ಬೆಂಗಳೂರು, ಜೂ.05 www.bengaluruwire.com: ಹೈಕೋರ್ಟ್ ಹಾಗೂ ಲೋಕಾಯುಕ್ತ ಸಂಸ್ಥೆ ಎಷ್ಟೇ ಚಾಟಿ ಬೀಸಿದರೂ ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಸಂಸ್ಥೆ (BSWML) ಮಾತ್ರ ಇನ್ನೂ ಪಾಠ ಕಲಿತಿಲ್ಲ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸೂಕ್ತ ರೀತಿಯಲ್ಲಿ ನಿರ್ವಹಿಸದೇ ಇರುವುದರಿಂದ ದಿನದಿಂದ ದಿನಕ್ಕೆ ಬ್ಲಾಕ್ ಸ್ಪಾಟ್‌ಗಳು ಹೆಚ್ಚಾಗುತ್ತಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
ಲೋಕಾಯುಕ್ತ ಸಂಸ್ಥೆಯು ಕಾಲಕಾಲಕ್ಕೆ ಸೂಕ್ತ ಸೂಚನೆಗಳನ್ನು ನೀಡಿದ್ದರೂ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯ ನೇತೃತ್ವದಲ್ಲಿ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿಯಾಗುತ್ತಿರುವುದನ್ನು ಖುದ್ದು ಲೋಕಾಯುಕ್ತ ಸಂಸ್ಥೆಯೇ ಬೊಟ್ಟು ಮಾಡಿ ತೋರಿಸಿದೆ.

ಇದೀಗ ಪಾಲಿಕೆ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಪತ್ತೆಗೆ ಲೋಕಾಯುಕ್ತ ಸಂಸ್ಥೆ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಐದು ತಂಡಗಳನ್ನು ರಚಿಸಿದ್ದು, ಈ ತಂಡಗಳು ಜೂನ್ 05 ರಂದು ಬೆಳಿಗ್ಗೆ ಐದೂ ಪಾಲಿಕೆಗಳಿಗೆ ಭೇಟಿ ನೀಡಿ ತಪಾಸಣಾ ಕಾರ್ಯ ಕೈಗೊಂಡಿವೆ.

ಖುದ್ದು ಫೀಲ್ಡಿಗಿಳಿದ ಲೋಕಾಯುಕ್ತರು:
ಇದೇ ಸಂದರ್ಭದಲ್ಲಿ ಗೌರವಾನ್ವಿತ ಲೋಕಾಯುಕ್ತರು ಖುದ್ದು ಉತ್ತರ ನಗರಪಾಲಿಕೆಯ ಆರ್.ಟಿ. ನಗರ, ಬ್ಯಾಟರಾಯನಪುರ, ಆನಂದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸುಮಾರು ಆರು ಬ್ಲಾಕ್ ಸ್ಪಾಟ್‌ಗಳನ್ನು ಪತ್ತೆಹಚ್ಚಿದ್ದಾರೆ.

ಸ್ಥಳದಲ್ಲೇ ಹಾಜರಿದ್ದ ಜಿಬಿಎ ಬೆಂಗಳೂರು ಉತ್ತರ ನಗರ ಪಾಲಿಕೆಯ ಜಂಟಿ ಆಯುಕ್ತ ಮೋಯಿನ್, ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ಬಿಎಸ್‌ಡಬ್ಲ್ಯೂಎಂಎಲ್‌ನ ಸಿಇಒ ಕರೀಗೌಡ, ಮುಖ್ಯ ಕಾರ್ಯಾಚರಣಾಧಿಕಾರಿ ರಮಾಮಣಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಕೂಡಲೇ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜಕಾಲುವೆ ಸಮಸ್ಯೆಗೆ ತರಾಟೆ:
ಇದರ ಜೊತೆಗೆ 4ನೇ ಮುಖ್ಯ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ನಗರ ಮುಸ್ಲಿಂ ಎಜುಕೇಷನ್ ಸೊಸೈಟಿಯ ಎದುರುಗಡೆ ಪ್ರದೇಶದಲ್ಲಿ ಮಳೆ ಬಂದಾಗ ರಾಜಕಾಲುವೆಯ ನೀರು ಮನೆಗಳಿಗೆಲ್ಲಾ ನುಗ್ಗುತ್ತಿರುವ ಬಗ್ಗೆ ಗಮನಹರಿಸಿದ ಲೋಕಾಯುಕ್ತರು, ಕೂಡಲೇ ಇದನ್ನು ಸರಿಪಡಿಸಿ ವರದಿ ಸಲ್ಲಿಸುವಂತೆ ಕಾರ್ಯಪಾಲಕ ಇಂಜಿನಿಯರ್‌ಗೆ ತಾಕೀತು ಮಾಡಿದ್ದಾರೆ.
ಅಧಿಕಾರಿಗಳೇ ಎದುರುದಾರರು:
ಜಿ.ಬಿ.ಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಲು ಕಳುಹಿಸಿರುವ 5 ತಂಡಗಳು ನೀಡುವ ವರದಿ ಆಧರಿಸಿ ಲೋಕಾಯುಕ್ತರು ಮುಂದಿನ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳನ್ನು ಈ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಎದುರುದಾರನ್ನಾಗಿ (Respondents) ಸೇರ್ಪಡೆಗೊಳಿಸಿ ತನಿಖೆ ಮುಂದುವರಿಸಲು ಲೋಕಾಯುಕ್ತರು ಆದೇಶಿಸಿದ್ದಾರೆ.
















