ಬೆಂಗಳೂರು, ಅ. 26 www.bengaluruwire.com : ರಾಜ್ಯ ಸರ್ಕಾರ ಬೆಂಗಳೂರಿನ ‘ಬಿ ಖಾತಾ’ ಆಸ್ತಿಗಳನ್ನು ‘ಎ ಖಾತಾ’ಗೆ ಪರಿವರ್ತನೆ ಮಾಡುವ ಐತಿಹಾಸಿಕ ತೀರ್ಮಾನಕ್ಕೆ ವಿದ್ಯಾವಂತ ನಾಗರೀಕರಿಂದ ಮುಕ್ತ ಪ್ರಶಂಸೆ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕ್ರಮವನ್ನು ‘ಖಾಲಿ ಟ್ರಂಕ್’ ಎಂದು ಟೀಕಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ‘ಬೆಂಗಳೂರು ನಡಿಗೆ’ (Walk with Bengaluru) ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಡಿಸಿಎಂ, ಸರ್ಕಾರದ ನಿರ್ಧಾರಕ್ಕೆ ವ್ಯಕ್ತವಾದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.
ನಾಗರೀಕರಿಂದ ಮುಕ್ತ ಪ್ರಶಂಸೆ :

ಕಾರ್ಯಕ್ರಮದ ವೇಳೆ, ಒಬ್ಬ ನಾಗರೀಕರು ಸರ್ಕಾರದ ಕ್ರಮವನ್ನು ಸ್ವಾಗತಿಸಿ, “ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವುದು ಅತ್ಯುತ್ತಮ ಕೆಲಸ. ಈ ಪರಿವರ್ತನೆಗಾಗಿ ಅನೇಕ ನಾಗರೀಕರು ಹಲವು ವರ್ಷಗಳಿಂದ ಕಾಯುತ್ತಿದ್ದರು,” ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಎ ಖಾತಾ ನಿಮ್ಮ ಆಸ್ತಿ ದಾಖಲೆ. ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ್ಮ ಸರ್ಕಾರದ ಆರನೇ ಗ್ಯಾರಂಟಿ. ಈ ಸೌಲಭ್ಯಕ್ಕಾಗಿ ನಾವು ಕೇವಲ ಶೇ. 5 ಅಭಿವೃದ್ಧಿ ಶುಲ್ಕ ಪಾವತಿಸಲು ಕೇಳಿದ್ದೇವೆ. ನಿಮ್ಮಂತಹ ಪ್ರಜ್ಞಾವಂತ ನಾಗರೀಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದಗಳು,” ಎಂದು ನಮಿಸಿದರು.
ಕುಮಾರಸ್ವಾಮಿ ‘ಖಾಲಿ ಟ್ರಂಕ್’ :
ಬಿ ಖಾತಾ ಪರಿವರ್ತನೆ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ‘ಖಾಲಿ ಟ್ರಂಕ್’ ಎಂದು ವಾಗ್ದಾಳಿ ನಡೆಸಿದರು.
ಧರಣಿ ಹಿಂಪಡೆದ ‘ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ’ :
ಈ ಮಧ್ಯೆ, ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸಂಘದ ಸದಸ್ಯರನ್ನು ಸಮಾಲೋಚನಾ ಪ್ರಕ್ರಿಯೆಯಲ್ಲಿ ಸೇರಿಸದ ಕಾರಣದಿಂದ ಬಹಿಷ್ಕರಿಸಲು ನಿರ್ಧರಿಸಿದ್ದ ‘ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ’ (CPWA) ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಹಿಂಪಡೆದಿದೆ.

“ನಮ್ಮ ಬಹಿಷ್ಕಾರದ ನಿರ್ಧಾರವು ಉಪಮುಖ್ಯಮಂತ್ರಿಗಳ ವಿರುದ್ಧವಾಗಿರಲಿಲ್ಲ. ಬದಲಿಗೆ, ಕಬ್ಬನ್ ಪಾರ್ಕ್‌ನ ರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವದ ಮಹತ್ವವನ್ನು ಅರಿತುಕೊಳ್ಳದ ಅಧಿಕಾರಿಗಳ ವಿರುದ್ಧವಾಗಿತ್ತು,” ಎಂದು ಸಂಘದ ಅಧ್ಯಕ್ಷ ಎಸ್. ಉಮೇಶ್ ಸ್ಪಷ್ಟಪಡಿಸಿದರು. ಸಂಘವು ಈಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಡಿಸಿಎಂ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಲು ಮತ್ತು ಪಾರ್ಕ್‌ನ ಸಂರಕ್ಷಣೆಗೆ ತಮ್ಮ ಸಲಹೆಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಿದೆ.
ಶ್ವಾನವನ್ನು ಪ್ರೀತಿಯಿಂದ ಮೈದಡವಿದ ಡಿಕೆ :

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಚಾಮರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಗಳಿಗೆ ನಮನ ಸಲ್ಲಿಸಿದರು. ಹಿರಿಯರು, ಮಕ್ಕಳ ಜತೆ ಸಂವಾದ ನಡೆಸಿದ ಅವರು, ಅವರ ಸಮಸ್ಯೆಗಳನ್ನು ಆಲಿಸಿ ಸಲಹೆಗಳನ್ನು ಪಡೆದರು. ಅಲ್ಲದೇ, ವಾಯುವಿಹಾರಿಗಳ ಜತೆ ಬಂದಿದ್ದ ಸೈಬೆರಿಯನ್ ಹಸ್ಕಿ ಶ್ವಾನವನ್ನು ಪ್ರೀತಿಯಿಂದ ಮೈದಡವಿ, ಮುಂಜಾನೆ ಸಂಗೀತ ಕಚೇರಿ ನಿರತ ವಾದ್ಯಗಾರ್ತಿಗೆ ಶುಭಕೋರಿದರು.























