ಬೆಂಗಳೂರು, ಅ.09 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಮಹತ್ವದ ನಿರ್ಧಾರದೊಂದಿಗೆ ‘ಬಂಪರ್ ಗಿಫ್ಟ್’ ನೀಡಿದೆ. ಇನ್ನು ಮುಂದೆ ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ ‘ಋತುಚಕ್ರ ರಜೆ ನೀತಿ, 2025’ (Menstrual Leave Policy, 2025) ಜಾರಿಗೆ ತರಲು ಗುರುವಾರ (ಅ.09) ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಈ ನಿರ್ಧಾರದಂತೆ, ರಾಜ್ಯದ ಸರ್ಕಾರೀ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಖಾಸಗಿ ಕೈಗಾರಿಕಾ ವಲಯಗಳೂ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲೂ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡಬೇಕಾಗಲಿದೆ.
ವೇತನ ಸಹಿತ ವಾರ್ಷಿಕ 12 ದಿನಗಳ ರಜೆ:

ಕಳೆದ ಒಂದು ವರ್ಷದಿಂದ ಈ ನಿಯಮ ಜಾರಿಗೆ ತರಲು ಸರ್ಕಾರ ಪ್ರಯತ್ನ ನಡೆಸುತ್ತಿತ್ತು. ಮಹಿಳೆಯರು ಉದ್ಯೋಗದ ಜೊತೆಗೆ ಮನೆಯನ್ನೂ ನಿಭಾಯಿಸುತ್ತಾರೆ. ಮುಟ್ಟಿನ ಸಮಯದಲ್ಲಿ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಹೀಗಾಗಿ ಮುಟ್ಟಿನ ರಜೆ ನೀಡುವ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸಲಾಗಿತ್ತು.
ಈ ನೀತಿಯನ್ವಯ ಮಹಿಳೆಯರಿಗೆ ವಾರ್ಷಿಕವಾಗಿ 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಸಿಗಲಿದೆ. ವೇತನ ಸಹಿತವಾಗಿ ಮುಟ್ಟಿನ ರಜೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಬಿಹಾರವಾಗಿದ್ದು, ಇದೀಗ ಕರ್ನಾಟಕವೂ ಸಹ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳದ ಸಾಲಿಗೆ ಸೇರಿದೆ. ಇದನ್ನೂ ಓದಿ : BW Special | PM Suryaghar Scheme | ಸೂರ್ಯಘರ್ ‘ಮುಫ್ತ್ ಬಿಜಲಿ’ ಯ ಹೆಸರಲ್ಲಿದೆಯಾ ಗೊಂದಲ?: ರಾಜ್ಯದಲ್ಲಿ ಹೇಗೆ ಸಾಗುತ್ತಿದೆ ಗೊತ್ತಾ ಕೇಂದ್ರದ ಯೋಜನೆ?
ಸಚಿವ ಸಂಪುಟ ಸಭೆಯ ಇತರೆ ಪ್ರಮುಖ ನಿರ್ಧಾರಗಳು:
ಇಂದಿರಾ ಆಹಾರ ಕಿಟ್ ವಿತರಣೆಗೆ ಒಪ್ಪಿಗೆ:
ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಎಎವೈ ಮತ್ತು ಪಿಎಚ್‌ಎಚ್ ಪಡಿತರ ಫಲಾನುಭವಿಗಳಿಗೆ ಪರ್ಯಾಯವಾಗಿ ಇಂದಿರಾ ಆಹಾರ ಕಿಟ್‌ಗಳನ್ನು (ಪೌಷ್ಠಿಕ ಆಹಾರ ಕಿಟ್- ತೊಗರಿ ಬೆಳೆ 2ಕೆಜಿ, ಅಡುಗೆ ಎಣ್ಣೆ 1ಕೆಜಿ, ಸಕ್ಕರೆ 1ಕೆಜಿ, ಉಪ್ಪು 1ಕೆಜಿ) ವಿತರಿಸಲು ಸಂಪುಟ ಸಭೆ ನಿರ್ಣಯಿಸಿದೆ. ಈ ಯೋಜನೆಗೆ ರೂ.61.19 ಕೋಟಿಗಳ ಮೊತ್ತವನ್ನು ಮೀಸಲಿಡಲಾಗಿದೆ.
ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿ ಸಡಿಲಿಕೆ:
ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿ ಸೆಪ್ಟೆಂಬರ್ 29ರಂದು ಹೊರಡಿಸಿದ್ದ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಇತರ ನಿರ್ಧಾರಗಳು:
* 5ನೇ ರಾಜ್ಯ ಹಣಕಾಸು ಆಯೋಗದ ಅವಧಿ ವಿಸ್ತರಣೆ: ಇದರ ಅವಧಿಯನ್ನು ನವೆಂಬರ್ 2025ರವರೆಗೆ ವಿಸ್ತರಿಸಲು ನಿರ್ಣಯ.
* ಶ್ರಮಿಕ ವಸತಿ ಶಾಲೆಗಳ ಸ್ಥಾಪನೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ರೂ.405.55 ಕೋಟಿ ಅಂದಾಜು ಮೊತ್ತದಲ್ಲಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
* ಸೇತುವೆಗಳ ಪುನರ್ ನಿರ್ಮಾಣ: ಲೋಕೋಪಯೋಗಿ ಇಲಾಖೆಯಡಿ ಸೇತುವೆಗಳ ಪುನರ್ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು ಒಟ್ಟಾರೆಯಾಗಿ ₹2000 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ. ಮೊದಲ ಹಂತದಲ್ಲಿ 39 ಬೃಹತ್ ಸೇತುವೆಗಳ ಪುನರ್ ನಿರ್ಮಾಣಕ್ಕೆ ₹1000 ಕೋಟಿ ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ.
* ಕನಕಪುರದಲ್ಲಿ ವೈದ್ಯಕೀಯ ಕಾಲೇಜು: ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು (150 ಎಂಬಿಬಿಎಸ್ ಪ್ರವೇಶ ಮಿತಿ) ಸ್ವಾಯತ್ತ ಸ್ಥಾನಮಾನದೊಂದಿಗೆ ಪ್ರಾರಂಭಿಸಲು ಮತ್ತು ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆ, ವಸತಿ ನಿಲಯಗಳ ನಿರ್ಮಾಣಕ್ಕೆ ₹550 ಕೋಟಿ ಅಂದಾಜು ಮೊತ್ತದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.






















