ಬೆಂಗಳೂರು, ಸೆ.08 www.bengaluruwire.com : ನಗರದಲ್ಲಿ ಸಂಭ್ರಮದಿಂದ ಶನಿವಾರ ಗಣೇಶ ಹಬ್ಬವನ್ನು ಆಚರಿಸಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದಲ್ಲಿ ಶಾಶ್ವತ ಅಥವಾ ತಾತ್ಕಾಲಿಕ ಕಲ್ಯಾಣಿಗಳು, 462 ಕಡೆಗಳಲ್ಲಿ ತಾತ್ಕಾಲಿಕ ಮೊಬೈಲ್ ಟ್ಯಾಂಕ್ ಗಳಲ್ಲಿ ಸಾವಿರಾರು ಮಂದಿ ಗಣಪನನ್ನು ವಿಸರ್ಜಿಸಿದರು.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆದಿದೆ.
ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅದರ ಸಂಪೂರ್ಣ ವಿವರಗಳಿಗಾಗಿ ಪಾಲಿಕೆ ವೆಬ್ ಸೈಟ್ ಲಿಂಕ್ https://apps.bbmpgov.in/ganesh2024/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ನಗರದ ದಕ್ಷಿಣ ವಲಯ ಪದ್ಮನಾಭ ನಗರ ವ್ಯಾಪ್ತಿಯಲ್ಲಿ ಬರುವ ಯಡಿಯೂರು ಕೆರೆ ವಿಸರ್ಜನಾ ಕೊಳ ಅಥವಾ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಸಲಾಗಿದ್ದು, ಗೌರಿ ಗಣೇಶ ಹಬ್ಬದ ದಿನವಾದ ಸೆ.07 ರಂದು ಯಡಿಯೂರು ಕೆರೆಯ ವಿಸರ್ಜನಾ ಕೊಳದಲ್ಲಿ ಸುಮಾರು 78,000 ಕ್ಕೂ ಹೆಚ್ಚು ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಅವುಗಳ ಪೈಕಿ ಮಣ್ಣಿನ ಮೂರ್ತಿಗಳು – 76000, ಪೇಪರ್ ನಲ್ಲಿ ಮಾಡಿದ ಮೂರ್ತಿಗಳು – 1,800, ಪಿಒಪಿ ಮೂರ್ತಿಗಳು – 200 ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಯಡಿಯೂರು ಕರೆಯ ವಿಸರ್ಜನಾ ಕೊಳದಲ್ಲಿ 2023ರಲ್ಲಿ 11 ದಿನಗಳ ಅವಧಿಯಲ್ಲಿ ಅಂದಾಜು 1,75,000 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿತ್ತು.
ಈ ಬಾರಿ 7ನೇ ಸೆಪ್ಟೆಂಬರ್ 2024 ರಿಂದ 17ನೇ ಸೆಪ್ಟೆಂಬರ್ 2024ರವರೆಗೆ 11 ದಿನಗಳ ಅವಧಿಯವರೆಗೆ ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊದಲ 3 ಮೂರು ದಿನಗಳ ಕಾಲ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಯಾಗಲಿದ್ದು, ವಿಸರ್ಜನಾ ಕೊಳ ಬಹುತೇಖ ಭರ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ 10ನೇ ಸೆಪ್ಟೆಂಬರ್ 2024 ರಂದು ಶುಚಿತ್ವ ಕಾರ್ಯದ ನಿಮಿತ್ತ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ. 11 ರಿಂದ 17ನೇ ತಾರೀಖಿನವರೆಗೆ ಮಾತ್ರ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಅಗತ್ಯ ಸೌಲಭ್ಯಗಳ ವ್ಯವಸ್ಥೆಗೆ ಪಾಲಿಕೆ ಕ್ರಮ ಕೈಗೊಂಡಿರುತ್ತದೆ.
18ನೇ ಸೆಪ್ಟೆಂಬರ್ 2024 ರಿಂದ ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ಪದ್ಮನಾಭ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.