ಸಾಲಿಗ್ರಾಮ (ಉಡುಪಿ), ಮಾ.26 www.bengaluruwire.com: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ 2026-31ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬುಧವಾರ ಯಶಸ್ವಿಯಾಗಿ ಜರುಗಿದೆ. ದೇವಳದ ನೂತನ ಅಧ್ಯಕ್ಷರಾಗಿ ಪ್ರಕಾಶ ಕಾರಂತ್ ಅವರು ಆಯ್ಕೆಯಾಗಿದ್ದಾರೆ.
ಚುನಾವಣಾ ಹಿನ್ನೆಲೆ:
ಕಳೆದ ಮಾರ್ಚ್ 15ರಂದು ದೇವಳದ ವಿವಿಧ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಒಟ್ಟು ಆರು ಕ್ಷೇತ್ರಗಳ ಪೈಕಿ ಕರ್ನಾಟಕೇತರ ಭಾರತದ ಇತರ ರಾಜ್ಯಗಳ ಕ್ಷೇತ್ರದಿಂದ ಎಂ. ಲಕ್ಷ್ಮೀನಾರಾಯಣ ಹೊಳ್ಳರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಐದು ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಒಟ್ಟು 2,829 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಎಂಟು ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದರು.

ಪದಾಧಿಕಾರಿಗಳ ವಿವರ:

ಬುಧವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಚುನಾವನಾಧಿಕಾರಿ ಅಮೃತ ಹೊಳ್ಳ ಅವರು ನಿಯಮ 55ರ ಅನ್ವಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಆಯ್ಕೆಯಾದ ಪದಾಧಿಕಾರಿಗಳ ವಿವರ ಹೀಗಿದೆ:
* ಅಧ್ಯಕ್ಷರು: ಪ್ರಕಾಶ ಕಾರಂತ್ (ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ)
* ಉಪಾಧ್ಯಕ್ಷರು: ಚಂದ್ರಶೇಖರ ಉಪಾಧ್ಯ (ಸಾಲಿಗ್ರಾಮ ಕ್ಷೇತ್ರ)
* ಕಾರ್ಯದರ್ಶಿ: ಪರಶುರಾಮ ಭಟ್ಟ (ಸಾಲಿಗ್ರಾಮ ಕ್ಷೇತ್ರ)
* ಕೋಶಾಧಿಕಾರಿ: ಎಂ. ಲಕ್ಷ್ಮೀನಾರಾಯಣ ಹೊಳ್ಳ (ಕರ್ನಾಟಕೇತರ ಕ್ಷೇತ್ರ)
ಆಡಳಿತ ಮಂಡಳಿಯ ಸದಸ್ಯರು:
* ಪ್ರಸನ್ನ ತುಂಗ (ಸಾಲಿಗ್ರಾಮ ಕ್ಷೇತ್ರ)
* ಕೆ. ತಾರಾನಾಥ ಹೊಳ್ಳ (ಸಾಲಿಗ್ರಾಮ ಕ್ಷೇತ್ರ)
* ಬಿ. ಚಂದ್ರಶೇಖರ ನಾವಡ (ಉಡುಪಿ ಜಿಲ್ಲೆಯ ಉಳಿದ ಭಾಗಗಳು)
* ಜಿ. ಪ್ರಕಾಶ ಮಯ್ಯ (ಬೆಂಗಳೂರು ಕ್ಷೇತ್ರ)
* ಬಿ. ಜಿ. ಕೃಷ್ಣಮೂರ್ತಿ (ಕರ್ನಾಟಕದ ಉಳಿದ ಭಾಗಗಳು)
ಈ ಸಂದರ್ಭದಲ್ಲಿ ಮಾತನಾಡಿದ ಚುನಾವನಾಧಿಕಾರಿಗಳು, ನಿಯಮಾನುಸಾರ ಮುಂದಿನ ಐದು ವರ್ಷಗಳ ಅವಧಿಗೆ ಈ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಕಾರಂತ್, ಕೆ. ಎಸ್. ಕಾರಂತ್ ಸೇರಿದಂತೆ ಹಲವು ಗಣ್ಯರು ಹಾಗೂ ಹಿರಿಯರು ಉಪಸ್ಥಿತರಿದ್ದು, ನೂತನ ಸಮಿತಿಗೆ ಶುಭ ಹಾರೈಸಿದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























