ಬೆಂಗಳೂರು, ನ.27 www.bengaluruwire.com : ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport – KIAL)ದ ಸಮೀಪ ದೇಶದಲ್ಲೇ ಪ್ರಥಮ ಬಾರಿಗೆ ಬೆಸ್ಕಾಂ ಸಂಸ್ಥೆಯು ಸೌರಮೇಲ್ಛಾವಣಿ ಮರುಬಳಕೆ ಬ್ಯಾಟರಿ ಆಧಾರಿತ ಇವಿ-ಚಾರ್ಜಿಂಗ್ ಕೇಂದ್ರ (Solar Roof top enabled second life battery backed Ev charging Station) ವನ್ನು ನಿರ್ಮಾಣ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ.
ಕೆಐಎಎಲ್ ಸಮೀಪ 400 ಕಿ. ವ್ಯಾ ಸಾಮರ್ಥ್ಯದ 23 ವಿದ್ಯುತ್ ಚಾಲಿತ ಕಾರುಗಳನ್ನು ಒಂದೇ ಬಾರಿ ಚಾರ್ಜಿಂಗ್ ಮಾಡುವ ಬೃಹತ್ ಇವಿ ಚಾರ್ಜಿಂಗ್ ಹಬ್ ಒಟ್ಟು 560 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. 45 ಕೆ.ವಿ ಸಾಮರ್ಥ್ಯದ ತಲಾ 2 ಲೈಫ್ ಬ್ಯಾಟರಿಗಳನ್ನೊಳಗೊಂಡಿದೆ. ಬೆಳಗಿನ ಹೊತ್ತು ಸೌರ ವಿದ್ಯುತ್ ಅನ್ನು ಸಂಗ್ರಹ ಮಾಡಿ ದಿನದ 24 ಗಂಟೆಗಳ ಕಾಲ ಇವಿ ಚಾರ್ಜಿಂಗ್ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್ ಸ್ಟೇಷನ್ ಇದಾಗಿದೆ.
ಬೆಸ್ಕಾಂ ಸಂಸ್ಥೆಯು ಕೇಂದ್ರ ಸರ್ಕಾರ, ಗಿಜ್ ಇಂಡಿಯಾ, ಬಾಷ್ ಹಾಗೂ ನೂನಮ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಪೈಲೆಟ್ ಆಧಾರಿತವಾಗಿ ಈ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನು ಪ್ರಾರಂಭಿಸುತ್ತಿದೆ. 45 ಕಿಲೋ ವ್ಯಾಟ್ ಸಾಮರ್ಥ್ಯವುಳ್ಳ 81 ಸೌರಫಲಕಗಳಿಂದ ದಿನಕ್ಕೆ ಗರಿಷ್ಠ 160 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಇವಿ ಚಾರ್ಜಿಂಗ್ ಕೇಂದ್ರವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಡಿಸಿ ಚಾರ್ಜಿಂಗ್ ಸೌಲಭ್ಯ:
50 ಕಿ. ವ್ಯಾಟ್ ಸಾಮರ್ಥ್ಯದ 5 ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್ (ಸಿಸಿಎಸ್) -2 ಜಾರ್ಜರ್ ಗಳು, 30 ಕಿಲೋ ವ್ಯಾಟ್ ಸಾಮರ್ಥ್ಯದ ನಾಲ್ಕು ಡಿಸಿ-001 ಚಾರ್ಜರ್ ಗಳು, 7.5 ಕಿಲೋ ವ್ಯಾಟ್ ಸಾಮರ್ಥ್ಯದ 2 ಟೈಪ್ -2 ಚಾರ್ಜರ್ ಗಳು ಹಾಗೂ 1 ಎಸಿ-001 3.3 ಕಿ.ವ್ಯಾ ಜಾರ್ಜರ್‌ಗಳನ್ನು ಇಲ್ಲಿ ಅಳವಡಿಸಲಾಗಿದ್ದು, 560 ಮೀಟರ್ ವಿಸ್ತಿರ್ಣದ ಜಾಗದಲ್ಲಿ ಒಟ್ಟು 23 ವಾಹನಗಳನ್ನು ಏಕಕಾಲಕ್ಕೆ ಚಾರ್ಜಿಂಗ್ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇಲ್ಲಿ ಅಳವಡಿಕೆಯಾಗಿದೆ 81 ಸೌರ ಫಲಕಗಳು :
