ಬೆಂಗಳೂರು/ತಿರುವನಂತಪುರಂ, ಫೆ.02 www.bengaluruwire.com : ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಸಿ.ಜೆ. ರಾಯ್ (C.J. Roy) ಅವರು ಬೆಂಗಳೂರಿನಲ್ಲಿ ಆದಾಯ ತೆರಿಗೆ (IT) ದಾಳಿಯ ವೇಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತುರ್ತು ಪತ್ರ ಬರೆದಿದ್ದು, ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಘಟನೆಯ ಗಂಭೀರತೆಯನ್ನು ಅರಿತ ಕರ್ನಾಟಕ ಸರ್ಕಾರ, ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ.
ಪತ್ರದಲ್ಲಿ ಏನಿದೆ? ಕೇರಳ ಸಿಎಂ ಆಕ್ರೋಶ:

ಕೇಂದ್ರ ಸಚಿವೆಗೆ ಬರೆದ ಪತ್ರದಲ್ಲಿ (ದಿನಾಂಕ: 01.02.2026) ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಎಂ ಪಿಣರಾಯ್ ವಿಜಯನ್, “ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗಲೇ, ಅಧಿಕಾರಿಗಳ ವಶದಲ್ಲಿರಬೇಕಾದ ವ್ಯಕ್ತಿಯೊಬ್ಬರು ಬಂದೂಕು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಇದು ಆದಾಯ ತೆರಿಗೆ ಇಲಾಖೆಯ ಆಡಳಿತದ ಮೇಲಿರುವ ಕಪ್ಪು ಚುಕ್ಕೆ,” ಎಂದು ಜರಿದಿದ್ದಾರೆ.
“ತೆರಿಗೆ ಇಲಾಖೆಯ ದಾಳಿ ವೇಳೆ ಕನಿಷ್ಠ ಸುರಕ್ಷತಾ ಪ್ರೋಟೋಕಾಲ್ಗಳನ್ನು ಪಾಲಿಸದಿರುವುದೇ ಈ ದುರಂತಕ್ಕೆ ಕಾರಣವಾಗಿದೆ. ಮನೆಯಲ್ಲಿ ಅಧಿಕಾರಿಗಳು ಇರುವಾಗಲೇ ರಾಯ್ ಅವರು ಬೇರೆ ಕೋಣೆಗೆ ತೆರಳಿ ಕೃತ್ಯ ಎಸಗಿದ್ದಾರೆಂದರೆ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ,” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕುಟುಂಬಸ್ಥರಿಂದ ಕಿರುಕುಳದ ಆರೋಪ:
ಸಿ.ಜೆ. ರಾಯ್ ಅವರ ಸಹೋದರ ಬಾಬು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, “ನನ್ನ ಸಹೋದರ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದರೂ, ಅಧಿಕಾರಿಗಳು ಪದೇ ಪದೇ ಕಿರುಕುಳ ನೀಡುತ್ತಿದ್ದರು. ಐಟಿ ಅಧಿಕಾರಿಗಳ ಕಾಟ ತಾಳಲಾರದೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ,” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕರ್ನಾಟಕದಿಂದ SIT ರಚನೆ:
ಘಟನೆ ನಡೆದದ್ದು ಬೆಂಗಳೂರಿನಲ್ಲಿ ಆಗಿರುವುದರಿಂದ, ಕರ್ನಾಟಕ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಐಟಿ ದಾಳಿಯ ಸಂದರ್ಭದಲ್ಲಿ ನಡೆದ ಈ ಅಸಹಜ ಸಾವಿನ ಕುರಿತು ಕೂಲಂಕಷ ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ’ವನ್ನು (Special Investigation Team – SIT) ರಚಿಸಲಾಗಿದೆ. ಈಗಾಗಲೇ ತನಿಖೆ ಆರಂಭಿಸಿರುವ ಎಸ್‌ಐಟಿ, ಸ್ಥಳದಲ್ಲಿದ್ದ ಐಟಿ ಅಧಿಕಾರಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.
ನ್ಯಾಯಾಂಗ ತನಿಖೆಯೇ ಏಕೈಕ ಮಾರ್ಗ:
“ಕೇವಲ ಇಲಾಖಾ ತನಿಖೆ ಅಥವಾ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿರುವ ಸಂಶಯ ನಿವಾರಿಸಲು ಮತ್ತು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಲು, ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ನ್ಯಾಯಾಂಗ ತನಿಖೆ ನಡೆಸಬೇಕು,” ಎಂದು ಕೇರಳ ಸಿಎಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.




















