ಬೆಂಗಳೂರು, ಏ.03 www.bengaluruwire.com: ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿ ಚಿಕಿತ್ಸೆಗೆ ದಾಖಲಾದಲ್ಲಿ, ಆ ಬಗ್ಗೆ ತಕ್ಷಣವೇ ಪೋಲಿಸ್ ಇಲಾಖೆಗೆ ಮಾಹಿತಿ ನೀಡುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ಏನಿದು ಹೊಸ ಮಾರ್ಗಸೂಚಿ?:
ಪೋಕ್ಸೋ (POCSO) ಕಾಯಿದೆ 2012ರ ಅಡಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭಧರಿಸುವುದು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾದಾಗ, ಸಂಬಂಧಪಟ್ಟ ವೈದ್ಯರು ಅಥವಾ ಆಸ್ಪತ್ರೆ ಆಡಳಿತ ಮಂಡಳಿಯು ವಿಳಂಬ ಮಾಡದೆ ಹತ್ತಿರದ ಪೊಲೀಸ್ ಠಾಣೆ ಅಥವಾ ‘ವಿಶೇಷ ಬಾಲ ನ್ಯಾಯ ಪೊಲೀಸ್ ಘಟಕ’ಕ್ಕೆ ಮಾಹಿತಿ ನೀಡಬೇಕು.

ಶಿಕ್ಷೆಯ ಪ್ರಮಾಣವೇನು?:
ಒಂದು ವೇಳೆ ಪ್ರಕರಣವನ್ನು ಮುಚ್ಚಿಟ್ಟರೆ ಅಥವಾ ವರದಿ ಮಾಡಲು ವಿಫಲವಾದರೆ, ಪೋಕ್ಸೋ ಕಾಯಿದೆಯ ಸೆಕ್ಷನ್ 21(2)ರ ಅಡಿಯಲ್ಲಿ ಆಸ್ಪತ್ರೆಯ ಜವಾಬ್ದಾರಿಯುತ ವ್ಯಕ್ತಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಕೇವಲ ವೈದ್ಯರಷ್ಟೇ ಅಲ್ಲದೆ, ಸಂಸ್ಥೆಯ ಮುಖ್ಯಸ್ಥರೂ ಈ ಶಿಕ್ಷೆಗೆ ಗುರಿಯಾಗಲಿದ್ದಾರೆ.
ಇಲಾಖೆಯ ಪ್ರಮುಖ ಸೂಚನೆಗಳು:
ಹೆಲ್ಪ್‌ಲೈನ್ ಬಳಕೆ: ಇಂತಹ ಪ್ರಕರಣಗಳು ದಾಖಲಾದ ಕೂಡಲೇ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ರೋಗಿಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ, ಕೇವಲ ತನಿಖಾಧಿಕಾರಿಗಳಿಗೆ ಮಾತ್ರ ಅಗತ್ಯ ಸಹಕಾರ ನೀಡಬೇಕು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಪೋಕ್ಸೋ ಕಾಯಿದೆಯ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ.
ಈ ಮಾರ್ಗಸೂಚಿಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕಾನೂನುಬದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.























