ಕುಂದಾಪುರ, ಅ.09 www.bengaluruwire.com : ಕೊಂಕಣ ರೈಲ್ವೇ ವಿಭಾಗಕ್ಕೆ ಸೇರುವ ಕುಂದಾಪುರ ರೈಲ್ವೇ ಸ್ಟೇಷನ್ 1998ರಲ್ಲಿ ಸ್ಥಾಪನೆಯಾಗಿ, ಪ್ರಸ್ತುತ ಪ್ರತಿದಿನ ಸರಾಸರಿಯಾಗಿ 34 (17 ಬರುವ- 17 ಹೋಗುವ) ಪ್ರಯಾಣಿಕ ರೈಲು ಓಡಾಟ ನಡೆಸುತ್ತಿದ್ದರೂ ಈ ರೈಲು ನಿಲ್ದಾಣ ತಲುಪುವುದು ಸಾಗರದ ಮಧ್ಯೆ ದ್ವೀಪವನ್ನು ತಲುಪಿದಂತೆ.
ಅಷ್ಟರ ಮಟ್ಟಿಗೆ ಪ್ರಯಾಣಿಕರು ಈ ರೈಲು ನಿಲ್ದಾಣ ತಲುಪಲು ನೇರವಾದ ಹಾಗೂ ಸೂಕ್ತ ಸಾರ್ವಜನಿಕ ಸಮೂಹ ಸಾರಿಗೆಯಿಲ್ಲದೆ ಹರಸಾಹಸ ಪಡಬೇಕು. ಕುಂದಾಪುರ ಬಸ್ ನಿಲ್ದಾಣ ಅಥವಾ ರಾಷ್ಟ್ರೀಯ ಹೆದ್ದಾರಿ ಬಳಿಯ ಬಸ್ರೂರು ಮೂರು ಕೈನಿಂದ ಒಂದೋ ದುಬಾರಿ ಹಣ ಕೊಟ್ಟು ಆಟೋ, ಟ್ಯಾಕ್ಸಿಯಲ್ಲಿ ಈ ರೈಲ್ವೆ ಸ್ಟೇಷನ್ ತಲುಪಬೇಕು. ಕುಂದಾಪುರ ಬಸ್ ನಿಲ್ದಾಣದಿಂದ ಎರಡು ಪ್ಲಾಟ್ ಫಾರಮ್ ಗಳನ್ನು ಹೊಂದಿರುವ ಈ ರೈಲು ನಿಲ್ದಾಣ 7 ಕಿ.ಮೀ ದೂರವಿದೆ.
ಬೆಳಗಿನ ಹೊತ್ತು 7 ರ ತನಕ ಈ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿ ಬಸ್ ಓಡಾಟ ಇರುವುದಿಲ್ಲ. ಆನಂತರ ರಾತ್ರಿ 8 ಗಂಟೆಯ ಮೇಲೆ ಈ ನಿಲ್ದಾಣದ ಕಡೆ ಬಸ್ ಓಡಾಟ ಗಂಟೆಗೊಂದು ಅಂತ 9 ಗಂಟೆಯ ತನಕವಷ್ಟೆ ಲಭ್ಯವಿರುತ್ತೆ. ಕುಂದಾಪುರದಿಂದ ಬಸ್ರೂರು, ಕಂಡ್ಲೂರು, ಹಂಪಾರು, ಸಿದ್ದಾಪುರ, ಶಂಕರನಾರಾಯಣ ಮತ್ತಿತರ ಕಡೆ ಹೋಗುವ ಖಾಸಗಿ ಬಸ್‌ಗಳಿದ್ದರೂ ಅವು ರೈಲ್ವೇ ನಿಲ್ದಾಣದ ತನಕ ಬರುವುದಿಲ್ಲ. ಮುಖ್ಯರಸ್ತೆಯಿಂದ ರೈಲ್ವೇ ನಿಲ್ದಾಣಕ್ಕೆ ಹೋಗುವ ಮೂಡಲಕಟ್ಟೆ ವೃತ್ತದ ಬಳಿ ಬಸ್ ಇಳಿದರೂ ಅಲ್ಲಿಂದ ಪ್ರಯಾಣಿಕರು ಪುನಃ ಕಾಲ್ನಡಿಗೆಯಲ್ಲೇ ಮುಕ್ಕಾಲು ಕಿ.ಮೀ ನಡೆದೇ ಹೋಗಬೇಕು. ಸರಿಯಾಗಿ ಸಮೂಹ ಸಾರಿಗೆ ವ್ಯವಸ್ಥೆಯಿಲ್ಲದೆ ಬಡ- ಮಧ್ಯಮ ವರ್ಗದವರು, ಹಿರಿಯ ನಾಗರೀಕರು ಎರಡು ದಶಕಗಳಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನ ಮೆಟ್ರೊ ರೈಲು ವ್ಯವಸ್ಥೆಯಲ್ಲಿರುವಂತೆ ಲಾಸ್ಟ್ ಮೈಲ್ ಕನೆಕ್ಟಿವಿಟಿ (ಕೊನೆಯ ಹಂತದ ವರೆಗೂ ಸಂಪರ್ಕ ಸೇವೆ) ಪರಿಕಲ್ಪನೆ ಕುಂದಾಪುರ, ಉಡುಪಿ ರೈಲು ನಿಲ್ದಾಣಗಳಲ್ಲಿ ಜಾರಿಗೆ ಬಂದರೆ ಒಳಿತು.
