ಬೆಂಗಳೂರು, ಜೂ.03 www.bengaluruwire.com: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಆರಂಭವಾಗಿದೆ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವಾಲಯ ಹಾಗೂ ವಿವಿಧ ಸಲಹೆಗಾರರ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬರೋಬ್ಬರಿ 371 ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಮುಕ್ತಗೊಳಿಸಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಜೂನ್ 03 ರಂದು ಅಧಿಕೃತ ಆದೇಶ ಹೊರಡಿಸಿದೆ.
ಸಂವಿಧಾನದ ನಿಯಮಾನುಸಾರ ಕ್ರಮ:
ಭಾರತ ಸಂವಿಧಾನದ ಅನುಚ್ಛೇಧ 164(1) ರನ್ವಯ ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿ, ಮೇ 29 ರಂದು ಸಚಿವ ಸಂಪುಟವನ್ನು ವಿಸರ್ಜಿಸಿದ್ದರು. ಸಂಪುಟ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯ, ಆಪ್ತ ಶಾಖೆ ಹಾಗೂ ನವದೆಹಲಿಯ ವಿಶೇಷ ಪ್ರತಿನಿಧಿಗಳ ಕಚೇರಿಗಳಲ್ಲಿ ನಿಯೋಜನೆ, ಒಪ್ಪಂದ ಮತ್ತು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲಾಗಿದೆ.

ಯಾವ್ಯಾವ ವಿಭಾಗದಿಂದ ಎಷ್ಟು ಸಿಬ್ಬಂದಿ ಕಾರ್ಯಮುಕ್ತ?:
ಆದೇಶದ ಅನುಬಂಧದ ಪ್ರಕಾರ ಒಟ್ಟಾರೆ 371 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅವರ ಮೂಲ ಇಲಾಖೆಗಳಿಗೆ ಹಿಂತಿರುಗಿಸಲಾಗಿದೆ ಅಥವಾ ಗುತ್ತಿಗೆಯಿಂದ ಮುಕ್ತಗೊಳಿಸಲಾಗಿದೆ.
ಮುಖ್ಯಮಂತ್ರಿಗಳ ಸಚಿವಾಲಯ (ಗ್ರೂಪ್-ಬಿ): 4 ಅಧಿಕಾರಿಗಳು
ಮುಖ್ಯಮಂತ್ರಿಗಳ ಸಚಿವಾಲಯ (ಗ್ರೂಪ್-ಸಿ): 212 ಸಿಬ್ಬಂದಿ
ವಾಹನ ಚಾಲಕರು: 16 ಸಿಬ್ಬಂದಿ
ಗ್ರೂಪ್-ಡಿ ನೌಕರರು:73 ಸಿಬ್ಬಂದಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಪ್ತ ಶಾಖೆ: 7 ಸಿಬ್ಬಂದಿ
ಮಾಧ್ಯಮ ಸಲಹೆಗಾರರ ಆಪ್ತ ಶಾಖೆ: 9 ಸಿಬ್ಬಂದಿ
ಮುಖ್ಯ ಸಲಹೆಗಾರರ ಆಪ್ತ ಶಾಖೆ: 9 ಸಿಬ್ಬಂದಿ ಕಾನೂನು ಸಲಹೆಗಾರರ ಆಪ್ತ ಶಾಖೆ: 9 ಸಿಬ್ಬಂದಿ
ಗೌರವ ವೈದ್ಯಕೀಯ ಸಲಹೆಗಾರರ ಆಪ್ತ ಶಾಖೆ: 3 ಸಿಬ್ಬಂದಿ
ವಿಶೇಷ ಪ್ರತಿನಿಧಿ (ಟಿ.ಬಿ.ಜಯಚಂದ್ರ) ಕಚೇರಿ, ನವದೆಹಲಿ: 10 ಸಿಬ್ಬಂದಿ
ವಿಶೇಷ ಪ್ರತಿನಿಧಿ (ಪ್ರಕಾಶ್ ಹುಕ್ಕೇರಿ) ಕಚೇರಿ, ನವದೆಹಲಿ: 11 ಸಿಬ್ಬಂದಿ
ಆರ್ಥಿಕ ಸಲಹೆಗಾರರ ಆಪ್ತ ಶಾಖೆ: 8 ಸಿಬ್ಬಂದಿ
ಸರ್ಕಾರಿ ವಸ್ತುಗಳ ಮರುಪಾವತಿಗೆ ಕಟ್ಟುನಿಟ್ಟಿನ ಸೂಚನೆ:
ಕಾರ್ಯಮುಕ್ತಗೊಂಡಿರುವ ಎಲ್ಲ ಸಿಬ್ಬಂದಿಗಳಿಗೆ ಕಚೇರಿ ಕಡತಗಳು, ಇ-ಆಫೀಸ್ ಸ್ವೀಕೃತಿಗಳು, ಲ್ಯಾಪ್‌ಟಾಪ್, ಪೀಠೋಪಕರಣ, ಗುರುತಿನ ಚೀಟಿ ಹಾಗೂ ವಾಹನ ಪಾಸ್‌ಗಳನ್ನು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಿಂದಿರುಗಿಸುವಂತೆ ಸೂಚಿಸಲಾಗಿದೆ.
ಯಾವುದೇ ಕಡತ ಅಥವಾ ವಸ್ತುಗಳು ಕಳೆದುಹೋದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಆಪ್ತ ಕಾರ್ಯದರ್ಶಿಗಳು ಹಾಗೂ ಅಧೀನ ಕಾರ್ಯದರ್ಶಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಿಪಿಎಆರ್ ಆದೇಶದಲ್ಲಿ ಖಡಕ್ ಎಚ್ಚರಿಕೆ ನೀಡಲಾಗಿದೆ.

















