ಬೆಂಗಳೂರು, ಸೆ.18 www.bengaluruwire.com : ದೇಶದಲ್ಲಿಯೇ ಪ್ರಾಣಿ ಕಲ್ಯಾಣದಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಲಾಗಿದ್ದು, ಕರ್ನಾಟಕದಲ್ಲಿ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿದ್ದ ‘ವಾಸಿಕರನ್’ ಎಂಬ ಕರಡಿಗೆ ಮೂರು ದಿನಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಂತರ ಕೃತಕ ಕಾಲನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಇದು ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಕರಡಿಯೊಂದಕ್ಕೆ ಪ್ರೊಸ್ಥೆಟಿಕ್ ಕಾಲು ಅಳವಡಿಸಿದ ದಾಖಲೆಯಾಗಿದೆ. ಈ ಮಹತ್ವದ ಶಸ್ತ್ರಚಿಕಿತ್ಸೆಯು ಬೆಂಗಳೂರಿನ ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರದಲ್ಲಿ (Bannerghatta Bear Rescue Centre) ನಡೆದಿದೆ.
ಭಯಾನಕ ಬಲೆಯಿಂದ ಪಾರಾದ ಕರಡಿ:

ಕೆಲ ವರ್ಷಗಳ ಹಿಂದೆ ಬೇಟೆಗಾರರು ಇಟ್ಟಿದ್ದ ಭಯಾನಕ ಉರುಳು ಬಲೆಗೆ ಸಿಲುಕಿ ಗಾಯಗೊಂಡಿದ್ದ ವಾಸಿಯನ್ನು ರಕ್ಷಿಸಿ ಬನ್ನೇರುಘಟ್ಟ ರಕ್ಷಣಾ ಕೇಂದ್ರಕ್ಕೆ ಕರೆತರಲಾಗಿತ್ತು. ಗಾಯವು ತೀವ್ರವಾಗಿದ್ದರಿಂದ ಅದರ ಎಡಗಾಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗಿತ್ತು. ನಂತರದ ದಿನಗಳಲ್ಲಿ ಮೂರು ಕಾಲಿನ ಸಹಾಯದಿಂದಲೇ ಬದುಕಲು ವಾಸಿಕರನ್ ಹೊಂದಿಕೊಂಡಿತ್ತು. ಆದರೆ ಮೂರು ಕಾಲುಗಳ ಮೇಲೆ ನಡೆಯುವುದರಿಂದ ಅದರ ಸೊಂಟ ಮತ್ತು ಬೆನ್ನಿನ ಮೇಲೆ ದೀರ್ಘಕಾಲದ ಒತ್ತಡ ಉಂಟಾಗಿ ನೋವು ಅನುಭವಿಸುತ್ತಿತ್ತು.

“ವಿಝಾರ್ಡ್ ಆಫ್ ಪಾಸ್” ನಿಂದ ಕರಡಿಗೆ ಕೃತಕ ಕಾಲು :

