ ಅಭಿಯಾನದ ಸಂಪೂರ್ಣ ವಿವರಗಳು ಇದರಲ್ಲಿ ಲಭ್ಯವಿರಲಿವೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮೇಜರ್ ಮಣಿವಣ್ಣನ್. ಪಿ. ಹಾಗೂ ಪ್ರಾಧಿಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಪರಿಸರ ಸಂರಕ್ಷಣೆಯ ಈ ಮಹತ್ವದ ಯೋಜನೆಗೆ ಸಾಕ್ಷಿಯಾದರು.

















