ಬೆಂಗಳೂರು, ನ.28 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಮೂಳೆ ಕೊರೆಯುವ ಚಳಿ ಆರಂಭವಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಕಾಲಿಡಬೇಕಿದ್ದ ಚಳಿಗಾಲ, ನವೆಂಬರ್ ಅಂತ್ಯದಲ್ಲೇ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಇಂದು (ಶುಕ್ರವಾರ) ಬೆಳಿಗ್ಗೆ ನಗರದ ನಾಗರೀಕರು ತೀವ್ರ ಚಳಿಯ ಅನುಭವ ಪಡೆದರು.
ತಾಪಮಾನದಲ್ಲಿ ಭಾರೀ ಇಳಿಕೆ:
ಹವಾಮಾನ ಇಲಾಖೆಯ (IMD) ಇತ್ತೀಚಿನ ದತ್ತಾಂಶಗಳ ಪ್ರಕಾರ, ನಗರದ ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನವೆಂಬರ್ 27 ರಂದು ನಗರದ ಗರಿಷ್ಠ ತಾಪಮಾನವು 24.1 ಡಿಗ್ರಿ ಸೆಲ್ಸಿಯಸ್‌ನಿಂದ 25.2 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿತ್ತು. ಆದರೆ, ಕೇವಲ 24 ಗಂಟೆಗಳ ಅಂತರದಲ್ಲಿ, ಅಂದರೆ ನವೆಂಬರ್ 28, 2025ರ ಬೆಳಿಗ್ಗೆ 8 ಗಂಟೆಗೆ ದಾಖಲಾದ ವರದಿಯಂತೆ ಕನಿಷ್ಠ ತಾಪಮಾನವು 15.6 ಡಿಗ್ರಿ ಸೆಲ್ಸಿಯಸ್‌ನಿಂದ 16.2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಈ ಹಠಾತ್ ಬದಲಾವಣೆಯಿಂದಾಗಿ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳುವವರು ಮತ್ತು ಶಾಲಾ ಮಕ್ಕಳು ಸ್ವೆಟರ್, ಮಫ್ಲರ್ ಮೊರೆ ಹೋಗುವಂತಾಗಿದೆ.
ಅಕಾಲಿಕ ಚಳಿಗೆ ಕಾರಣವೇನು? :

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಉತ್ತರದ ಕಡೆಯಿಂದ ಬೀಸುತ್ತಿರುವ ಶೀತ ಮಾರುತಗಳ ಪ್ರಭಾವದಿಂದ ನಗರದಲ್ಲಿ ತಾಪಮಾನ ಕಡಿಮೆಯಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಕಾಶವು ಭಾಗಶಃ ಮೋಡ ಕವಿದಂತಿದ್ದು, ತಂಪಾದ ಗಾಳಿ ಬೀಸುತ್ತಿರುವುದು ಚಳಿಯ ತೀವ್ರತೆಯನ್ನು ಹೆಚ್ಚಿಸಿದೆ.
ಹದಗೆಟ್ಟ ಗಾಳಿಯ ಗುಣಮಟ್ಟ (AQI):

ಕೇವಲ ಚಳಿ ಮಾತ್ರವಲ್ಲದೆ, ನಗರದ ವಾಯು ಗುಣಮಟ್ಟದ ಬಗ್ಗೆಯೂ ಹವಾಮಾನ ಕುರಿತು ಮಾಹಿತಿ ನೀಡುವ ಎಕ್ಯುಐ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮಾಹಿತಿಯು ಕಳವಳ ವ್ಯಕ್ತಪಡಿಸಿದೆ. ನವೆಂಬರ್ 28ರ ದತ್ತಾಂಶಗಳ ಪ್ರಕಾರ, ನಗರದ ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 150 ರಿಂದ 200ರ ಗಡಿ ದಾಟಿದ್ದು, ‘ಅನಾರೋಗ್ಯಕರ’ (Moderate to Poor) ಶ್ರೇಣಿಯಲ್ಲಿದೆ. ತಾಪಮಾನ ಇಳಿಕೆಯಾದಾಗ ಗಾಳಿಯಲ್ಲಿನ ಧೂಳಿನ ಕಣಗಳು (Particulate Matter) ಕೆಳಮಟ್ಟದಲ್ಲೇ ತೇಲಾಡುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗಿ ಕಾಣುತ್ತಿದೆ.
ಮುನ್ನೆಚ್ಚರಿಕೆ ಕ್ರಮಗಳು:
ಚಳಿ ಹಾಗೂ ಮಾಲಿನ್ಯದ ಕಾರಣದಿಂದಾಗಿ ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಹೆಚ್ಚುವ ಸಾಧ್ಯತೆಯಿದೆ. ಹಿರಿಯ ನಾಗರೀಕರು ಮತ್ತು ಮಕ್ಕಳು ಮುಂಜಾನೆ ಹಾಗೂ ತಡರಾತ್ರಿ ಹೊರಗಡೆ ಸಂಚರಿಸುವಾಗ ಬೆಚ್ಚಗಿನ ಉಡುಪು ಧರಿಸಲು ಹಾಗೂ ಮಾಸ್ಕ್ ಬಳಸಲು ವೈದ್ಯರು ಸಲಹೆ ನೀಡಿದ್ದಾರೆ. (Image credit : Gemini, Aqi.in)























