ಬೆಂಗಳೂರು, ಮಾ.04 www.bengaluruwire.com : ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಪಾಲಿನ ಆಶಾಕಿರಣವಾಗಿರುವ ‘ಗಂಗಾ ಕಲ್ಯಾಣ’ ಯೋಜನೆಯಲ್ಲಿ ಮತ್ತೊಂದು ಪಾರದರ್ಶಕ ಹೆಜ್ಜೆ ಇಡಲಾಗಿದೆ.
ಇನ್ಮುಂದೆ ರೈತರು ತಮ್ಮ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆಯನ್ನು, ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ ಕಲ್ಪಿಸಲಾಗಿದೆ. ಇದರಿಂದ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ತಿಳಿಯಬಹುದು.
ಬುಧವಾರ ಬೆಂಗಳೂರಿನಲ್ಲಿ ಗಂಗಾ ಕಲ್ಯಾಣ ಪೋರ್ಟಲ್‌ನ ಹೊಸ ಆಯ್ಕೆಯನ್ನು ಅನಾವರಣಗೊಳಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು, ಈ ಸುಧಾರಣೆಯು ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.
ಪಾರದರ್ಶಕತೆಗೆ ಆದ್ಯತೆ

“ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆದ ನಂತರ ವಿದ್ಯುತ್ ಮೂಲಸೌಕರ್ಯ ಮತ್ತು ಸಂಪರ್ಕ ಪಡೆಯಲು ರೈತರು ಕಚೇರಿಗಳಿಗೆ ಅಲೆದಾಡಬೇಕಿತ್ತು. ಇದನ್ನು ತಪ್ಪಿಸಲು ಈಗ ಆನ್‌ಲೈನ್‌ನಲ್ಲೇ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ರೈತರು ಇದರ ಸದುಪಯೋಗ ಪಡೆಯಬೇಕು,” ಎಂದು ಸಚಿವರು ಕರೆ ನೀಡಿದರು.
ಮಾಹಿತಿ ಪಡೆಯುವುದು ಹೇಗೆ?:
ಫಲಾನುಭವಿಗಳು ಗಂಗಾ ಕಲ್ಯಾಣ ಪೋರ್ಟಲ್‌ನ ಮುಖಪುಟದಲ್ಲಿರುವ (https://gangakalyanayojane.in/#/public/home) ‘Track Application’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಈ ಕೆಳಗಿನ ಯಾವುದಾದರೂ ಒಂದು ವಿವರ ನೀಡಿ ಮಾಹಿತಿ ಪಡೆಯಬಹುದು:
ಗಂಗಾ ಕಲ್ಯಾಣ ಅರ್ಜಿ ಐಡಿ (Application ID) ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ
ಏನೆಲ್ಲಾ ಮಾಹಿತಿ ಲಭ್ಯ?:
ಅರ್ಜಿದಾರರು ತಮ್ಮ ವಿವರ ನಮೂದಿಸಿದ ತಕ್ಷಣ, ವಿದ್ಯುತ್ ಸಂಪರ್ಕದ ಪ್ರಗತಿ (In Progress/Completed), ಪ್ರಕ್ರಿಯೆ ನಡೆದ ದಿನಾಂಕ ಹಾಗೂ ಆದೇಶ ಸಂಖ್ಯೆಯ ಸಂಪೂರ್ಣ ವಿವರಗಳು ಪರದೆಯ ಮೇಲೆ ಲಭ್ಯವಾಗಲಿವೆ.
ಬೆಸ್ಕಾಂ ಎಂಡಿ ಏನಂತಾರೆ?:
“ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಪೋರ್ಟಲ್ ನಲ್ಲಿ ಹೊಸ ಆಯ್ಕೆ ಒದಗಿಸಲಾಗಿದೆ. ಇದರಿಂದ ಕಚೇರಿಗೆ ಅಲೆದಾಡುವುದು ತಪ್ಪುವುದರ ಜತೆಗೆ ಕಾಲಕಾಲಕ್ಕೆ ಅವರಿಗೆ ತಮ್ಮ ಅರ್ಜಿಯ ಮಾಹಿತಿ ಲಭ್ಯವಾಗುತ್ತದೆ”
– ಡಾ.ಎನ್.ಶಿವಶಂಕರ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು























