ಬೆಂಗಳೂರು, ಮೇ.18 www.bengaluruwire.com: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮೇ 20ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕೆಎಸ್‌ಆರ್‌ಟಿಸಿ (KSRTC) ಆಡಳಿತ ಮಂಡಳಿ ಕಡಕ್ ಪ್ರತಿಕ್ರಿಯೆ ನೀಡಿದೆ.
ಮುಷ್ಕರದ ಅವಧಿಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ವಿರುದ್ಧ ‘ಕೆಲಸ ಮಾಡದಿದ್ದಾಗ ವೇತನವಿಲ್ಲ’ (No Work, No Pay) ಎಂಬ ತತ್ವದಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ (IAS) ಅವರು ಎಚ್ಚರಿಸಿದ್ದಾರೆ.
ಅಗತ್ಯ ಸೇವೆಗಳ ಕಾಯ್ದೆ ಜಾರಿ: ಮುಷ್ಕರ ಕಾನೂನುಬಾಹಿರ
ರಾಜ್ಯದ ಜನಸಾಮಾನ್ಯರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ನಿಗಮದ ಮುಖ್ಯ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ರಸ್ತೆ ಸಾರಿಗೆ ಸೇವೆಯನ್ನು ‘ಕರ್ನಾಟಕ ಅಗತ್ಯ ಸೇವೆಗಳ ಕಾಯ್ದೆ-2013’ರ ಅಡಿಯಲ್ಲಿ ತಂದಿದ್ದು, ನಾಲ್ಕೂ ಸಾರಿಗೆ ನಿಗಮಗಳನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂದು ಘೋಷಿಸಿದೆ. ಸದ್ಯ ನೌಕರರ ಬೇಡಿಕೆಗಳ ಕುರಿತಾದ ವಿವಾದವು ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿ ಇರುವುದರಿಂದ, ಈ ಹಂತದಲ್ಲಿ ಮುಷ್ಕರ ಹೂಡುವುದು ಕಾನೂನುಬಾಹಿರ ಎಂದು ನಿಗಮ ಸ್ಪಷ್ಟಪಡಿಸಿದೆ.

ರಜೆ ರದ್ದು, ದಿನವಹಿ ವೇತನ ಕಡಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ
ಸಾರ್ವಜನಿಕರ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗದಂತೆ ತಡೆಯಲು ನಿಗಮವು ಮುಂಜಾಗ್ರತಾ ಕ್ರಮವಾಗಿ ಕೆಳಗಿನ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ:
ರಜೆಗಳ ರದ್ದು: ಮೇ 20ರಿಂದ ಜಾರಿಗೆ ಬರುವಂತೆ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನೌಕರರಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡುವಂತಿಲ್ಲ. ಅಗತ್ಯ ಬಿದ್ದರೆ ವಾರದ ರಜೆಯನ್ನೂ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು.
ವೇತನ ಕಡಿತ: ಮುಷ್ಕರದಲ್ಲಿ ಭಾಗವಹಿಸಿ ಗೈರಾಗುವ ನೌಕರರ ಪಟ್ಟಿಯನ್ನು ದಿನವಹಿ, ಘಟಕವಾರು ಸಿದ್ಧಪಡಿಸಿ ಅಂದಿನ ವೇತನವನ್ನು ಕಡಿತಗೊಳಿಸಲಾಗುವುದು.
ಕೋರ್ಟ್ ಆದೇಶದ ಅಡಿ ಕ್ರಮ: ಉನ್ನತ ನ್ಯಾಯಾಲಯದ ಆದೇಶದ ಅನ್ವಯ ಅನಧಿಕೃತವಾಗಿ ಗೈರುಹಾಜರಾಗುವ ನೌಕರರ ವಿರುದ್ಧ ಕೇವಲ ವೇತನ ಕಡಿತ ಮಾತ್ರವಲ್ಲದೆ, ಕಠಿಣ ಶಿಸ್ತು ಕ್ರಮವನ್ನೂ ಜರುಗಿಸಲಾಗುವುದು.
ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಮುಷ್ಕರಕ್ಕೆ ಪ್ರಚೋದನೆ ನೀಡದೆ, ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ದೈನಂದಿನ ಕರ್ತವ್ಯಕ್ಕೆ ಹಾಜರಾಗಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.