ರೈಲು ನಿಲ್ದಾಣ ಹೋಗುವ ಮಾರ್ಗದಲ್ಲಿ ಬೀದಿ ದೀಪ- ರಸ್ತೆಗುಂಡಿ ಸಮಸ್ಯೆ :
ಮೂಡಲಕಟ್ಟೆ ವೃತ್ತದಲ್ಲಿ ಆಟೋ ಸ್ಟ್ಯಾಂಡ್ ಕೂಡ ಇಲ್ಲ. ರಾತ್ರಿ ಹೊತ್ತು ಹಾಗೂ ಬೆಳಗಿನ ಜಾವ ಈ ಸ್ಟೇಷನ್ ಗೆ ಬಂದು ಹೋಗಲು ಖಾಸಗಿ ಆಟೋ, ಟ್ಯಾಕ್ಸಿ ಬಿಟ್ಟರೆ ಬೇರೆ ಗತಿಯಿಲ್ಲ. ಸ್ವಂತ ವಾಹನ ಇದ್ದವರೂ ರೈಲ್ವೆ ನಿಲ್ದಾಣಕ್ಕೆ ಬಂದರೂ ಆ ಮಾರ್ಗದಲ್ಲಿ ರಾತ್ರಿ ಹೊತ್ತು ಕತ್ತಲ ಮಧ್ಯೆ ಬರುವುದು ಅಷ್ಟು ಸುರಕ್ಷಿತವಿಲ್ಲ. ಕುಂದಾಪುರದಿಂದ ರೈಲ್ವೇ ನಿಲ್ದಾಣ ಮಾರ್ಗದತ್ತ ತೆರಳಲು ರಸ್ತೆ ಬದಿಯಲ್ಲಿ ಬೀದಿ ದೀಪದ ವ್ಯವಸ್ಥೆಯಿಲ್ಲ, ಹಳ್ಳಬಿದ್ದ ರಸ್ತೆಯಲ್ಲೇ ಪ್ರಯಾಣಿಕರು ಸಾಗಬೇಕು. ಬೆಂಗಳೂರು ಮತ್ತಿತರ ಊರುಗಳಿಂದ ಹಣ ಉಳಿಸಲೆಂದು ರೈಲಲ್ಲಿ ಹೋಗಿ ಬರುವ ಮಧ್ಯಮ ವರ್ಗ, ಬಡವರಿಗೆ ಕುಂದಾಪುರ ರೈಲ್ವೇ ಸ್ಟೇಷನ್ ನಿಂದ ಕುಂದಾಪುರಕ್ಕೆ ಹೋಗಿಬರುವುದು ದುಬಾರಿಯೇ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ರೈಲ್ವೆ ಸ್ಟೇಷನ್ ನಲ್ಲಿ ಖಾಸಗಿ ಜಾಹೀರಾತು ಹಾವಳಿ, ಮುಚ್ಚಿದ ವಿಶ್ರಾಂತಿ ಕೊಠಡಿ, ಶುಚಿತ್ವವಿಲ್ಲದ ಶೌಚಾಲಯ, ಏರು-ತಗ್ಗಿನ ಪ್ಲಾಟ್ ಫಾರಮ್ ಈ ರೈಲ್ವೇ ಸ್ಟೇಷನ್ ನಲ್ಲಿ ನಿರ್ವಹಣೆ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ರೈಲ್ವೇ ಪ್ರಯಾಣಕ್ಕಿಂತ ಆಟೋ- ಟ್ಯಾಕ್ಸಿ ದರ ದುಬಾರಿ :
