ಬೆಂಗಳೂರು/ನವದೆಹಲಿ, ಮೇ.12 www.bengaluruwire.com: ದೇಶದಾದ್ಯಂತ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ (OMCs) ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಹೈ ಸ್ಪೀಡ್ ಡೀಸೆಲ್ (HSD) ಮಾರಾಟದಲ್ಲಿ ಅಸಾಮಾನ್ಯ ಏರಿಕೆ ಕಂಡುಬಂದಿದ್ದು, ಇದು ಈಗ ರಾಷ್ಟ್ರ ಮಟ್ಟದ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ‘ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್’ ನೇರವಾಗಿ ಪ್ರಧಾನ ಮಂತ್ರಿಗಳ ಕಚೇರಿ (PMO) ಮೆಟ್ಟಿಲೇರಿದೆ.
ಬೃಹತ್ ಪ್ರಮಾಣದ ಡೀಸೆಲ್ ಖರೀದಿಸುವ ಕೈಗಾರಿಕಾ ಮತ್ತು ಸಂಸ್ಥಾತ್ಮಕ ಗ್ರಾಹಕರಿಗೆ ನೀಡಲಾಗುವ ‘ಬಲ್ಕ್’ ದರಕ್ಕೂ, ಸಾಮಾನ್ಯ ಗ್ರಾಹಕರು ಬಳಸುವ ಚಿಲ್ಲರೆ ಬಂಕ್‌ಗಳ ದರಕ್ಕೂ ಭಾರಿ ವ್ಯತ್ಯಾಸವಿದೆ. ಈ ದರ ವ್ಯತ್ಯಾಸದ ಲಾಭ ಪಡೆಯಲು ಕೈಗಾರಿಕೋದ್ಯಮಿಗಳು ಈಗ ತಮ್ಮ ಅಗತ್ಯದ ಡೀಸೆಲ್ ಅನ್ನು ನೇರವಾಗಿ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದಲೇ ಖರೀದಿಸುತ್ತಿದ್ದಾರೆ. ಇದರಿಂದಾಗಿ ಬಂಕ್‌ಗಳಲ್ಲಿ ಕೃತಕವಾಗಿ ಬೇಡಿಕೆ ಹೆಚ್ಚಾಗಿದ್ದು, ಸಾಮಾನ್ಯ ವಾಹನ ಸವಾರರಿಗೆ ಡೀಸೆಲ್ ಸಿಗದಂತಾಗಿದೆ.
ದೂರಿನ ವಿವರ:

ಈ ಕುರಿತು ಸಲ್ಲಿಸಲಾದ ಪ್ರಧಾನಮಂತ್ರಿಗಳ ದೂರು ಪೋರ್ಟಲ್‌ನಲ್ಲಿ (PMOPG/E/2026/0079657 ಸಂಖ್ಯೆಯಡಿ) ನೋಂದಾಯಿಸಲ್ಪಟ್ಟಿದೆ. ದೂರಿನಲ್ಲಿ ಸಂಘವು ಹಲವು ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಿದೆ:
ಪೂರೈಕೆ ಕಡಿತ: ಐತಿಹಾಸಿಕ ಸರಾಸರಿಗಿಂತ ಹೆಚ್ಚಿನ ಮಾರಾಟವಾಗುತ್ತಿದೆ ಎಂಬ ನೆಪವೊಡ್ಡಿ ಇಂಧನ ಮಾರುಕಟ್ಟೆ ಕಂಪನಿಗಳು (OMC) ಬಂಕ್‌ಗಳಿಗೆ ಇಂಧನ ಪೂರೈಕೆಯನ್ನು ಸೀಮಿತಗೊಳಿಸುತ್ತಿವೆ.
ನೋ ಸ್ಟಾಕ್ ಭೀತಿ: ಕೈಗಾರಿಕಾ ಗ್ರಾಹಕರ ದೊಡ್ಡ ಮಟ್ಟದ ಖರೀದಿಯಿಂದಾಗಿ ಸಾಮಾನ್ಯ ಗ್ರಾಹಕರಿಗೆ “ನೋ ಸ್ಟಾಕ್” ಎಂಬ ಬೋರ್ಡ್ ಎದುರಾಗುತ್ತಿದೆ.
ಕಾರ್ಯಾಚರಣಾ ಅಸ್ಥಿರತೆ: ಟ್ಯಾಂಕರ್ ಸಂಚಾರ ಮತ್ತು ಸ್ಟಾಕ್ ನಿರ್ವಹಣೆಯಲ್ಲಿ ಡೀಲರ್‌ಗಳು ಭಾರಿ ನಷ್ಟ ಮತ್ತು ಗೊಂದಲ ಅನುಭವಿಸುತ್ತಿದ್ದಾರೆ.
ಸಂಘದ ಆಗ್ರಹವೇನು?
ಕೈಗಾರಿಕಾ ಮತ್ತು ಸಂಸ್ಥಾತ್ಮಕ ಗ್ರಾಹಕರು ಕಡ್ಡಾಯವಾಗಿ ನಿಗದಿತ ಬಲ್ಕ್ ಸರಬರಾಜು ಮಾರ್ಗಗಳ ಮೂಲಕವೇ ಇಂಧನ ಖರೀದಿಸುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು. ಈ ಹಠಾತ್ ಬೇಡಿಕೆಯ ಏರಿಕೆಯ ಬಗ್ಗೆ ಪೆಟ್ರೋಲಿಯಂ ಸಚಿವಾಲಯವು ಸಮಗ್ರ ತನಿಖೆ ನಡೆಸಬೇಕು ಎಂದು ಸಂಘವು ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದೆ.
ಸರ್ಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ನೀತಿ ನಿಯಮಗಳಲ್ಲಿ ಬದಲಾವಣೆ ತಂದರೆ ಮಾತ್ರ ಚಿಲ್ಲರೆ ಮಾರಾಟ ವ್ಯವಸ್ಥೆ ಹಳಿಗೆ ಮರಳಲು ಸಾಧ್ಯ ಎಂದು ಡೀಲರ್ಸ್ ಅಸೋಸಿಯೇಷನ್ ಆಶಯ ವ್ಯಕ್ತಪಡಿಸಿದೆ.






















