ಬೆಂಗಳೂರು, ಏ.19 www.bengaluruwire.com: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ ಪ್ರತಿಷ್ಠಿತ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ 1 ರಿಂದ 9ನೇ ಬ್ಲಾಕ್‌ಗಳ ನಿವಾಸಿಗಳು ಇದೀಗ ಆಡಳಿತಾತ್ಮಕ ಗೊಂದಲಕ್ಕೆ ಸಿಲುಕಿದ್ದಾರೆ.
ಬಡಾವಣೆಯು ಅಧಿಕೃತವಾಗಿ ನೂತನ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹಸ್ತಾಂತರವಾಗಿದ್ದರೂ, ಆಸ್ತಿ ತೆರಿಗೆ ಪಾವತಿಸಲು ತಾಂತ್ರಿಕ ವ್ಯವಸ್ಥೆ ಕಲ್ಪಿಸದ ಕಾರಣ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ರಿಯಾಯಿತಿ ಕೈತಪ್ಪುವ ಭೀತಿ:
ಪ್ರತಿ ಆರ್ಥಿಕ ವರ್ಷದ ಏಪ್ರಿಲ್ ತಿಂಗಳೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಸರ್ಕಾರ ಶೇ.5ರಷ್ಟು ರಿಯಾಯಿತಿ ನೀಡುತ್ತದೆ. ಆದರೆ, ಸರ್.ಎಂ.ವಿ. ಬಡಾವಣೆಯ ಸುಮಾರು 20,000 ನಿವೇಶನದಾರರು ಈ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಬಿಡಿಎ ವೆಬ್‌ಸೈಟ್‌ನಲ್ಲಿ ತೆರಿಗೆ ಸ್ವೀಕರಿಸುತ್ತಿಲ್ಲ, ಇತ್ತ ಜಿಬಿಎ ಪೋರ್ಟಲ್‌ನಲ್ಲಿ ಈ ಬಡಾವಣೆಯ ವಿವರಗಳು ಇನ್ನೂ ಅಪ್‌ಡೇಟ್ ಆಗಿಲ್ಲ.

ಪ್ರಾಧಿಕಾರಗಳ ವಿಭಿನ್ನ ರಾಗ:

ಈ ಕುರಿತು ಬಿಡಿಎ ಆಯುಕ್ತರಿಗೆ ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಕ್ಷೇಮಾಭಿವೃದ್ಧಿ ಸಂಘವು ತಕ್ಷಣ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದೆ. ಜಿಬಿಎ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಬಿಡಿಎ ಬಡಾವಣೆಗಳನ್ನು ಆನ್-ಬೋರ್ಡ್ ಮಾಡಲು ಇನ್ನೂ 25-30 ದಿನಗಳ ಕಾಲಾವಕಾಶ ಬೇಕೆಂದು ತಿಳಿಸಿದ್ದಾರೆ. ಆದರೆ ಬಿಡಿಎ ನಾಗರಿಕ ಸಹಾಯ ಕೇಂದ್ರವು ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ತೆರಿಗೆ ಪಾವತಿಸಬಹುದು ಎಂದು ಭರವಸೆ ನೀಡಿದೆ. ಈ ಪರಸ್ಪರ ವಿರೋಧಾಭಾಸದ ಹೇಳಿಕೆಗಳು ನಿವಾಸಿಗಳಲ್ಲಿ ಗೊಂದಲ ಮೂಡಿಸಿವೆ.
ಸರ್.ಎಂ.ವಿ. ಸಂಘದ ಆಗ್ರಹ:
“ಸಹಸ್ರಾರು ನಿವೇಶನದಾರರು ಪ್ರತಿನಿತ್ಯ ಸಂಘಕ್ಕೆ ಬಂದು ತೆರಿಗೆ ಎಲ್ಲಿ ಪಾವತಿಸಬೇಕೆಂದು ವಿಚಾರಿಸುತ್ತಿದ್ದಾರೆ. ಅಧಿಕಾರಿಗಳ ವಿಳಂಬ ಧೋರಣೆಯಿಂದ ನಿವಾಸಿಗಳಿಗೆ ಆರ್ಥಿಕ ನಷ್ಟವಾಗುತ್ತಿದೆ,” ಎಂದು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಿ.ಎಸ್. ಗೌಡ ತಿಳಿಸಿದ್ದಾರೆ. ಕೂಡಲೇ ಆನ್‌ಲೈನ್ ಆಪ್ ಅಥವಾ ಪರ್ಯಾಯ ವ್ಯವಸ್ಥೆ ಮೂಲಕ ತೆರಿಗೆ ಸಂಗ್ರಹಕ್ಕೆ ಚಾಲನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.






