ಉದಾಹರಣೆಗೆ ಕುಂದಾಪುರ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ಸಾಮಾನ್ಯ ವರ್ಗದ ರೈಲ್ವೇ ಟಿಕೆಟ್ 190 ರೂ. ದರವಾದರೆ, ಕುಂದಾಪುರದ ಬಸ್ ಸ್ಟ್ಯಾಂಡ್ ಅಥವಾ ಬಸ್ರೂರು ಮೂರು ಕೈನಿಂದ ಕುಂದಾಪುರ ರೈಲ್ವೆ ಸ್ಟೇಷನ್ ಗೆ ಬರಲು ಆಟೋದಲ್ಲಾದರೆ ಬೆಳಗ್ಗೆ 4ರಿಂದ 6.30ರ ತನಕ ಆಟೋದವರು ಬರೋಬ್ಬರಿ 200 ರಿಂದ 250 ರೂ. ತನಕ ಮೀಟರ್ ಹಾಕದೆ ಬಾಡಿಗೆ ದರವನ್ನು ಪ್ರಯಾಣಿಕರಿಂದ ಮುಲಾಜಿಲ್ಲದೆ ವಸೂಲಿ ಮಾಡುತ್ತಾರೆ. ಬೇರೆ ಟೈಮಲ್ಲಾದರೆ 100 ರೂ. ಚಾರ್ಜ್ ಮಾಡುತ್ತಾರೆ. ಟ್ಯಾಕ್ಸಿಯವರದು ಇನ್ನೂ ಜಾಸ್ತಿ. ಕುಂದಾಪುರದಿಂದ ಬೆಂಗಳೂರಿಗೆ ಸಾಮಾನ್ಯ ದಿನಗಳಲ್ಲಿ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ದರಗಳಲ್ಲಿ ಅಲ್ವಸ್ವಲ್ಪ ವ್ಯತ್ಯಾಸವಿರುತ್ತದೆ. ಆದರೆ ರೈಲ್ವೆ ಟಿಕೆಟ್ ದರಕ್ಕಿಂತ ಸಾಕಷ್ಟು ಹೆಚ್ಚಾಗಿರುತ್ತೆ. ವಿಶೇಷ ದಿನಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಕರ್ನಾಟಕ ಸಾರಿಗೆಯಲ್ಲಿ 529 ರೂ. ನಿಂದ ಪ್ರಾರಂಭವಾಗಿ (ಐಷಾರಾಮಿ ಬಸ್ ಅಂಬಾರಿ ಉತ್ಸವ್) 1,783 ರೂ. ತನಕವಿರುತ್ತೆ. ಖಾಸಗಿ ಬಸ್ ಗಳ ಟಿಕೆಟ್ ದರ 2,000 ರೂ. ತನಕ ಏರಿಕೆಯಾಗುತ್ತೆ ಎನ್ನುತ್ತಾರೆ ಆಗಾಗ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕ ಗಿರೀಶ್.
