ಬೆಂಗಳೂರು, ಮಾ.03 www.bengaluruwire.com : ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಖಾಸಗಿ ಬಡಾವಣೆಗಳ ಡೆವಲಪರ್ ಗಳು ಕೇವಲ ಪ್ರಾಧಿಕಾರವೊಂದರಲ್ಲೇ ಅಲ್ಲದೆ ಇನ್ನು ಮುಂದೆ ಸರ್ಕಾರದ ಸಹಮತಿ (Concurrence) ಪಡೆಯಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ. ಎಸ್. ಸುರೇಶ (ಬೈರತಿ) (Urban Development and Town Planning Minister B S Suresh) ಅವರು ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಯೋಜನಾ ಪ್ರಾಧಿಕಾರಗಳು ಸಾಧಿಸಿರುವ ಪ್ರಗತಿ ಕುರಿತಂತೆ ವಿಕಾಸಸೌಧದಲ್ಲಿ ಸೋಮವಾರ ಪರಿಶೀಲನಾ ಸಭೆ ನಡೆಸಿದ ಸಚಿವ ಬಿ.ಎಸ್. ಸುರೇಶ (ಬೈರತಿ) ಅವರು, ಖಾಸಗಿ ಬಡಾವಣೆಗಳಲ್ಲಿ ನಾಗರೀಕ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಅನಧಿಕೃತ ಬಡಾವಣೆಗಳ ನಿರ್ಮಾಣಗಳನ್ನು ತಡೆಗಟ್ಟುವ ಅಗತ್ಯವಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯ ಅನ್ವಯ ನಾಗರಿಕ ಸೌಲಭ್ಯ ನಿವೇಶನ ಮೀಸಲು, ಒಳಚರಂಡಿ ವ್ಯವಸ್ಥೆ, ಉದ್ಯಾನವನ, ರಸ್ತೆಗಳ ನಿರ್ಮಾಣ ನಿಯಮಾವಳಿಗಳಂತೆ ಖಾಸಗಿ ಬಡಾವಣೆಗಳಲ್ಲಿ ಈ ಸೌಲಭ್ಯಗಳನ್ನು ಜಾರಿಗೆ ತರಲು ಸಾಧ್ಯವಿದೆ. ಹೀಗಾಗಿ ಇನ್ನು ಮುಂದೆ ಕೇವಲ ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಖಾಸಗಿ ಬಡಾವಣೆಗಳ ಡೆವಲಪರ್ ಗಳು ಕೇವಲ ಪ್ರಾಧಿಕಾರವೊಂದರಲ್ಲೇ ಅಲ್ಲದೆ ಇನ್ನು ಮುಂದೆ ಸರ್ಕಾರದ ಸಹಮತಿಯನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಖಾಸಗಿಯವರು ಭೂಮಿಯನ್ನು ಹೊಂದಿಸಿಕೊಂಡು ಅಥವಾ ಖರೀದಿಸಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಏಕೆ ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಲ್ಲದೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ನು ರಚಿಸಿರುವುದು ಪ್ರಾಧಿಕಾರಗಳು ಬಡಾವಣೆಗಳನ್ನು ನಿರ್ಮಿಸಿ ರಾಜ್ಯದ ಜನ ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದಲೇ ಹೊರತು ಖಾಸಗಿ ಬಡಾವಣೆಗಳ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡಲು ಮಾತ್ರವಲ್ಲ ಎಂದು ಸಚಿವರು ಖಾರವಾಗಿ ನುಡಿದರು.
ರಾಜ್ಯ ಸರ್ಕಾರ ಸಹಮತಿ ಮತ್ತೊಂದು ಹಂತದ ಭ್ರಷ್ಟಾಚಾರಕ್ಕೆ ನಾಂದಿ? :
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ನೂತನ ಸೂಚನೆಯಂತೆ ಇನ್ನು ಮುಂದೆ ರಾಜ್ಯದಲ್ಲಿನ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಿ ಹಾಗೂ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸ್ಥಳೀಯವಾಗಿಯೇ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಅಧಿಕಾರಿಗಳ ಕೈಬಿಸಿ ಮಾಡಿ ಸಾಕಾಗಿ, ಬಡಾವಣೆ ನಿರ್ಮಾಣದ ನಕ್ಷೆ ಮಂಜೂರಾತಿ ಮತ್ತಿತರ ಅನುಮತಿಗೆ ತಿಂಗಳು ಗಟ್ಟಲೆ ಕಾದು, ಅದರ ಹೊರೆಯನ್ನು ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡುವವರಿಗೆ ವರ್ಗಾಯಿಸಿ ನಿವೇಶನಗಳ ದರ ಈಗಾಗಲೇ ಗಗನಮುಖಿಯಾಗಿದೆ. ಹೀಗಿರುವ ಕಾನೂನು ಕಾಯ್ದೆಯ ನೆಪದಲ್ಲಿ ಪ್ರಾಧಿಕಾರ ಅಥವಾ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದ ಬಡಾವಣೆ ರಚನೆಯ ಯೋಜನೆಗಳ ಕಡತಗಳಿಗೆ ಪುನಃ ಸರ್ಕಾರದ ಸಹಮತಿ ಪಡೆಯಬೇಕೆಂದರೆ ಇನ್ನಷ್ಟು ವಿಳಂಬ ಹಾಗೂ ಭ್ರಷ್ಟಾಚಾರಕ್ಕೆ ಕಾರಣವಾಗುವ ಹಾಗೂ ಇದರಿಂದಾಗಿ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾದ ನಿವೇಶನಗಳ ದರಗಳು ಸಾಮಾನ್ಯ ಜನರ ಕೈಗೆಟುಕದೆ ದುಬಾರಿಯಾಗುವ ಮತ್ತು ಕೇವಲ ಹಣವಂತರು ಮಾತ್ರ ನಿವೇಶನ ಖರೀದಿ ಮಾಡುವ ಪರಿಸ್ಥಿತಿ ಬರಲಿದೆ ಎಂಬ ಮಾತುಗಳು ಶಕ್ತಿಸೌಧದ ಪಡಸಾಲೆಯಲ್ಲಿ ಕೇಳಿಬಂದಿದೆ.
ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳು ಅನ್ವಯಿಸಿದರೆ ಸರ್ಕಾರದ ವತಿಯಿಂದ (ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ) ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳಿವೆ. ಇದು ತಾರತಮ್ಯದಿಂದ ಕೂಡಿದೆ. ಹೀಗಾಗಿ ಎಲ್ಲದಕ್ಕೂ ಅನ್ವಯವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಸಚಿವರು ಇದೇ ವೇಳೆ ಸೂಚಿಸಿದರು. ರೈತರ ಮನ ಒಲಿಸಿ ಅವರಿಂದ ಜಮೀನು ಪಡೆದು 50:50 ಅನುಪಾತದ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡುವುದು ಪ್ರಾಧಿಕಾರಗಳ ಕೆಲಸ. ಅದನ್ನು ಬಿಟ್ಟು ಖಾಸಗಿ ಬಡಾವಣೆ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡುವುದಷ್ಟೆ ಕೆಲಸವಲ್ಲ ಎಂದು ಸಚಿವರು ಕಿಡಿಕಾರಿದರು.
ನಗರಾಭಿವೃದ್ಧಿ ಪ್ರಾಧಿಕಾರಗಳು ಅಥವಾ ನಗರ ಯೋಜನಾ ಪ್ರಾಧಿಕಾರಗಳ ವತಿಯಿಂದಲೇ ಬಡಾವಣೆಗಳು ನಿರ್ಮಾಣವಾದರೆ, ಆ ಜಮೀನುಗಳಲ್ಲಿ ತಕಾರರು ಅಥವಾ ವ್ಯಾಜ್ಯಗಳು ಇರುವುದಿಲ್ಲ. ನಕ್ಷೆ ಕಾನೂನು ರೀತಿಯಲ್ಲಿ ಇರುತ್ತದೆ. ಇದರ ಜೊತೆಗೆ ಸರ್ಕಾರದ, ನಗರಾಭಿವೃದ್ಧಿ ಪ್ರಾಧಿಕಾರಗಳ ಮೇಲೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಡಾವಣೆ ರಚನೆ ಬಗ್ಗೆ ರೈತರ ಮನವೊಲಿಸಿ ಇಲ್ಲವಾದರೆ ಕಾನೂನು ರೀತ್ಯ ಸ್ವಾಧೀನಪಡಿಸಿಕೊಳ್ಳಿ :
ರಾಜ್ಯದಲ್ಲಿ ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸಿ ಸಾವಿರಾರು ನಿವೇಶನಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವಾಗ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರುಗಳಾದ ತಮ್ಮ ಕೈಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲವೆಂದು ಪ್ರಶ್ನಿಸಿದರು. ಜಮೀನು ಕೊಡಲು ಮುಂದೆ ಬರುವ ರೈತರನ್ನು ಸಂಪರ್ಕಿಸಿ. ಇಲ್ಲದೆ ಇದ್ದಾಗ ನೀವೇ ಮುಂದೆ ಹೋಗಿ ರೈತರ ಮನ ಒಲಿಸಿ ಜಮೀನನ್ನು ಪಡೆಯಿರಿ. ಇದು ಯಾವುದು ಇಲ್ಲದ ಸಂದರ್ಭದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರದಿಂದ ಅವಕಾಶವಿದೆ. ಇವುಗಳನ್ನು ಬಳಸಿಕೊಂಡು ಬಡಾವಣೆಗಳನ್ನು ನಿರ್ಮಾಣ ಮಾಡಬೇಕು ಎಂದು ಸಚಿವರಾದ ಬೈರತಿ ಸುರೇಶ ಅವರು ತಾಕೀತು ಮಾಡಿದರು.
ಬಡ್ಡಿ ಆಸೆಗಾಗಿ ಬ್ಯಾಂಕುಗಳಲ್ಲಿ ಪ್ರಾಧಿಕಾರದ ಹಣ ಠೇವಣಿ ಇಡಬೇಡಿ :
ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಯೋಜನಾ ಪ್ರಾಧಿಕಾರಗಳಲ್ಲಿ ಇರುವ ಹಣವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಹಣವಿದೆ ಎಂದು ಬಡ್ಡಿಗಾಗಿ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಬಾರದು. ಪ್ರಾಧಿಕಾರಗಳಲ್ಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದ ಸಚಿವರಾದ ಬೈರತಿ ಸುರೇಶ ಅವರು ಮತ್ತೆ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಅಷ್ಟರಲ್ಲಿ ಪಗ್ರತಿಯನ್ನು ಸಾಧಿಸಿರಬೇಕು ಎಂದು ಸಭೆಯಲ್ಲಿ ಹಾಜರಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರು ಮತ್ತು ಕಾರ್ಯದರ್ಶಿಗಳಿಗೆ ಸೂಚಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಎನ್. ವೆಂಕಟಾಚಲಪತಿ, ನಗರ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶಕರಾದ ತಿಪ್ಪೇಸ್ವಾಮಿ, ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ (ಬೆಂಗಳೂರು ಹೊರತುಪಡಿಸಿ) ಆಯುಕ್ತರು, ನಗರ ಯೋಜಕ ಸದಸ್ಯರು/ಕಾರ್ಯದರ್ಶಿಗಳು ಉಪಸ್ಥಿತರಿದ್ದರು.