ವಾಸಿ ಕರಡಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಪ್ರಸಿದ್ಧ ಪ್ರಾಣಿ ಕೃತಕ ಅಂಗತಜ್ಞ, “ವಿಝಾರ್ಡ್ ಆಫ್ ಪಾಸ್” ಎಂದೇ ಖ್ಯಾತಿ ಪಡೆದ ಡೆರಿಕ್ ಕಂಪಾನಾ (Derrick Campana) ಅವರು ವೈಲ್ಡ್‌ಲೈಫ್ ಎಸ್.ಒ.ಎಸ್. (Wildlife SOS) ಜೊತೆ ಕೈ ಜೋಡಿಸಿದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಈ ಯೋಜನೆಯು ಕಾರ್ಯರೂಪಕ್ಕೆ ಬಂದಿತು.
ಕೃತಕ ಕಾಲನ್ನು ಕರಡಿಗೆ ಅಳವಡಿಸುವ ಕಾರ್ಯವಿಧಾನವು ಮೂರು ದಿನಗಳ ಕಾಲ ನಡೆಯಿತು. ಕರಡಿಯ ನೈಸರ್ಗಿಕ ಚಲನೆಗಳಾದ ಅಗೆಯುವುದು, ಹತ್ತುವುದು ಮತ್ತು ಆಹಾರ ಅರಸುವಂತಹ ಚಟುವಟಿಕೆಗಳನ್ನು ತಡೆದುಕೊಳ್ಳಲು ಸಾಧ್ಯವಾಗುವಂತಹ ಬಲವಾದ ಅಚ್ಚನ್ನು ಡೆರಿಕ್ ಕಂಪಾನಾ ರಚಿಸಿದರು.
ಕೃತಕ ಕಾಲು ಬಳಸಿ ಯಶಸ್ವಿಯಾಗಿ ಹೆಜ್ಜೆಯಿಟ್ಟು ನಡೆದ ವಾಸಿ:
ವಾಸಿ ತನ್ನ ಹೊಸ ಕೃತಕ ಕಾಲಿನಿಂದ ಮೊದಲ ಹೆಜ್ಜೆ ಇಟ್ಟ ಕ್ಷಣ ಒಂದು ಪವಾಡವೇ ಸರಿ. ಯಾವುದೇ ನೋವು ಅಥವಾ ಆಯಾಸವಿಲ್ಲದೆ ಅದು ಚಲಿಸತೊಡಗಿತು. ಈ ಹೊಸ ಕೃತಕ ಕಾಲು, ಕರಡಿಯ ಭವಿಷ್ಯವನ್ನು ಸುರಕ್ಷಿತಗೊಳಿಸಿದೆ ಎಂದು ವೈಲ್ಡ್‌ಲೈಫ್ ಎಸ್.ಒ.ಎಸ್.ನ ಹಿರಿಯ ಪಶುವೈದ್ಯ ಅಧಿಕಾರಿ ಡಾ. ಅರುಣ್ ಎ. ಷಾ ತಿಳಿಸಿದ್ದಾರೆ. ಈ ತಂತ್ರಜ್ಞಾನ ಕರಡಿಯ ನೋವನ್ನು ಮಾತ್ರವಲ್ಲದೆ, ಅದರ ನಡೆಯುವ ಸ್ವಾತಂತ್ರ್ಯವನ್ನು ಮರಳಿ ತಂದಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯಕಾರಿ ನಿರ್ದೇಶಕ ಎ.ವಿ. ಸೂರ್ಯ ಸೇನ್ ಹೇಳಿದರು.
ವೈಲ್ಡ್‌ಲೈಫ್ ಎಸ್.ಒ.ಎಸ್. ಸಹ-ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಸತ್ಯನಾರಾಯಣ, “ವಾಸಿ ಬದುಕು ಹೃದಯ ವಿದ್ರಾವಕ ಹಾಗೂ ಸ್ಪೂರ್ತಿದಾಯಕವಾಗಿದೆ. ಮಾನವನ ಕ್ರೌರ್ಯದಿಂದ ಬದುಕುಳಿದು, ತನ್ನ ನೋವಿನೊಂದಿಗೆ ಹೊಂದಿಕೊಂಡು ಈಗ ವಿಜ್ಞಾನ ಮತ್ತು ಸಹಾನುಭೂತಿಯಿಂದ ಮತ್ತೆ ಚೇತರಿಸಿಕೊಂಡಿದೆ” ಎಂದು ಹೇಳಿದರು.
ಕರಡಿಗೆ ಅಳವಡಿಸಿದ ಕೃತಕ ಕಾಲಿನ ಈ ಕಾರ್ಯವಿಧಾನವು ಪ್ರಾಣಿ ಕಲ್ಯಾಣ ಮತ್ತು ಜೈವಿಕ ಯಂತ್ರಶಾಸ್ತ್ರದಲ್ಲಿ ಒಂದು ಜಾಗತಿಕ ಮೈಲಿಗಲ್ಲಾಗಿದೆ. ಆದರೆ ಇದು ಕರಡಿಗಳ ಬೇಟೆ ಮತ್ತು ಅವುಗಳ ಸಂರಕ್ಷಣೆಯ ತುರ್ತು ಅವಶ್ಯಕತೆಯನ್ನೂ ಒತ್ತಿ ಹೇಳುತ್ತದೆ.






















