ಬೆಂಗಳೂರು, ಜ.02 www.bengaluruwire.com : ನಗರದ ಅತಿ ಹಳೆಯ ಪ್ರದೇಶಗಳಲ್ಲೊಂದಾದ ಸಜ್ಜನರಾವ್ ಸರ್ಕಲ್ ಬಳಿಯ ವಿವಿಪುರಂ ತಿಂಡಿ ಬೀದಿ (VV Puram Food Street)ಯ ಫುಟ್ ಪಾತ್ ಹಾಗೂ ರಸ್ತೆಯನ್ನು ಸ್ಥಳೀಯ ಪ್ರದೇಶಕ್ಕೆ ಹೊಂದಿಕೊಳ್ಳುವಂತೆ ಬಿಬಿಎಂಪಿಯು ಕೋಟ್ಯಾಂತರ ರೂ. ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದೇ ಬಂತು. ಆ ಇಡೀ ರಸ್ತೆ, ಫುಟ್ ಪಾತ್ ಒತ್ತುವರಿ, ಸ್ವಚ್ಛತೆಯ ಕೊರತೆ ಹಾಗೂ ಕಸದ ಕೊಂಪೆಯಿಂದ ನಾರುತ್ತಿದೆ.
ನಗರದ ಫುಡ್ ಸ್ಟ್ರೀಟ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ವಿವಿ ಪುರಂ ತಿಂಡಿ ಬೀದಿಯಲ್ಲಿ ಒಟ್ಟು 30ಕ್ಕೂ ಹೆಚ್ಚು ಹೋಟೆಲ್, ಮಳಿಗೆಗಳಿವೆ. ಹಾಗೂ ಹಲವು ತಳ್ಳುಗಾಡಿಗಳಲ್ಲೂ ತಿಂಡಿ ತಿನಿಸು ಮಾರುತ್ತಾರೆ. ಇಲ್ಲಿನ ರಸ್ತೆಯು ಸಂಜೆ 6 ಗಂಟೆಯ ನಂತರ ಜನರಿಂದ ತುಂಬಿ ಹೋಗುತ್ತದೆ. ರಾತ್ರಿ 11 ಗಂಟೆಯ ತನಕವೂ ರಷ್ ಕಮ್ಮಿಯಾಗಲ್ಲ. ಆ ರಸ್ತೆ ಹಾಗೂ ಫುಟ್ ಪಾತ್ ಗಳನ್ನು ಅಲ್ಲಿನ ಆಹಾರ- ತಿಂಡಿ ಮಾಡುವ ಅಂಗಡಿಗಳೇ ಪೂರ್ತಿಯಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
ಗ್ರಾಹಕರಿಗೆ ಸೂಕ್ತ ರೀತಿ ವ್ಯವಸ್ಥೆ ಕಲ್ಪಿಸದ ವ್ಯಾಪಾರಿಗಳು :
ಗ್ರಾಹಕರಿಗೆ ಸೂಕ್ತ ರೀತಿ ಶುದ್ಧ ಕುಡಿಯುವ ನೀರು, ಕೈತೊಳೆಯಲು ಬೇಸಿನ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿಗೆ ಬರುವ ಗ್ರಾಹಕರು ರಸ್ತೆಯ ಬದಿ ನೀರು ಹರಿದು ಹೋಗಲು ಹಾಕಿದ ಮೋರಿ ಜಾಲರಿ ಬಳಿಯೇ ಕೈತೊಳೆಯುವಂತಾಗಿದೆ. ಆಹಾರ ಮಳಿಗೆಗಳು ಮತ್ತು ಮಾರಾಟಗಾರರಿಂದ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೆ ರಸ್ತೆಗಳಲ್ಲೇ ಸುರಿಯುತ್ತಿದ್ದು, ಸೊಳ್ಳೆ, ಜಿರಳೆ ಹಾಗೂ ಇಲಿಗಳ ಕಾಟ ಹೆಚ್ಚಾಗಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.
