ಬೆಂಗಳೂರು, ಏ.29 www.bengaluruwire.com: ಬೇಸಿಗೆ ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿಗೆ ಬುಧವಾರ ಸಂಜೆ ವರುಣ ತಂಪು ನೀಡುವ ಬದಲು ಮೃತ್ಯುವಾಗಿ ಎರಗಿದ್ದಾನೆ. ಕೇವಲ 30 ನಿಮಿಷಗಳ ಕಾಲ ಅಬ್ಬರಿಸಿದ ಭೀಕರ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಸಾರ್ವಜನಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ದುರಂತದ ವಿವರ:ನಗರದಲ್ಲಿ ಸಂಜೆ ಇದ್ದಕ್ಕಿದ್ದಂತೆ ಶುರುವಾದ ಬಿರುಗಾಳಿ ಸಹಿತ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದವು. ಈ ವೇಳೆ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದ ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಮೇಲೆ ಗೋಡೆ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳ ಅಡಿ ಸಿಲುಕಿದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ವ್ಯಾಪಾರ ನಂಬಿ ಬಂದಿದ್ದ ಕುಟುಂಬಗಳ ಪುಟ್ಟ ಮಕ್ಕಳೂ ಸೇರಿರುವುದು ಇಡೀ ನಗರವನ್ನು ಕಂಬನಿ ಮಿಡಿಯುವಂತೆ ಮಾಡಿದೆ.

ಸ್ಥಳಕ್ಕೆ ಸಿಎಂ ಹಾಗೂ ಡಿಸಿಎಂ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ
ಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳಕ್ಕೆ ದಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, ಘಟನೆಗೆ ಪಾಲಿಕೆಯ ನಿರ್ಲಕ್ಷ್ಯವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಜೆಸಿಬಿ ಮೂಲಕ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸ್ತಬ್ಧವಾದ ಸಂಚಾರ:ಈ ಮಳೆಯ ಆರ್ಭಟಕ್ಕೆ ಶೇಷಾದ್ರಿಪುರಂನ ನಾಗಪ್ಪ ರಸ್ತೆ, ರಿಚ್ಮಂಡ್ ಸರ್ಕಲ್ ಮತ್ತು ಇನ್ಫ್ಯಾಂಟ್ರಿ ರಸ್ತೆಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ. ರಸ್ತೆಗಳು ಕೆರೆಗಳಂತಾಗಿದ್ದು, ನೂರಾರು ವಾಹನಗಳು ಮಳೆ ನೀರಿನಲ್ಲಿ ಅರ್ಧದಷ್ಟು ಮುಳುಗಿದ್ದವು. ಮಲ್ಲೇಶ್ವರಂ ಮತ್ತು ಮೆಜೆಸ್ಟಿಕ್ ಭಾಗಗಳಲ್ಲಿ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹಳೆಯ ಕಟ್ಟಡಗಳ ಬಗ್ಗೆ ಬಿಬಿಎಂಪಿ ವಹಿಸಿರುವ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ನಗರದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ (TRPS) ಪ್ರಮುಖ ರಸ್ತೆಗಳಲ್ಲಿ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಆ ವಿವರಗಳು ಈ ಕೆಳಗಿನಂತಿವೆ:
- ಶೇಷಾದ್ರಿಪುರ ಮತ್ತು ವಿಜಯನಗರ: ಶೇಷಾದ್ರಿಪುರದ ಪ್ರೆಸಿಡೆಂಟ್ ಹೋಟೆಲ್ ಬಳಿ ಹಾಗೂ ವಿಜಯನಗರದ ಮೋದಿ ರಸ್ತೆಯಲ್ಲಿ ಬೃಹತ್ ಮರಗಳು ಉರುಳಿ ಬಿದ್ದಿವೆ.
- ಜಯನಗರ ಮತ್ತು ಜೆ.ಪಿ. ನಗರ: ಜಯನಗರ 46ನೇ ಕ್ರಾಸ್ ಹಾಗೂ ಜೆ.ಪಿ. ನಗರದ 5ನೇ ಮುಖ್ಯರಸ್ತೆಯಲ್ಲಿ ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ.
- ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್: ಅಲಿ ಅಸ್ಕರ್ ರಸ್ತೆ/ಕ್ವೀನ್ಸ್ ಸರ್ಕಲ್ ಹಾಗೂ ಹೈಗ್ರೌಂಡ್ಸ್ ವ್ಯಾಪ್ತಿಯ ಕಲ್ಪನಾ ಜಂಕ್ಷನ್ ಬಳಿ ಮರಗಳು ಧರೆಗುರುಳಿವೆ.
- ಕೇಂದ್ರ ಭಾಗದ ರಸ್ತೆಗಳು: ಉಪ್ಪಾರಪೇಟೆಯ ಕೆ.ಜಿ. ರಸ್ತೆ ಮತ್ತು ಹಲಸೂರು ಗೇಟ್ ವ್ಯಾಪ್ತಿಯ ಲಾಲ್ಬಾಗ್ ರಸ್ತೆಯಲ್ಲಿ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
- ಇತರೆ ಪ್ರದೇಶಗಳು: * ಆರ್.ಟಿ. ನಗರದ ಹಳೆ ಉದಯ ಟಿವಿ ಜಂಕ್ಷನ್.
- ಚಾಮರಾಜಪೇಟೆಯ ಬಿನ್ನಿಮಿಲ್ ರಸ್ತೆ.
- ವಿಲ್ಸನ್ ಗಾರ್ಡನ್ನ ಸಿದ್ದಯ್ಯ ರಸ್ತೆ.
- ಸದಾಶಿವನಗರದ ಅರಮನೆ ರಸ್ತೆ (ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ).
- ಮಿಕೋ ಲೇಔಟ್ನ ಬಿಳೇಕಳ್ಳಿಯ ಸೋಮೇಶ್ವರ ದೇವಸ್ಥಾನದ ಹತ್ತಿರ.
ಒಟ್ಟಾರೆಯಾಗಿ ಬೆಂಗಳೂರಿನ 50ಕ್ಕೂ ಹೆಚ್ಚು ಕಡೆಗಳಲ್ಲಿ ಮರ ಬಿದ್ದ ಘಟನೆಗಳು ನಡೆದಿರುವ ಬಗ್ಗೆ ಜಿಬಿಎ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್ ನಲ್ಲಿ ದೂರು ದಾಖಲಾಗಿವೆ.




















