ಬೆಂಗಳೂರು, ಆ.07 www.bengaluruwire.com : ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿ ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆ ಮಾಡಲಿರುವ ಬೆನ್ನಲ್ಲೇ, ಈ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ತಾರಕಕ್ಕೇರಿದೆ.
ಯೆಲ್ಲೋ ಲೈನ್ ಉದ್ಘಾಟನೆಗೆ ‘ಸಣ್ಣ ಹುಡುಗ ಅನಗತ್ಯ ಅವಸರ ಮಾಡುತ್ತಿದ್ದಾನೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಮಾರ್ಗದ ಉದ್ಘಾಟನೆ ಕುರಿತು ಡಿ.ಕೆ. ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಅವರನ್ನು ಉದ್ದೇಶಿಸಿ, “ಅನುಭವವಿಲ್ಲದ ಆತುರದ ಹುಡುಗ, ಈ ಕೆಲಸಗಳನ್ನು ಆತುರದಲ್ಲಿ ಮಾಡಲು ಆಗುವುದಿಲ್ಲ” ಎಂದು ಹೇಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಸಂಸದ ತೇಜಸ್ವಿ ಸೂರ್ಯ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಪ್ರಕಟಿಸಿದ್ದಾರೆ. “ಹೌದು, ನಾನು ಅವಸರದಲ್ಲಿದ್ದೇನೆ, ಏಕೆಂದರೆ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳಲು ದಶಕಗಳು ಬೇಕಾಗಬಾರದು ಎಂದು ನಾನು ನಂಬಿದ್ದೇನೆ.

ಬೆಂಗಳೂರಿನ ಜನತೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸಮಯ ವ್ಯರ್ಥ ಮಾಡುವುದನ್ನು ನಾನು ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷ ವಿಳಂಬ ರಾಜಕಾರಣವನ್ನು ಪ್ರತಿನಿಧಿಸುತ್ತದೆ. ಆದರೆ ನಾನು ಮೋದಿ ಅವರ ಹೊಸ ಭಾರತವನ್ನು ಪ್ರತಿನಿಧಿಸುತ್ತೇನೆ. ಕೇಂದ್ರ ಸರ್ಕಾರ ಯೋಜನೆಯನ್ನು ಆರಂಭಿಸಿ, ಅದನ್ನು ಉದ್ಘಾಟಿಸುವುದೂ ಸಹ ಅವರೇ” ಎಂದು ಸೂರ್ಯ ಬರೆದಿದ್ದಾರೆ.
ಯಾವಾಗ, ಎಲ್ಲಿದ್ದೀರಿ? ಎಂಬ ಪ್ರಶ್ನೆಗಳ ಸುರಿಮಳೆ:
ಯೆಲ್ಲೋ ಲೈನ್ ಯೋಜನೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರ ಪಾತ್ರದ ಕುರಿತು ತೇಜಸ್ವಿ ಸೂರ್ಯ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗಳ ಸಮಯದಲ್ಲಿ, ಪೂರ್ಣಾವಧಿ ಬಿಎಂಆರ್‌ಸಿಎಲ್ ಎಂಡಿ ನೇಮಕಕ್ಕಾಗಿ ಹೋರಾಡಿದಾಗ, ಮತ್ತು ರೋಲಿಂಗ್ ಸ್ಟಾಕ್ ಪೂರೈಕೆಗಾಗಿ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಿದಾಗ ಡಿ.ಕೆ.ಶಿವಕುಮಾರ್ ಎಲ್ಲಿದ್ದರು ಎಂದು ಸೂರ್ಯ ಪ್ರಶ್ನಿಸಿದ್ದಾರೆ.
ವಿದೇಶಿ ಇಂಜಿನಿಯರ್‌ಗಳಿಗೆ ವೀಸಾ ಪಡೆಯಲು ಪ್ರಯತ್ನಿಸಿದಾಗ ಹಾಗೂ ಉದ್ಘಾಟನೆಗೆ ನಿರ್ದಿಷ್ಟ ದಿನಾಂಕಕ್ಕಾಗಿ ತಾವು ನಾಗರಿಕರೊಂದಿಗೆ ಪ್ರತಿಭಟನೆ ನಡೆಸಿದಾಗಲೂ ಡಿಸಿಎಂ ಕಾಣಿಸಿಕೊಂಡಿರಲಿಲ್ಲ ಎಂದು ಸೂರ್ಯ ಹೇಳಿದ್ದಾರೆ.
ಪ್ರಧಾನಿ ಭೇಟಿಗೆ ಕೇವಲ ಮೂರು ದಿನಗಳ ಮೊದಲು ಮಾಧ್ಯಮಗಳ ಮುಂದೆ ಬಂದು, ಈ ಯೋಜನೆ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಫೋಟೋ-ಆಪ್ ರಾಜಕಾರಣವಲ್ಲ, ಬದಲಾಗಿ ಕಾರ್ಯಕ್ಷಮತೆ ಆಧಾರಿತ ರಾಜಕಾರಣದ ಸಮಯ ಎಂದು ಸೂರ್ಯ ತಮ್ಮ ಪೋಸ್ಟ್‌ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋ ಯೆಲ್ಲೋ ಲೈನ್ ಮಹತ್ವ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಪಾಲುದಾರಿಕೆಯಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ದಕ್ಷಿಣ ಬೆಂಗಳೂರನ್ನು ನಗರದ ಕೇಂದ್ರ ಭಾಗಕ್ಕೆ ಸಂಪರ್ಕಿಸುವ ಈ ಮಾರ್ಗ, ಮೆಟ್ರೋ ಹಂತ-3 ರ ನಿರ್ಮಾಣಕ್ಕೂ ನಾಂದಿ ಹಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10ರಂದು ಈ ಮಾರ್ಗವನ್ನು ಉದ್ಘಾಟಿಸಲಿದ್ದು, ₹15,611 ಕೋಟಿ ವೆಚ್ಚದ ಮೆಟ್ರೋ ಹಂತ-3ರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.






















