ಕನಕಪುರ, ಜು.06 www.bengaluruwire.com : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಕುರಿತು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದು ಹೇಳುವುದಿಲ್ಲ, ಆದರೆ ಅಭಿವೃದ್ಧಿ ಕೆಲಸಗಳನ್ನೂ ಮಾಡಬೇಕು ಎಂದು ಶ್ರೀಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ತಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಎಲ್ಲೆಡೆ ಜನರು ಇದೇ ಕೊರಗನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಕೆಶಿಗೆ ಉನ್ನತ ಸ್ಥಾನ ನೀಡಿ, ರಾಷ್ಟ್ರೀಯ ನಾಯಕರು ಒಡಂಬಡಿಕೆ ಪಾಲಿಸಿ :

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಶ್ರೀಗಳು, “ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ತಂದುಕೊಟ್ಟವರು ಡಿ.ಕೆ. ಶಿವಕುಮಾರ್. ಅವರು ಪಕ್ಷದ ಅಧ್ಯಕ್ಷರಾದ ಬಳಿಕ ಕ್ರಿಯಾಶೀಲರಾಗಿ, ಚುರುಕಾಗಿ ಪಕ್ಷ ಸಂಘಟಿಸಿದರು. ಚುನಾವಣೆ ನಂತರ ಅವರಿಗೆ ಉನ್ನತ ಸ್ಥಾನ ಸಿಗಬೇಕಾಗಿತ್ತು. ಆದರೆ ಪಕ್ಷದ ವರಿಷ್ಠರ ಭಾವನೆಗೆ ಸ್ಪಂದಿಸಿ, ಉದಾರ ಮನೋಭಾವದಿಂದ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿ, ಉತ್ತಮ ಕಾರ್ಯ ಮಾಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
ರಾಜ್ಯದ ನಾಯಕರು ಹಾಗೂ ಪಕ್ಷದ ವರಿಷ್ಠರು ಮುಂದಿನ ದಿನಗಳಲ್ಲಿ ತಮ್ಮ ಒಡಂಬಡಿಕೆಯಂತೆ ಶಿವಕುಮಾರ್ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಆಗ ಇವರ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ಆಶಿಸಿದರು. ಅಲ್ಲದೆ, “ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಆದ ಒಡಂಬಡಿಕೆಯಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೆ ಗೌರವವಿದೆ” ಎಂದು ಸ್ಪಷ್ಟಪಡಿಸಿದರು.
ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಇರಲಿ :
ಕಾಂಗ್ರೆಸ್ ಪಕ್ಷದ ನಾಯಕತ್ವದ ವಿಚಾರವಾಗಿ ಪಕ್ಷದ ನಾಯಕರಿಂದಲೇ ಮಾತುಗಳು ಹೊರಬರುತ್ತಿದ್ದು, ಇದರ ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟನೆ ನೀಡಿ ಗೊಂದಲ ನಿವಾರಿಸಬೇಕು. ಶಿವಕುಮಾರ್ ಅವರಿಗೂ ಉನ್ನತ ಸ್ಥಾನ ಸಿಕ್ಕರೆ ಅವರಿಗೂ ಸಮಾಧಾನವಾಗಲಿದೆ ಎಂದರು. ಮುಖ್ಯಮಂತ್ರಿ ಸ್ಥಾನ ಸಿಗುವ ತನಕ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ ಎನ್ನುವ ತಾತ್ವಿಕತೆ ಪಕ್ಷದ ಉನ್ನತ ನಾಯಕರಿಗೆ ಇಲ್ಲ, ಆ ಸ್ಥಾನ ಭದ್ರಪಡಿಸಿದರೆ, ಈ ಸ್ಥಾನ ಬಿಟ್ಟುಕೊಡುವುದರಲ್ಲಿ ಸಂದೇಹವಿಲ್ಲ ಎಂದರು. ರಾಜಕೀಯದಲ್ಲಿ ರೀತಿ, ನೀತಿ, ನಿಯತ್ತು ಇರಬೇಕು. ಹಿಂದೆ ಬಿಜೆಪಿಯಲ್ಲಿ ಆದಂತಹ ಘಟನೆ ಕಾಂಗ್ರೆಸ್‌ನಲ್ಲಿ ಆಗಬಾರದು ಎಂಬುದು ನಮ್ಮ ಮಾತು ಎಂದು ಶ್ರೀಗಳು ಕಿವಿಮಾತು ಹೇಳಿದರು.
ಮಾನವ ಕಲ್ಯಾಣವೇ ಎಲ್ಲಾ ಧರ್ಮಗಳ ಉದ್ದೇಶ
ಧರ್ಮಗಳ ಉದ್ದೇಶದ ಬಗ್ಗೆ ಮಾತನಾಡಿದ ರಂಭಾಪುರಿ ಶ್ರೀಗಳು, “ಧರ್ಮ ಯಾವುದೇ ಆದರೂ ಅದೆಲ್ಲದರ ಮೂಲ ಉದ್ದೇಶ ಮಾನವ ಕಲ್ಯಾಣ. ಮನುಷ್ಯ ಮನುಷ್ಯನಾಗಿ ಬಾಳಿ ಬದುಕಬೇಕು ಎಂದು ಎಲ್ಲಾ ಧರ್ಮಗಳು ಸಾರುತ್ತವೆ” ಎಂದು ತಿಳಿಸಿದರು. ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಈ ಧರ್ಮ ಸ್ವೀಕಾರ ಮಾಡಿ, ಧರ್ಮವನ್ನು ಮತ್ತಷ್ಟು ಬೆಳೆಸಿದರು ಎಂದು ಸ್ಮರಿಸಿದರು.
“ಕಲಿಗಾಲದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ನಡೆಯಬಾರದ ಘಟನೆ ನಡೆಯುತ್ತಿರುವುದನ್ನು ನೋಡಿದರೆ ಆಧ್ಯಾತ್ಮಿಕ ಗುರುಗಳ ಮನಸ್ಸಿಗೆ ಬಹಳಷ್ಟು ನೋವಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು. ಸಾಹಿತಿ ಸಿದ್ಧಯ್ಯ ಪುರಾಣಿಕರ ಮಾತನ್ನು ಉಲ್ಲೇಖಿಸಿ, “ಏನಾದರೂ ಸರಿಯೆ – ಮೊದಲು ಮಾನವನಾಗು” ಎಂಬ ಸಂದೇಶವನ್ನು ಶ್ರೀಗಳು ಸಾರಿದರು.





