ಸರ್ಕಸ್ ಮಾಡಿಕೊಂಡು ತಿಂಡಿ ತಿನ್ನುವ ಪರಿಸ್ಥಿತಿ :
ಕಸ ಹಾಕಲು ಸೂಕ್ತ ಡಬ್ಬವಿಡದ ಕಾರಣ ರಸ್ತೆ ಬದಿಯಲ್ಲೇ ತಿಂದುಳಿದ ಆಹಾರ, ತಟ್ಟೆ, ಲೋಟವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ದೋಸೆ, ಇಡ್ಲಿ, ಪಡ್ಡು, ಹೋಳಿಗೆ, ಪಾನಿಪುರಿ, ಪಾವ್‌ಬಾಜಿ ಮೊದಲಾದ ತಿನಿಸುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಫುಟ್ ಪಾತ್ ಒತ್ತುವರಿ ಮಾಡಿರುವ ಕಾರಣ ಇಲ್ಲಿಗೆ ತಿಂಡಿ-ತಿನಿಸು ತಿನ್ನಲು ಬರುವವರು ರಸ್ತೆಯಲ್ಲಿ ನಿಂತೇ ಆಹಾರ ಸವಿಯುವ ದುಸ್ಥಿತಿಯಿದೆ. ಅವರೇಬೇಳೆ ಮೇಳದ ಸಂದರ್ಭದಲ್ಲಂತೂ ಗ್ರಾಹಕರು ಸರ್ಕಸ್ ಮಾಡಿಕೊಂಡು ತಿಂಡಿ ತಿನ್ನುವ ಪರಿಸ್ಥಿತಿಯಿದೆ. ಫುಟ್ ಪಾತ್ ಒತ್ತುವರಿಯಾದ ಕಾರಣ ಜನರು ಜಾಲರಿ ಹಾಕಿದ ಮೋರಿ ಬದಿಯಿಂದ ಬರುವ ಕೊಳಕು ವಾಸನೆ ಮಧ್ಯೆಯೇ ಆಹಾರ ಸೇವಿಸುವಂತಹ ವಾತಾವರಣವಿದೆ. ಇಂತಹ ಕಡೆಗಳಲ್ಲಿ ಮೂಗು ಮುಚ್ಚಿಕೊಂಡು ಗ್ರಾಹಕರು ಆಹಾರ ಸೇವಿಸುತ್ತಾರೆ.
ಎಲ್ಲೆಂದರಲ್ಲಿ ಕಸ ; ಸ್ವಚ್ಛತೆಯ ಕೊರತೆ, ಒತ್ತುವರಿ ಸಮಸ್ಯೆ :
ಎಲ್ಲೆಂದರಲ್ಲಿ ಕಸ ಬೀಳುತ್ತಿರುವುದರಿಂದ ನೀರು ಸರಾಗವಾಗಿ ಹೋಗಲು ರಸ್ತೆಯಲ್ಲಿ ಅಳವಡಿಸಿರುವ ಜಾಲರಿ ಕೂಡ ಕಸ ಸಿಲುಕಿಕೊಂಡು, ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಮಸ್ಯೆಯಾಗಿದೆ. ವಾರಾಂತ್ಯದಲ್ಲಂತೂ ವಿವಿಪುರ ತಿಂಡಿ ಬೀದಿಗೆ ಆಗಮಿಸುವವರು ಹತ್ತಿರದ ಮನೆಗಳ ಮುಂದೆ ತಮ್ಮ ದ್ವಿಚಕ್ರ ವಾಹನ, ಕಾರುಗಳನ್ನು ನಿಲ್ಲಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಸುಲಭವಾಗಿ ಓಡಾಡಲು ಸಮಸ್ಯೆಯಾಗಿದೆ ಎಂದು ನಾಗರೀಕರು ದೂರುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿದೆ ಎಂಬ ಹಲವು ಆರೋಪಗಳಿವೆ.
