ನವದೆಹಲಿ/ಬೆಂಗಳೂರು, ಡಿ.14 www.bengaluruwire.com : ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು, ನಾಳೆಯಿಂದಲೇ (ಸೋಮವಾರ) 369 ವಾರ್ಡ್‌ಗಳ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಭಾನುವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್‌ವಾರು ಮೀಸಲಾತಿ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಆದರೂ, ಚುನಾವಣೆಗೆ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂಬುದನ್ನು ಅರಿಯಲು ಮತ್ತು ಪಕ್ಷ ಸಂಘಟನೆಯ ದೃಷ್ಟಿಯಿಂದ ಮುಂಚಿತವಾಗಿಯೇ ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಠೇವಣಿ ಮೊತ್ತ ಮತ್ತು ಕಟ್ಟಡ ನಿಧಿ:
ಚುನಾವಣಾ ಆಕಾಂಕ್ಷಿಗಳಿಂದ ಸಂಗ್ರಹಿಸಲಾಗುವ ಹಣವನ್ನು ಪಕ್ಷದ ಕಟ್ಟಡ ನಿಧಿಗೆ ಬಳಸಲು ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ. ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ 50 ಸಾವಿರ ರೂ. ಹಾಗೂ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 25 ಸಾವಿರ ರೂ. ಠೇವಣಿ ನಿಗದಿಪಡಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.

ಮತ ಕಳ್ಳತನದ ವಿರುದ್ಧ ‘ಲೀಗಲ್ ಬ್ಯಾಂಕ್’:
ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಪಟ್ಟಿ ಪರಿಷ್ಕರಣೆ ಮತ್ತು ಮತ ಕಳ್ಳತನದ ವಿರುದ್ಧದ ಹೋರಾಟ ಮುಂದುವರಿಯಲಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ‘ಲೀಗಲ್ ಬ್ಯಾಂಕ್’ (ಕಾನೂನು ನೆರವು ಘಟಕ) ಸ್ಥಾಪಿಸಲಾಗುವುದು. ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರ್ಪಡೆಗೊಳಿಸಿ, ಕಾರ್ಯಕರ್ತರಿಗೆ ಅಗತ್ಯ ಕಾನೂನು ಸಲಹೆ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು. ಅಲ್ಲದೆ, ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ಗುರುತಿನ ಚೀಟಿ ನೀಡಲು ಸಿದ್ಧತೆ ನಡೆದಿದ್ದು, ಎಐಸಿಸಿ ಅನುಮೋದನೆಗೆ ಕಳುಹಿಸಲಾಗುವುದು ಎಂದರು.
ಹೈಕಮಾಂಡ್ ಭೇಟಿ ಮತ್ತು ಸ್ಪಷ್ಟನೆ:
ದೆಹಲಿ ಭೇಟಿಯ ವೇಳೆ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಸೌಹಾರ್ದಯುತ ಭೇಟಿಯೇ ಹೊರತು ವೈಯಕ್ತಿಕವಲ್ಲ. ನಮ್ಮ ನಾಯಕರು ನನ್ನನ್ನು ಕಂಡ ಕೂಡಲೇ ಕುಶಲೋಪರಿ ವಿಚಾರಿಸುತ್ತಾರೆ. ಮಾಧ್ಯಮಗಳು ಸೃಷ್ಟಿಸುವಂತಹ ಯಾವುದೇ ಸಮಸ್ಯೆಗಳು ನನಗಿಲ್ಲ,” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ದೆಹಲಿ ಪೊಲೀಸರ ನೋಟಿಸ್‌ಗೆ ಸೋಮವಾರ ಉತ್ತರ ನೀಡುವುದಾಗಿ ತಿಳಿಸಿದರು.
ಇತ್ತೀಚಿನ ಹೋರಾಟಗಳಲ್ಲಿ ಕಂಡುಬಂದ ಜನರ ಉತ್ಸಾಹವು 2028 ಹಾಗೂ 2029ರ ಚುನಾವಣೆಗಳಿಗೆ ದಿಕ್ಸೂಚಿಯಾಗಿದ್ದು, ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.























