ಬೆಂಗಳೂರು, ಜೂ.03 www.bengaluruwire.com: ಮುಂಗಾರು ಆರಂಭವಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವಾಗಲೇ, ಬೆಂಬಲ ಬೆಲೆ (MSP) ಯೋಜನೆಯಡಿ ರಾಗಿ ಮಾರಾಟ ಮಾಡಿದ ರೈತರಿಗೆ ರಾಜ್ಯ ಸರ್ಕಾರ ಬರೋಬ್ಬರಿ ₹1,611 ಕೋಟಿ ಬಾಕಿ ಉಳಿಸಿಕೊಂಡಿದೆ.
ರೈತರ ಬೆವರಿನ ಹಣವನ್ನು ನೀಡಲು ಸತಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದು, ತಕ್ಷಣವೇ ಹಣ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಂಗಾರು ಆರಂಭವಾದರೂ ರೈತರ ಕೈಸೇರದ ಕಾಸು:

”ಒಂದೆಡೆ ಮುಂಗಾರು ಆರಂಭವಾಗಿದೆ. ರೈತರು ಹೊಲ ಉಳುಮೆ ಮಾಡಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಆದರೆ ಮತ್ತೊಂದೆಡೆ, ತಮ್ಮದೇ ಬೆವರಿನ ದುಡಿಮೆಯ ಹಣಕ್ಕಾಗಿ ಕರ್ನಾಟಕದ ಅನ್ನದಾತರು ಸರ್ಕಾರದ ಬಾಗಿಲು ತಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಈಗ ಭೂಮಿ ಹಸನು ಮಾಡಲು, ಬಿತ್ತನೆ ಬೀಜ ಖರೀದಿಸಲು, ರಸಗೊಬ್ಬರ ತರಲು ಸಾಲದ ಮೊರೆ ಹೋಗುವಂತಾಗಿದೆ. ಇದಕ್ಕೆ ಕಾರಣ ಪ್ರಕೃತಿಯಲ್ಲ, ಬರವೂ ಅಲ್ಲ, ಕಾಂಗ್ರೆಸ್ ಸರ್ಕಾರದ ದಿವಾಳಿ ಆಡಳಿತ” ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಬಾಕಿ? (ಜಿಲ್ಲಾವಾರು ವಿವರ):
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿದ 1 ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಪಾವತಿಯಾಗಿಲ್ಲ. ಬಾಕಿ ಉಳಿಸಿಕೊಂಡಿರುವ ಮೊತ್ತದ ಜಿಲ್ಲಾವಾರು ವಿವರಗಳನ್ನು ಆರ್. ಅಶೋಕ್ ಹಂಚಿಕೊಂಡಿದ್ದಾರೆ:
ತುಮಕೂರು: 34,543 ರೈತರಿಗೆ ₹370 ಕೋಟಿ ಬಾಕಿ
ಹಾಸನ: 29,090 ರೈತರಿಗೆ ₹320 ಕೋಟಿ ಬಾಕಿ
ಮೈಸೂರು: 16,659 ರೈತರಿಗೆ ₹179 ಕೋಟಿ ಬಾಕಿ
ಚಿಕ್ಕಮಗಳೂರು: 14,297 ರೈತರಿಗೆ ₹169 ಕೋಟಿ ಬಾಕಿ
ಮಂಡ್ಯ: 11,521 ರೈತರಿಗೆ ₹126 ಕೋಟಿ ಬಾಕಿ
ಖಜಾನೆ ಖಾಲಿಯೇ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ:
”ಅದ್ಧೂರಿ ಸಾಧನಾ ಸಮಾವೇಶಗಳಿಗೆ ನೂರಾರು ಕೋಟಿ ಇದೆ. ಖಾಸಗಿ ವಿಮಾನಗಳಲ್ಲಿ ದೆಹಲಿ ಪ್ರಯಾಣಕ್ಕೆ ಹಣ ಇದೆ. ಹೈಕಮಾಂಡ್ ನಾಯಕರ ಓಲೈಕೆಗೆ ಹಣ ಇದೆ. ಆದರೆ ದೇಶಕ್ಕೆ ಅನ್ನ ಕೊಡುವ ರೈತನಿಗೆ ಅವನ ಬೆವರಿನ ಹಣ ಕೊಡಲು ಸರ್ಕಾರದ ಖಜಾನೆ ಖಾಲಿಯೇ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಬೀದಿಗಿಳಿದು ಹೋರಾಟದ ಎಚ್ಚರಿಕೆ:
”ರೈತರ ಕಷ್ಟದ ಹಣವನ್ನು ತಡೆಹಿಡಿದು, ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರಕ್ಕೆ ರೈತರ ಶಾಪ ತಟ್ಟದೆ ಬಿಡದು. ತಕ್ಷಣವೇ ₹1,611 ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜ್ಯದ ರೈತರೊಂದಿಗೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಅನ್ನದಾತನಿಗೆ ಅನ್ಯಾಯ ಮಾಡಿದ ಯಾವ ಸರ್ಕಾರವೂ ಉಳಿದ ಉದಾಹರಣೆ ಇತಿಹಾಸದಲ್ಲಿಲ್ಲ. ಈ ಕಾಂಗ್ರೆಸ್ ಸರ್ಕಾರವೂ ಅದಕ್ಕೆ ಹೊರತಾಗುವುದಿಲ್ಲ,” ಎಂದು ಆರ್. ಅಶೋಕ್ ಎಚ್ಚರಿಕೆ ರವಾನಿಸಿದ್ದಾರೆ.

















