ಬೆಂಗಳೂರು, ಮೇ.04 www.bengaluruwire.com: ಭಾರತದ ಸಾಹಸ ಕ್ರೀಡಾ ಇತಿಹಾಸದಲ್ಲಿ ಸುರ್ಣಾಕ್ಷರಗಳಲ್ಲಿ ಬರೆಯುವಂತಹ ಅಪ್ರತಿಮ ಸಾಧನೆಯೊಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನಡೆದಿದೆ.
ಸಮುದ್ರದ ಅಲೆಗಳ ಅಬ್ಬರದ ನಡುವೆ, ನೀರಿನ ಆಳದಲ್ಲಿ ಭಾರತದ ಬೃಹತ್ ರಾಷ್ಟ್ರಧ್ವಜವನ್ನು ಅನಾವರಣಗೊಳಿಸುವ ಮೂಲಕ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದೆ. ಈ ಜಾಗತಿಕ ದಾಖಲೆಯಲ್ಲಿ ಬೆಂಗಳೂರಿನ ಸಾಹಸ ಕ್ರೀಡಾ ತಜ್ಞ ಶರತ್ ಆರ್. ಅಶೋಕ್ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನಭದಿಂದ ಜಲದವರೆಗೆ ಶರತ್ ಸಾಹಸ ಗಾಥೆ:
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರರಾಗಿರುವ ಶರತ್ ಅಶೋಕ್, ಕೇವಲ ರಾಜಕೀಯ ಹಿನ್ನೆಲೆಯ ಗುರುತಿಗೆ ಸೀಮಿತವಾಗದೆ ಸಾಹಸ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾದ ಇವರು, ಕಳೆದ ಒಂದು ದಶಕದಿಂದ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಪ್ರಮಾಣೀಕೃತ ‘ಡೈವ್ ಮಾಸ್ಟರ್’ ಆಗಿರುವ ಶರತ್, ಪ್ಯಾರಾಗ್ಲೈಡಿಂಗ್, ಪ್ಯಾರಾಮೋಟರ್ ಪೈಲಟ್ ಮತ್ತು ಮೊಟೊಕ್ರಾಸ್‌ನಲ್ಲೂ ಪರಿಣತಿ ಹೊಂದಿದ್ದಾರೆ.

ಗಿನ್ನೆಸ್ ದಾಖಲೆಯ ಮೈಲಿಗಲ್ಲು:
ಮೇ 2ರಂದು ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ದೇಶದ ವಿವಿಧ ಭಾಗಗಳ ಸುಮಾರು 200ಕ್ಕೂ ಹೆಚ್ಚು ನುರಿತ ಸ್ಕೂಬಾ ಡೈವರ್‌ಗಳು ಭಾಗವಹಿಸಿದ್ದರು. ಅಂಡಮಾನ್ ಆಡಳಿತ ಮತ್ತು ಭಾರತೀಯ ರಕ್ಷಣಾ ಪಡೆಗಳ ಸಹಯೋಗದಲ್ಲಿ, ಸಮುದ್ರದಾಳದಲ್ಲಿ 60×40 ಮೀಟರ್ (2,400 ಚದರ ಮೀಟರ್) ವಿಸ್ತೀರ್ಣದ ಬೃಹತ್ ತ್ರಿವರ್ಣ ಧ್ವಜವನ್ನು ಅರಳಿಸಲಾಯಿತು. ನೀರಿನ ತೀವ್ರ ಒತ್ತಡದ ನಡುವೆಯೂ ನಡೆದ ಈ ಸಾಹಸವನ್ನು ಗುರುತಿಸಿ, ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರು ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರ ನೀಡಿ ತಂಡವನ್ನು ಗೌರವಿಸಿದ್ದಾರೆ.
”ನಮ್ಮ ತ್ರಿವರ್ಣ ಧ್ವಜವು 140 ಕೋಟಿ ಭಾರತೀಯರ ಶಕ್ತಿ ಮತ್ತು ಏಕತೆಯ ಪ್ರತೀಕ. ಅಲೆಗಳ ಅಂತರಾಳದಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದ ಆ ಕ್ಷಣ ನನ್ನ ಬದುಕಿನ ಅತ್ಯಂತ ಗೌರವದ ಸಂದರ್ಭ,” ಎಂದು ಶರತ್ ಅಶೋಕ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಕಾಳಜಿಯಲ್ಲೂ ತೊಡಗಿಸಿಕೊಂಡಿರುವ ಶರತ್ ಅವರ ಈ ಸಾಧನೆ ಇಂದು ರಾಜ್ಯದ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.




