6 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ ತಿಂಡಿ ಬೀದಿ :
ವಿವಿಪುರಂನ ಪುಡ್ ಸ್ಟ್ರೀಟ್ಗೆ ಹೊಸ ಸ್ಪರ್ಶ ಕೊಡಲು ಬಿಬಿಎಂಪಿ 6 ಕೋಟಿ ವೆಚ್ಚದಲ್ಲಿ 2022ರ ಡಿಸೆಂಬರ್ನಲ್ಲಿ ಕಾಮಗಾರಿ ಶುರು ಮಾಡಿತ್ತು. ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಆಗ ಕಾಮಗಾರಿಗೆ ಚಾಲನೆ ನೀಡಿದ್ದರು. ಇಲ್ಲಿಗೆ ತಿಂಡಿ ತಿನ್ನಲು ಬರುವ ಪಾದಾಚಾರಿಗಳನ್ನೇ ಗಮದಲ್ಲಿಟ್ಟುಕೊಂಡು ಬಿಬಿಎಂಪಿಯು 7 ಮೀಟರ್ ಇದ್ದ ರಸ್ತೆ 5 ಮೀಟರ್‌ಗೆ ಇಳಿಸಿ, ಪಾದಾಚಾರಿ ಮಾರ್ಗವನ್ನೇ ವಿಸ್ತರಿಸಿ ಪಾದಚಾರಿಗಳು ಹಾಗೂ ಆಹಾರ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹಲವು ಮೂಲ ಸೌಕರ್ಯಗಳನ್ನ ಒದಗಿಸಿ ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೈಟೆಕ್ ಸ್ಪರ್ಶ ನೀಡಲಾಗಿತ್ತು. ಆದರೀಗ ಆ ಫುಟ್ ಪಾತ್ ಸಂಪೂರ್ಣವಾಗಿ ಅಂಗಡಿ ವ್ಯಾಪಾರಿಗಳ ಒತ್ತುವರಿಯಿಂದ ತುಂಬಿಹೋಗಿದೆ. ಬಿಬಿಎಂಪಿ ಅಧಿಕಾರಿಗಳು ಸೂಕ್ತ ರೀತಿ ಕ್ರಮ ಕೈಗೊಳ್ಳದ ಕಾರಣ ನೂತನ ರಸ್ತೆಯ ಸೊಬಗಿಗೆ ಮಂಕು ಕವಿದಿದೆ. ರಸ್ತೆಯಲ್ಲಿ ನಡೆಯುವಾಗ ಆಹಾರ, ಜಿಡ್ಡಿನಿಂದ ಹಲವು ಬಾರಿ ಗ್ರಾಹಕರು ಮಳೆಗಾಲದಲ್ಲಿ ಜಾರಿಬಿದ್ದ ಉದಾಹರಣೆಗಳು ಇದೆ.
ಆಹಾರದ ಗುಣಮಟ್ಟದ ಬಗ್ಗೆ ಆಗಾಗ ಪರಿಶೀಲನೆ ಅಗತ್ಯ :
ಕೆಲವು ಗ್ರಾಹಕರು ಇಲ್ಲಿನ ಅಂಗಡಿಗಳು ಬಳಸುವ ಆಹಾರದ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿನ ಮಳಿಗೆಗಳಲ್ಲಿನ ಆಹಾರದ ಗುಣಮಟ್ಟ ಕಾಯ್ದುಕೊಳ್ಳಲು ಆಗಾಗ ಸಂಬಂಧಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಹಠಾತ್ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯಗಳು ಕೇಳಿಬಂದಿದೆ. ಈ ಪ್ರದೇಶವನ್ನು ಸೂಕ್ತ ರೀತಿ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿರುವುದಕ್ಕೆ ನಿವಾಸಿಗಳು ಮತ್ತು ಗ್ರಾಹಕರು ತಮ್ಮ ಆಕ್ರೋಶ ಮತ್ತು ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.