“ಈಗಾಗಲೇ ಇವಿ ಚಾರ್ಜಿಂಗ್ ಹಬ್ ನಲ್ಲಿ 81 ಸೌರಫಲಕಗಳನ್ನು ಅಳವಡಿಸಲಾಗಿದೆ, 6 ಸಿಂಗಲ್ ಫೇಸ್ ಹೈಬ್ರಿಡ್ ಇನ್ ವರ್ಟರ್, ಕಾರಿನಲ್ಲಿ ಬಳಸಿ ಅವಧಿ ಪೂರ್ಣವಾದ ಬ್ಯಾಟರಿಗಳನ್ನು ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಿದ್ಧಪಡಿಸಿದ ಸೆಕೆಂಡ್ ಲೈಫ್ ಬ್ಯಾಟರಿಗಳನ್ನು ಸೋಲಾರ್ ವಿದ್ಯುತ್ ಸಂಗ್ರಹಿಸಿ ಇವಿ ವಾಹನಗಳು ಚಾರ್ಜಿಂಗ್ ಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬ್ಯಾಟರಿಗಳಿಗೆ ತಗಲುವ ವೆಚ್ಚ ಕಡಿಮೆಯಿದ್ದು, ಒಟ್ಟಾರೆ 5 ವರ್ಷಗಳ ಕಾಲ ಅಥವಾ 2 ಸಾವಿರ ಸೈಕಲ್ಸ್ ರಂತೆ ವ್ಯಾರಂಟಿಯಿರಲಿದೆ ಎನ್ನುತ್ತಾರೆ ಬೆಸ್ಕಾಂ ಇವಿ ಕೋಶದ ಎಜಿಮ್ ವಿಜಯ್ ರಾವ್.
ಬೆಳಗ್ಗೆ ಹೊತ್ತು ಸೌರ ವಿದ್ಯುತ್- ರಾತ್ರಿ ಸೋಲಾರ್ ಸ್ಟೋರೇಜ್ ವಿದ್ಯುತ್ :
ಬೆಳಗಿನ ಹೊತ್ತು ಸೌರ ವಿದ್ಯುತ್ ಉತ್ಪಾದನೆಯಿಂದ ಇವಿ ವಾಹನಗಳಿಗೆ ಚಾರ್ಜಿಂಗ್ ಮಾಡಬಹುದು. ಚಾರ್ಜಿಂಗ್ ಮಾಡದಿದ್ದಾಗ ಉತ್ಪಾದನೆಯಾಗುವ ವಿದ್ಯುತ್ ಸೆಕೆಂಡ್ ಲೈಫ್ ಬ್ಯಾಟರಿಯಲ್ಲಿ ಸಂಗ್ರಹವಾಗಿ, ರಾತ್ರಿ ವೇಳೆ ಅದನ್ನು ಬಳಸಲಾಗುತ್ತದೆ. ಒಂದೊಮ್ಮೆ ಆ ಬ್ಯಾಟರಿ ಪೂರ್ತಿ ಚಾರ್ಜ್ ಆದರೆ, ಹೆಚ್ಚುವರಿ ಉತ್ಪಾದನೆಯಾಗುವ ಸೌರ ವಿದ್ಯುತ್ ಗ್ರಿಡ್ ಗೆ ಹೋಗಲಿದೆ. ಒಂದೊಮ್ಮೆ ಸೌರ ವಿದ್ಯುತ್ ಲಭ್ಯವಾಗದಿದ್ದಾಗ ಬೆಸ್ಕಾಂ ಗ್ರಿಡ್ ನಿಂದ ವಿದ್ಯುತ್ ಬಳಕೆ ಮಾಡಿ ಚಾರ್ಜಿಂಗ್ ಮಾಡುವ ರೀತಿ ಈ ಕೇಂದ್ರವನ್ನು ವಿನ್ಯಾಸ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬೃಹತ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕೆ ಅಂದಾಜು 4 ಕೋಟಿ ರೂ. ವೆಚ್ಚ ತಗಲಿದ್ದು, 2 ಲೈಫ್ ಬ್ಯಾಟರಿ ಅಳವಡಿಕೆಯಿಂದಾಗಿ ಸೋಲಾರ್ ನಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸ್ಟೋರೆಜ್ ಮಾಡಬಹುದಾಗಿದೆ. ಹಾಗೆಯೇ ನೆಟ್ ಮೀಟರಿಂಗ್ ಅಳವಡಿಸಿರುವುದರಿಂದ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ ಗೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 400 ಕಿ. ವ್ಯಾಟ್ ಸಾಮರ್ಥ್ಯದ ಇವಿ ಚಾರ್ಜಿಂಗ್ ಸ್ಟೇಷನ್ ನಲ್ಲಿ 45 ಕಿ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಅನ್ನು ಸೊಲಾರ್ ನಿಂದ ಉತ್ಪಾದಿಸಲು ಕ್ರಮ ವಹಿಸಲಾಗಿದೆ ಎಂದು ಬೆಸ್ಕಾಂ ಮತ್ತೊಬ್ಬ ಎಂಜಿನಿಯರ್ ತಿಳಿಸಿದ್ದಾರೆ.
ಬೆಸ್ಕಾಂ ದೇಶದಲ್ಲೇ ಅತಿಹೆಚ್ಚು ಇವಿ ಸ್ಟೇಷನ್ ಹೊಂದಿದ ಕಂಪನಿ :
ಬೆಸ್ಕಾಂ ಸಂಸ್ಥೆಯು ಒಟ್ಟಾರೆಯಾಗಿ 5,765 ಇವಿ ಸ್ಟೇಷನ್ ಗಳನ್ನು ತೆರೆದಿದ್ದು ಇದು ಇಡೀ ರಾಷ್ಟ್ರದಲ್ಲಿಯೇ ಅತಿಹೆಚ್ಚು ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದೆ, ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಬೆಸ್ಕಾಂ ಒಟ್ಟಾರೆ 4,462 ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆದಿದೆ. ಈ ಚಾರ್ಜಿಂಗ್ ಸ್ಟೇಷನ್ 24 ಗಂಟೆಗಳ ಕಾಲ ಕಾರ್ಯನಿರ್ಹಹಿಸಲಿದ್ದು, ವಾಹನ ಸವಾರರು ಇವಿ ಮಿತ್ರ ಆಪ್ ಬಳಸಿ ತಮ್ಮ ವಾಹನಗಳನ್ನು ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ. ತಮ್ಮ ವಾಹನಗಳ ಚಾರ್ಜಿಂಗ್ ಗೆ ಪ್ರತಿ ಯೂನಿಟ್ ಡಿಸಿ ಚಾರ್ಜಿಂಗ್ ಗಾಗಿ 7.56 ರೂ. ಹಾಗೂ ಎಸಿ ಚಾರ್ಜಿಂಗ್ ಗಾಗಿ 7.76 ರೂ. ಹಣವನ್ನು ಬೆಸ್ಕಾಂ ನಿಗದಿಪಡಿಸಿದೆ.
ಶೀಘ್ರದಲ್ಲೇ ಇವಿ ಸೋಲಾರ್ ಹಬ್ ಲೋಕಾರ್ಪಣೆ :
“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ನಿತ್ಯ ನೂರಾರು ಇವಿ ವಾಹನಗಳು ಬಂದು ಹೋಗುತ್ತವೆ. ವಿಮಾನ ನಿಲ್ದಾಣದ ಬಳಿ 23 ಎಲೆಕ್ಟ್ರಿಕ್ ವಾಹನಗಳು ಏಕ ಕಾಲಕ್ಕೆ ಚಾರ್ಜಿಂಗ್ ಮಾಡಬಹುದಾದ, ಸೌರ ಆಧಾರಿತ ಬ್ಯಾಟರಿ ಸ್ಟೋರೇಜ್ ಇವಿ ಚಾರ್ಜಿಂಗ್ ಸ್ಟೇಷನ್ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಕಾರ್ಯಗಳು ನಡೆಯುತ್ತಿದೆ. ಈ ಕೇಂದ್ರವನ್ನು ಲೋಕಾರ್ಪಣೆ ಮಾಡಲು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ದಿನಾಂಕ ನಿಗದಿಗೆ ಮನವಿ ಮಾಡಿದ್ದೇವೆ. ಆದಷ್ಟು ಶೀಘ್ರದಲ್ಲೇ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುತ್ತದೆ. ಹೆಚ್ಚೆಚ್ಚು ಪರಿಸರ ಸ್ನೇಹಿಯಾದ ಇವಿ ವಾಹನಗಳ ಬಳಕೆ ಉತ್ತೇಜಿಸಲು ಇಂಧನ ಸಚಿವರು ಚಾರ್ಜಿಂಗ್ ಸ್ಟೇಷನ್ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದಾರೆ. ಈ ಪೈಲೆಟ್ ಯೋಜನೆಯಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಇವಿ ವಾಹನಗಳ ಬಳಕೆ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ.”
– ಮಹಂತೇಶ್ ಬೀಳಗಿ, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