ಬೆಂಗಳೂರು, ಫೆ.03 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವವರಿಗೆ ಮತ್ತು ಆಸ್ತಿ ತೆರಿಗೆ ಪಾವತಿಸದ ಮಾಲೀಕರಿಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
2026-27ನೇ ಸಾಲಿನ ಉದ್ದಿಮೆ ಪರವಾನಿಗೆ (Trade License) ನವೀಕರಣಕ್ಕೆ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ವಿಳಂಬ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತದೆ. ಮತ್ತೊಂದೆಡೆ, ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳ ಹರಾಜಿಗೆ ಮುಹೂರ್ತ ನಿಗದಿಪಡಿಸಲಾಗಿದೆ.
ದಂಡವಿಲ್ಲದೆ ನವೀಕರಣಕ್ಕೆ ಫೆಬ್ರವರಿ 28 ಕಡೇ ದಿನ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆ ಆರಂಭವಾಗಿದೆ. ಉದ್ದಿಮೆದಾರರು 1 ರಿಂದ 5 ವರ್ಷಗಳ ಅವಧಿಗೆ (ಏಪ್ರಿಲ್ ನಿಂದ ಮಾರ್ಚ್) ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಫೆ.01 ರಿಂದ ಫೆ.28 ರವರೆಗೆ: ದಂಡವಿಲ್ಲದೆ ಶುಲ್ಕ ಪಾವತಿಗೆ ಅವಕಾಶ.
ಮಾ.01 ರಿಂದ ಮಾ.31 ರವರೆಗೆ: ಶೇ. 25 ರಷ್ಟು ದಂಡದೊಂದಿಗೆ ಪಾವತಿ.
ಏ.01 ರ ನಂತರ: ಪರವಾನಿಗೆ ಶುಲ್ಕದ ಶೇ. 100 ರಷ್ಟು (ಡಬಲ್) ದಂಡದೊಂದಿಗೆ ಪಾವತಿಸಬೇಕಾಗುತ್ತದೆ.
ಶುಲ್ಕವನ್ನು ಆನ್‌ಲೈನ್ ಮೂಲಕ ಅಥವಾ ಕೆನರಾ ಬ್ಯಾಂಕ್ ಚಲನ್ ಮೂಲಕ ಪಾವತಿಸಬಹುದು. ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಯಾರಿಗೆ ಲೈಸೆನ್ಸ್ ಸಿಗಲ್ಲ? ಕಠಿಣ ನಿಯಮ ಜಾರಿ:
ವಲಯ ವರ್ಗೀಕರಣ ಮತ್ತು ಕಟ್ಟಡ ನಿಯಮಾವಳಿಗಳ ಅನ್ವಯ ಈ ಬಾರಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ:
ರಸ್ತೆ ಅಗಲ: ವಸತಿ ಪ್ರದೇಶಗಳಲ್ಲಿ 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳಲ್ಲಿ, 2015ರ ನಂತರ ಆರಂಭವಾಗಿರುವ ಉದ್ದಿಮೆಗಳ ಪರವಾನಿಗೆಯನ್ನು ತಿರಸ್ಕರಿಸಲು ಆದೇಶಿಸಲಾಗಿದೆ.
ವಾಹನ ನಿಲುಗಡೆ ಜಾಗ: ಪಾರ್ಕಿಂಗ್ ಅಥವಾ ಟೆರೇಸ್ (ರೂಫ್ ಟಾಪ್) ಗಳಲ್ಲಿ ನಿಯಮಬಾಹಿರವಾಗಿ ಉದ್ದಿಮೆ ನಡೆಸುತ್ತಿದ್ದರೆ ಅಂತಹ ಪರವಾನಿಗೆಗಳನ್ನು ತಡೆಹಿಡಿಯಲಾಗುವುದು.
ತ್ಯಾಜ್ಯ ನಿರ್ವಹಣೆ: 100 ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವವರು ಕಡ್ಡಾಯವಾಗಿ ಸ್ಥಳದಲ್ಲೇ ತ್ಯಾಜ್ಯ ಸಂಸ್ಕರಣೆ ಮಾಡಬೇಕು ಅಥವಾ ಅಧಿಕೃತ ವೆಂಡರ್ ಜತೆ ಒಪ್ಪಂದ ಮಾಡಿಕೊಂಡಿರಬೇಕು. ಪ್ಲಾಸ್ಟಿಕ್ ನಿಷೇಧ ಪಾಲನೆ ಕಡ್ಡಾಯ.
ತೆರಿಗೆಗಳ್ಳರಿಗೆ ಶಾಕ್: ಫೆ.17ಕ್ಕೆ ಆಸ್ತಿ ಹರಾಜು!
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಆಸ್ತಿ ತೆರಿಗೆ ಪಾವತಿಸದ 7,000 ಸುಸ್ತಿದಾರರ ಆಸ್ತಿಗಳನ್ನು ಹರಾಜು ಹಾಕಲು ಪ್ರಾಧಿಕಾರ ನಿರ್ಧರಿಸಿದೆ. ಈ ಮಾಲೀಕರು ಒಟ್ಟು 437 ಕೋಟಿ ರೂ.ಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಈಗಾಗಲೇ ಜಪ್ತಿ ಆದೇಶ ನೀಡಲಾಗಿದ್ದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ, ಇದೇ ಫೆಬ್ರವರಿ 17 ರಂದು ಆಯಾ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಬಹಿರಂಗ ಹರಾಜು ನಡೆಯಲಿದೆ. ಹರಾಜು ಪಟ್ಟಿಯಲ್ಲಿರುವವರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ತಕ್ಷಣವೇ https://BBMPTax.karnataka.gov.in ವೆಬ್‌ಸೈಟ್ ಮೂಲಕ ಬಾಕಿ ಪಾವತಿಸಲು ಸೂಚಿಸಲಾಗಿದೆ.