“ಫುಡ್ ಸ್ಟ್ರೀಟ್ ಒಂದು ಕಾಲದಲ್ಲಿ ಸ್ವಚ್ಛ ಸ್ಥಳವಾಗಿತ್ತು, ಆದರೆ ಈಗ ಅದು ಅವ್ಯವಸ್ಥೆಯಾಗಿದೆ. ಈ ಸಮಸ್ಯೆಗಳ ನಿವಾರಣೆಗೆ ಬಿಬಿಎಂಪಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಇಲ್ಲಿಗೆ ತಿಂಡಿ ತಿನ್ನಲು ಬಂದ ಐಟಿ ಉದ್ಯೋಗಿ ಶೇಖರ್ ಒತ್ತಾಯಿಸಿದ್ದಾರೆ.
ಇದೇ ಶನಿವಾರ ಪಾದಾಚಾರಿ ಒತ್ತುವರಿ ತೆರವಿಗೆ ಕ್ರಮ : ಬಿಬಿಎಂಪಿ ಭರವಸೆ :
ಇನ್ನು ಬಿಬಿಎಂಪಿ ದಕ್ಷಿಣ ವಲಯದ ಚಿಕ್ಕಪೇಟೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಾಲು ರಾಥೋಡ್ ಅವರಿಗೆ ವಿವಿ ಪುರಂ ತಿಂಡಿ ಬೀದಿಯ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದಾಗ, “ತಮ್ಮಿಂದ ಈಗ ಮಾಹಿತಿ ಲಭ್ಯವಾಗಿದೆ. ಇದೇ ಶನಿವಾರ ವಿವಿ ಪುರಂ ತಿಂಡಿ ಬೀದಿಯಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಅದೇ ರೀತಿ ಘನತ್ಯಾಜ್ಯ ವಿಭಾಗ ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿಯನ್ನು ಬಳಸಿಕೊಂಡು ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಒಟ್ಟಾರೆ ಬಿಬಿಎಂಪಿಯು ಈ ಕೂಡಲೇ ಎಚ್ಚೆತ್ತುಕೊಂಡು ಸಜ್ಜನರಾವ್ ಸರ್ಕಲ್ ಬಳಿಯ ವಿವಿಪುರಂ ಫುಡ್ ಸ್ಟ್ರೀಟ್ ನಲ್ಲಿನ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಿ, ಹಿಂದಿನಂತೆಯೇ ಜನರು ಇಲ್ಲಿನ ತಿಂಡಿಬೀದಿಗೆ ಬಂದು ತಮಗಿಷ್ಟವಾದ ತಿಂಡಿ, ಚಾಟ್ಸ್ ಗಳನ್ನು ಸವಿಯಲು ಅನುವಾಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರೀಕರು ಆಗ್ರಹಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು – ಸಂಚಾರ ಪೊಲೀಸರು ಪತ್ತೆಯಿಲ್ಲ!! :
“ಗಾಂಧಿ ಬಜಾರ್ ರೀತಿ ವಿವಿಪುರಂ ಫುಡ್ ಸ್ಟ್ರೀಟ್ ಅನ್ನು ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ಬಿಬಿಎಂಪಿ ಅಭಿವೃದ್ಧಿಪಡಿಸಿಯೂ ಪ್ರಯೋಜನವಾಗಿಲ್ಲ. ಜನರು ಆರಾಮವಾಗಿ ಈ ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಓಡಾಡಲಾಗುತ್ತಿಲ್ಲ. ಪಾರ್ಕಿಂಗ್ ಸಮಸ್ಯೆ. ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಸ್ವಚ್ಛತೆಯೇ ಕಾಣದಂತಾಗಿದೆ. ಪಾದಚರಿ ಮಾರ್ಗವೂ ಒತ್ತುವರಿಯಾಗಿದೆ. ಇಲ್ಲಿ ಸಂಚಾರಿ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಈ ಬಗ್ಗೆ ಎರಡು ಇಲಾಖೆಗಳು ಗಮನಹಿಸಬೇಕು.”
– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್