ಬೆಂಗಳೂರು, ಡಿ.01 www.bengaluruwire.com : ರಾಜ್ಯ ಸರ್ಕಾರ ಪ್ರತಿಷ್ಠಿತವಾಗಿ ಪರಿಗಣಿಸಿರುವ ಬೆಂಗಳೂರು ಸುರಂಗ ರಸ್ತೆ ಯೋಜನೆಯು ಅವೈಜ್ಞಾನಿಕವಾಗಿದ್ದು, ಇದು ಕೇವಲ ಶ್ರೀಮಂತರಿಗೆ ಅನುಕೂಲ ಕಲ್ಪಿಸುವ ಮತ್ತು ನಗರದ ಪರಿಸರವನ್ನು ಶಾಶ್ವತವಾಗಿ ನಾಶಮಾಡುವ ಯೋಜನೆಯಾಗಿದೆ ಎಂದು ವಿವಿಧ ಕ್ಷೇತ್ರಗಳ ತಜ್ಞರು ಮತ್ತು ‘ಬೆಂಗಳೂರು ಉಳಿಸಿ ಸಮಿತಿ’ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಎಸ್.ಸಿ.ಎಂ. ಹಾಲ್‌ನಲ್ಲಿ ಭಾನುವಾರ (ನ.30) ‘ಬೆಂಗಳೂರು ಉಳಿಸಿ ಸಮಿತಿ’ ಆಯೋಜಿಸಿದ್ದ ಜನಸಮಾವೇಶದಲ್ಲಿ ಭಾಗವಹಿಸಿದ 200ಕ್ಕೂ ಹೆಚ್ಚು ಪರಿಸರ ವಿಜ್ಞಾನಿಗಳು, ಭೂವಿಜ್ಞಾನಿಗಳು ಮತ್ತು ನಾಗರಿಕರು ಯೋಜನೆಯ ವಿರುದ್ಧ ಒಕ್ಕೊರಲ ದನಿ ಎತ್ತಿದರು.
ವೃತಾ ಸಾರ್ವಜನಿಕ ಹಣದ ಪೋಲು:
ಸಮಿತಿಯ ಸಂಚಾಲಕ ಡಾ. ಜಿ. ಶಶಿಕುಮಾರ್ ಮಾತನಾಡಿ, “ಸುರಂಗ ರಸ್ತೆ ಯೋಜನೆಯ ವೆಚ್ಚ ಬರೋಬ್ಬರಿ 70,000 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ. ಮುಂದಿನ 40 ವರ್ಷಗಳ ಕಾಲ ಜನಸಾಮಾನ್ಯರು ತೆರಿಗೆ ಮತ್ತು ಟೋಲ್ ರೂಪದಲ್ಲಿ ಈ ಹೊರೆಯನ್ನು ಹೊರಬೇಕಾಗುತ್ತದೆ. ಈ ಸುರಂಗದಲ್ಲಿ ಗಂಟೆಗೆ ಕೇವಲ 1,800 ಕಾರುಗಳಷ್ಟೇ ಸಂಚರಿಸಬಲ್ಲವು. ಆದರೆ, ಮೆಟ್ರೋದಲ್ಲಿ 69,000 ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ 1.75 ಲಕ್ಷ ಜನರು ಸಂಚರಿಸುತ್ತಾರೆ. ಬಹುಸಂಖ್ಯಾತರಿಗೆ ಉಪಯೋಗವಿಲ್ಲದ ಯೋಜನೆ ಇದು,” ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.


ಪರಿಸರ ಮತ್ತು ಭೂವಿಜ್ಞಾನಿಗಳಿಂದ ಎಚ್ಚರಿಕೆ:
ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮಾತನಾಡಿ, “ಸುರಂಗ ಕೊರೆಯುವುದರಿಂದ ಅಂತರ್ಜಲ ಹರಿವು ಮತ್ತು ಜಲಚರಗಳಿಗೆ ಕುತ್ತು ಬರಲಿದೆ. ಈಗಾಗಲೇ ನಗರವು ಪ್ರವಾಹದ ಭೀತಿಯಲ್ಲಿದ್ದು, ಹಸಿರು ಮತ್ತು ಕೆರೆಗಳ ನಾಶದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಈ ಯೋಜನೆಯು ನಗರದ ನೀರಿನ ಭದ್ರತೆಯನ್ನೇ ಅಲುಗಾಡಿಸಲಿದೆ,” ಎಂದು ಎಚ್ಚರಿಸಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಪ್ರೊ. ಸಿ.ಪಿ. ರಾಜೇಂದ್ರನ್ ಮತ್ತು ಭೂವಿಜ್ಞಾನಿ ಪ್ರೊ. ರೇಣುಕಾ ಪ್ರಸಾದ್, ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಸಮಗ್ರ ಭೂವೈಜ್ಞಾನಿಕ ಸಮೀಕ್ಷೆ ನಡೆಸದೆ ಸುರಂಗ ನಿರ್ಮಿಸುವುದು ಭೂಕಂಪನ ಮತ್ತು ಮಣ್ಣಿನ ಕುಸಿತದಂತಹ ಅಪಾಯಗಳನ್ನು ಆಹ್ವಾನಿಸಿದಂತೆ ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೀಮಂತರ ಪರವಾದ ಯೋಜನೆ:
ಐಐಎಸ್‌ಸಿ ಸಾರಿಗೆ ತಜ್ಞ ಪ್ರೊ. ಆಶೀಶ್ ವರ್ಮಾ ವಿಡಿಯೋ ಸಂದೇಶದ ಮೂಲಕ ಮಾತನಾಡಿ, “ಪ್ರತಿ ಟ್ರಿಪ್‌ಗೆ ಸುಮಾರು 300 ರೂ. ಸುಂಕ ವಿಧಿಸುವುದರಿಂದ ಇದು ಕೇವಲ ಶ್ರೀಮಂತರ ಯೋಜನೆಯಾಗಲಿದೆ. ಇದು ಸಾರ್ವಜನಿಕ ಸಾರಿಗೆಯನ್ನು ದುರ್ಬಲಗೊಳಿಸಿ, ಖಾಸಗಿ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತದೆ,” ಎಂದು ಟೀಕಿಸಿದರು.
ಸಾರಿಗೆ ತಜ್ಞ ಪ್ರೊ. ಎಂ.ಎನ್. ಶ್ರೀಹರಿ ಮತ್ತು ಸಿವಿಕ್ ಬೆಂಗಳೂರು ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಅವರು, ದುಬಾರಿ ಸುರಂಗ ರಸ್ತೆಯ ಬದಲಿಗೆ ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಳ, ಮೆಟ್ರೋ ವಿಸ್ತರಣೆ ಮತ್ತು ಉಪನಗರ ರೈಲು ಯೋಜನೆಗಳಿಗೆ ಒತ್ತು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಭೆಯಲ್ಲಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಡಾ. ಧರ್ಮಾನಂದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಮಿತಿಯ ಸದಸ್ಯ ರಾಜೇಶ್ ಭಟ್, ಮುಂದಿನ ದಿನಗಳಲ್ಲಿ ಯೋಜನೆಯ ವಿರುದ್ಧ ಜನಾಂದೋಲನವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.






