ಇದನ್ನೂ ಓದಿ : E-Khata | ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಮಾಡಿಸಲು ಯಾವುದೇ ಗಡುವಿಲ್ಲ : ಕೃಷ್ಣಭೈರೇಗೌಡ
ಪ್ರತಿದಿನ ಸರಾಸರಿ 25 ಪ್ರಯಾಣಿಕ ರೈಲುಗಳು ಬಂದು ಹೋಗುತ್ತವೆ :
ಕುಂದಾಪುರ ರೈಲು ನಿಲ್ದಾಣವು ಕೊಂಕಣ ರೈಲು ನಿಗಮ ವಲಯ ವ್ಯಾಪ್ತಿಗೆ ಬರುತ್ತದೆ. ಈ ರೈಲು ನಿಲ್ದಾಣಕ್ಕೆ ಪ್ರತಿದಿನ ಸರಾಸರಿಯಾಗಿ 34 ಪ್ರಯಾಣಿಕ ರೈಲುಗಳು ಬಂದು ಹೋಗುತ್ತದೆ. ಹಾಗೆಯೇ ಆಗಾಗ ಸರಕು ಸಾಗಾಣಿಕೆ ರೈಲುಗಳ ಓಡಾಟವಿರುತ್ತದೆ. ಈ ರೈಲು ನಿಲ್ದಾಣವು ಕುಂದಾಪುರವನ್ನು ದೇಶದ ಇತರ ನಗರಗಳಾದ ನವದೆಹಲಿ, ಮುಂಬೈ, ಬೆಂಗಳೂರು, ಮೈಸೂರು, ಚೆನ್ನೈ, ತಿರುವನಂತಪುರಂ, ಕೊಚ್ಚಿನ್ ಇತ್ಯಾದಿಗಳಿಗೆ ಸಂಪರ್ಕಿಸುತ್ತದೆ. ಇದಲ್ಲದೆ ಉಡುಪಿ ಮತ್ತು ಭಟ್ಕಳವನ್ನು ನಡುವೆ ಸಂಪರ್ಕಿಸುತ್ತದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಸಂಪರ್ಕಿಸುವ ಪ್ರಮುಖ ರೈಲು ನಿಲ್ದಾಣವಾಗಿದೆ. ಇತರ ಯಾವುದೇ ನಿಲ್ದಾಣಗಳಿಗಿಂತ ವೇಗವಾಗಿ ಕೊಲ್ಲೂರು ತಲುಪುವಂತೆ ಮಾಡುವುದರಿಂದ ಇದನ್ನು ಕೇರಳ ಯಾತ್ರಿಕರು ಹೆಚ್ಚು ಬಳಸುತ್ತಾರೆ. ಕುಂದಾಪುರದಂತೆಯೇ ಬಾರಕೂರು ಮತ್ತು ಉಡುಪಿ ರೈಲು ನಿಲ್ದಾಣಕ್ಕೆ ತಲುಪಲು ಸಮೂಹ ಸಾರಿಗೆ ಸಂಪರ್ಕದ ಕೊರತೆ ಹಾಗೂ ರೈಲುಗಳ ಸಂಖ್ಯೆ ಕೊರತೆ ಎದ್ದು ಕಾಣುತ್ತದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಭಾಗಗಳಿಂದ ಕುಂದಾಪುರಕ್ಕೆ ರೈಲುಗಳಿಲ್ಲ. ಇನ್ನೊಂದೆಡೆ ಈ ರೈಲ್ವೆ ನಿಲ್ದಾಣವನ್ನು ತಲುಪಲು ಸೂಕ್ತ ಸಮೂಹ ಸಾರಿಗೆಗಳಿಲ್ಲ. ಈ ಬಗ್ಗೆ ಇಷ್ಟು ವರ್ಷ ಈ ಭಾಗದಲ್ಲಿ ಜನಪ್ರತಿನಿಧಿಗಳಾಗಿರುವವರು ಆಸಕ್ತಿ ವಹಿಸಿದ್ದರೆ, ಕುಂದಾಪುರ ರೈಲು ನಿಲ್ದಾಣ ಇತರ ರೈಲು ನಿಲ್ದಾಣಗಳಿಗೆ ಮಾದರಿಯಾಗಿರುತ್ತಿತ್ತು. ಈ ಬಗ್ಗೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ಸಚಿವರಾದ ವಿ.ಸೋಮಣ್ಣ, ಉಡುಪಿ ಮತ್ತು ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಲು ಪ್ರಯತ್ನಿಸಿದರೂ, ಪ್ರತಿಕ್ರಿಯೆಗೆ ಮೂವರೂ ಲಭ್ಯರಾಗಲಿಲ್ಲ.
ಇದೇ ಪ್ರಥಮ ಬಾರಿಗೆ ಎನ್ನುವಂತೆ ಉಡುಪಿ, ಕುಂದಾಪುರದ ಕರಾವಳಿಯ ಜನಕ್ಕೆ ಅ.10 ರಿಂದ 13 ತನಕ ಮೈಸೂರು, ಯಶವಂತಪುರದಿಂದ ಕುಂದಾಪುರ, ಕಾರವಾರದ ತನಕ ಎರಡು ಮಾರ್ಗಗಳಲ್ಲಿ ದಸರಾ ಪ್ರಯುಕ್ತ ವಿಶೇಷ ರೈಲು ಸೇವೆಗಳನ್ನು ಆರಂಭಿಸಲಾಗಿದೆ.
