ಬೆಂಗಳೂರು, ಮೇ.01 www.bengaluruwire.com: ಸುಪ್ರೀಂ ಕೋರ್ಟ್‌ನಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಭಾರತದ ಸರ್ವೋಚ್ಚ ನ್ಯಾಯಾಲಯವು ಇದೇ ಮೊದಲ ಬಾರಿಗೆ ‘ಸಮಾಧಾನ ಸಮಾರೋಹ-2026’ ಎಂಬ ವಿಶೇಷ ಲೋಕ ಅದಾಲತ್ ಆಯೋಜಿಸಿದೆ.
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 4,328 ಪ್ರಕರಣಗಳನ್ನು ಈ ಸಂಧಾನ ಪ್ರಕ್ರಿಯೆಗಾಗಿ ಗುರುತಿಸಲಾಗಿದ್ದು, ಆಗಸ್ಟ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಸಿವರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಈ ವಿಶೇಷ ಅದಾಲತ್‌ನ ಅಡಿಯಲ್ಲಿ ಸಾರ್ವಜನಿಕರು ದೆಹಲಿಗೆ ಅಲೆಯುವ ಅಗತ್ಯವಿಲ್ಲದೆ, ತಮ್ಮ ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರಗಳಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಜಿಲ್ಲಾವಾರು ಪ್ರಕರಣಗಳ ಪಟ್ಟಿ: ಬೆಂಗಳೂರಿಗೆ ಮೊದಲ ಸ್ಥಾನ

ರಾಜ್ಯದಲ್ಲಿ ಒಟ್ಟು 4,328 ಪ್ರಕರಣಗಳನ್ನು ಗುರುತಿಸಲಾಗಿದ್ದು, ಜಿಲ್ಲಾವಾರು ವಿವರ ಹೀಗಿದೆ:
ಬೆಂಗಳೂರು ನಗರ: 1,245 (ಅತಿ ಹೆಚ್ಚು)
ಬೆಳಗಾವಿ: 517
ಕಲಬುರಗಿ: 269
ವಿಜಯಪುರ: 213
ಧಾರವಾಡ: 188
ಬಾಕಿ ಜಿಲ್ಲೆಗಳಲ್ಲಿ ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಕರಣಗಳು ಸೇರಿವೆ. ಇವುಗಳಲ್ಲಿ 937 ಪ್ರಕರಣಗಳಲ್ಲಿ ಸರ್ಕಾರವೇ ಒಂದು ಪಕ್ಷವಾಗಿದೆ.
ಯಾವೆಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ?
ಈ ಲೋಕ ಅದಾಲತ್‌ನಲ್ಲಿ ಮುಖ್ಯವಾಗಿ ಈ ಕೆಳಗಿನ ವಿವಾದಗಳನ್ನು ಕೈಗೆತ್ತಿಕೊಳ್ಳಲಾಗುವುದು:
– ಬ್ಯಾಂಕಿಂಗ್ ಮತ್ತು ವಿಮೆ ಸಂಬಂಧಿತ ವಿವಾದಗಳು.
– ಮೋಟಾರು ಅಪಘಾತ ಪರಿಹಾರ (MACT) ಪ್ರಕರಣಗಳು.
– ಕೌಟುಂಬಿಕ ಮತ್ತು ವೈವಾಹಿಕ ಕಲಹಗಳು.
– ಭೂಸ್ವಾಧೀನ, ರೇರಾ (RERA) ಮತ್ತು ಗ್ರಾಹಕ ವ್ಯಾಜ್ಯಗಳು.
– ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು (ರಾಜಿ ಮಾಡಿಕೊಳ್ಳಬಹುದಾದವು).
ನೋಂದಣಿ ಮಾಡಿಕೊಳ್ಳುವುದು ಹೇಗೆ?:
ಆಸಕ್ತ ಕಕ್ಷಿದಾರರು ಅಥವಾ ವಕೀಲರು ಮೇ 31, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಲಿಂಕ್: https://forms.gle/jqxefqF4BCWzukoP6 ಹೆಚ್ಚಿನ ಮಾಹಿತಿಗಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ 15100 ಗೆ ಕರೆ ಮಾಡಬಹುದು.



















