ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.15 www.bengaluruwire.com : ದಾವಣಗೆರೆ ಜಿಲ್ಲೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ, ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ತೀವ್ರ ಸಂತಾಪ ಸೂಚಿಸಿದರು.
ಸದನದಲ್ಲಿ ಮಂಡಿಸಲಾದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, “ದಾವಣಗೆರೆ ಇಂದು ವಿದ್ಯಾಕಾಶಿಯಾಗಿ, ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ತಲೆ ಎತ್ತಿ ನಿಂತಿದೆ ಎಂದರೆ ಅದಕ್ಕೆ ಶ್ಯಾಮನೂರು ಅವರೇ ಪ್ರಮುಖ ಕಾರಣ,” ಎಂದು ಬಣ್ಣಿಸಿದರು.
ರಾಜಕೀಯ ಮತ್ತು ಶೈಕ್ಷಣಿಕ ಕ್ರಾಂತಿ :
ಶ್ಯಾಮನೂರು ಅವರ ರಾಜಕೀಯ ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಅವರು ತಮ್ಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ, ಆರು ಬಾರಿ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿ ಸೇವೆ ಸಲ್ಲಿಸಿದ ದೀರ್ಘಕಾಲೀನ ರಾಜಕಾರಣಿ. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿಯೂ ಅವರು ಜನಸೇವೆ ಮಾಡಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸಮಾಜವನ್ನು ಮುನ್ನಡೆಸಿದ್ದರು,” ಎಂದರು.

ಮುಖ್ಯವಾಗಿ, ದಾವಣಗೆರೆಯಲ್ಲಿ ಜವಳಿ ಕ್ಷೇತ್ರ ಅವನತಿ ಕಂಡಾಗ ಊರಿಗೆ ಹೊಸ ಬ್ರಾಂಡ್ ತಂದುಕೊಟ್ಟಿದ್ದು ಶ್ಯಾಮನೂರರು. ಬಾಪೂಜಿ ವಿದ್ಯಾ ಸಂಸ್ಥೆಯ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ದಾವಣಗೆರೆಯನ್ನು ‘ವಿದ್ಯಾಕಾಶಿ’ಯನ್ನಾಗಿ ರೂಪಿಸಿದರು. ಉದ್ಯಮಿಯಾಗಿ ಮತ್ತು ಶಿಕ್ಷಣ ಪ್ರೇಮಿಯಾಗಿ ಅವರು ಮೂಡಿಸಿದ ಛಾಪು ಅನನ್ಯ ಎಂದು ಸಿಎಂ ಸ್ಮರಿಸಿದರು.
ಅಜಾತಶತ್ರು ಮತ್ತು ಆಪ್ತ ಒಡನಾಟ :
ಶ್ಯಾಮನೂರು ಅವರನ್ನು ‘ಅಜಾತಶತ್ರು’ ಎಂದು ಕರೆದ ಸಿದ್ದರಾಮಯ್ಯ, ಅವರೊಂದಿಗಿನ ವೈಯಕ್ತಿಕ ಒಡನಾಟವನ್ನು ನೆನೆದು ಭಾವುಕರಾದರು. “ನಾನು ದಾವಣಗೆರೆಗೆ ಹೋದಾಗಲೆಲ್ಲಾ ಅವರ ಗೆಸ್ಟ್ ಹೌಸ್‌ನಲ್ಲೇ ವಾಸ್ತವ್ಯ ಹೂಡುತ್ತಿದ್ದೆ. ಅವರ ಪ್ರೀತಿಯ ಒತ್ತಾಯದ ಮೇರೆಗೆ ಅವರ ಮನೆಯಲ್ಲೇ ಊಟ ಮಾಡುತ್ತಿದ್ದೆ. ನನ್ನ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದನ್ನು ಮರೆಯಲು ಸಾಧ್ಯವಿಲ್ಲ,” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಸಂಕಷ್ಟದಲ್ಲಿ ನೆರವಾಗಿದ್ದ ‘ದಾನಿ’ :
ಶ್ಯಾಮನೂರು ಅವರು ಕೇವಲ ಉದ್ಯಮಿಯಾಗಿರದೆ, ಕಷ್ಟಕಾಲದಲ್ಲಿ ಜನರಿಗೆ ನೆರವಾಗುವ ದಾನಿಯಾಗಿದ್ದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಬರೋಬ್ಬರಿ ಆರು ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡುವ ಮೂಲಕ ಸಾವಿರಾರು ಜನರ ಪ್ರಾಣ ಉಳಿಸಲು ನೆರವಾಗಿದ್ದರು ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಶ್ಯಾಮನೂರು ಅವರು ಸಚಿವರಾಗಿದ್ದರು. ಬಳಿಕ 2016ರಲ್ಲಿ ಸಂಪುಟ ಪುನಾರಚನೆ ವೇಳೆ ತಮ್ಮ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಿದ್ದರು. ಇಂದು ಮಲ್ಲಿಕಾರ್ಜುನ್ ಅವರು ನಮ್ಮ ಸಂಪುಟದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
“ಕೇವಲ 15 ದಿನಗಳ ಹಿಂದಷ್ಟೇ ನಾನು ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿದ್ದೆ, ಆಗ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಂತಹ ಹಿರಿಯ ಚೇತನದ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ,” ಎಂದು ಸಿಎಂ ಪ್ರಾರ್ಥಿಸಿದರು.