ಹೆಚ್ಚಿನ ರೈಲುಗಳ ನಿಯೋಜನೆ ಅತಿ ಜರೂರಾಗಬೇಕು :
ದಸರಾ, ದೀಪಾವಳಿ, ಏಪ್ರಿಲ್- ಮೇ ಸಂದರ್ಭದಲ್ಲಿ ಬೇರೆ ಕಡೆಗಳಲ್ಲಿ ವಿಶೇಷ ರೈಲು ಅಥವಾ ವಿಶೇಷ ಬೋಗಿಗಳನ್ನು ಹಾಕುವುದಿಲ್ಲ. ಇದೇ ಪ್ರಥಮ ಬಾರಿಗೆ ಮೈಸೂರು, ಯಶವಂತಪುರದಿಂದ ಕಾರವಾರದ ತನಕ ಅ.10 ರಿಂದ ನಾಲ್ಕು ದಿನ ವಿಶೇಷ ರೈಲು ನಿಯೋಜಿಸಲಾಗಿದೆ. ಇದು ಹೀಗೆ ಮುಂದುವರೆಯಬೇಕು. ಇಲ್ಲವಾದಲ್ಲಿ ಹಬ್ಬ ಹರಿದಿನಗಳಲ್ಲಿ ಸಾಮಾನ್ಯ ಜನರು, ವಿದ್ಯಾರ್ಥಿಗಳು ಬೆಂಗಳೂರು, ಮೈಸೂರು ಮತ್ತಿತರ ಊರುಗಳಿಂದ ನಮ್ಮ ಊರಿಗೆ ಬಂದು ಹೋಗಲು ಕಷ್ಟವಾಗುತ್ತದೆ. ಸಾಮಾನ್ಯ ಬೋಗಿಗಳಲ್ಲಿ ಸೀಟಿಲ್ಲದೆ ಜನರು ಕಿಕ್ಕಿರಿದು ಕಷ್ಟ ಪಟ್ಟೇ ಈ ರೈಲಿನಲ್ಲಿ ಬರುವಂತಾಗಿದೆ. ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಖಾಸಗಿ ಬಸ್, ಕೆಎಸ್ ಆರ್ ಟಿಸಿ ಬಸ್ ದರ ರೈಲಿನ ಟಿಕೆಟ್ ಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ಹೀಗಾಗಿ ಉಡುಪಿ, ಕುಂದಾಪುರಕ್ಕೆ ಬೆಂಗಳೂರು ಹಾಗೂ ಪ್ರಮುಖ ಸ್ಥಳಗಳಿಂದ ಸಾಮಾನ್ಯ ಹಾಗೂ ವಿಶೇಷ ದಿನಗಳಲ್ಲಿ ಹೆಚ್ಚೆಚ್ಚು ರೈಲುಗಳನ್ನು ನಿಯೋಜಿಸಬೇಕು.
- ಪ್ರಸಾದ್ ಕೆ.ಶೆಟ್ಟಿ, ರೈಲು ಪ್ರಯಾಣಿಕ
ಸಾರ್ವಜನಿಕ ಸಾರಿಗೆ ಕಲ್ಪಿಸಲು ಪ್ರಯತ್ನಿಸುತ್ತೇವೆ :
ಕುಂದಾಪುರ ಬಸ್ ನಿಲ್ದಾಣದಿಂದ ಬಸ್ರೂರು ಮತ್ತಿತರ ಕಡೆ ಹೋಗುವ ಬಸ್ ಗಳು ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಿ ಮುಂದು ಹೋಗಲು ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯವನ್ನು ಖಾಸಗಿ ಬಸ್ ಮಾಲೀಕರು ಲೆಕ್ಕಾಚಾರ ಹಾಕುತ್ತಾರೆ. ಈ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಜೊತೆ ಮಾತನಾಡಿ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಕುಂದಾಪುರ ಬಸ್ ನಿಲ್ದಾಣದಿಂದ ಸಾರ್ವಜನಿಕ ಸಂಪರ್ಕ ಸಾರಿಗೆ ಕಲ್ಪಿಸಲು ಪ್ರಯತ್ನಿಸುತ್ತೇನೆ. ಸದ್ಯ ಈ ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ. ಮಳೆ ನಿಂತ ಬಳಿಕ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪದ ವ್ಯವಸ್ಥೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.
- ಎ.ಕಿರಣ್ ಕುಮಾರ್ ಕೂಡ್ಗಿ, ಶಾಸಕ, ಕುಂದಾಪುರ ವಿಧಾನಸಭಾ ಕ್ಷೇತ್ರ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.