ಬೆಂಗಳೂರು, ಜು.31 www.bengaluruwire.com : ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಈ ಬಾರಿ ಒಟ್ಟು ಈತನಕ 46 ಕಡೆಗಳಲ್ಲಿ ಭೂಕುಸಿತವಾಗಿದ್ದು, ಜೀವಹಾನಿ, ಆಸ್ತಿಪಾಸ್ತಿಹಾನಿ ಹೆಚ್ಚಾಗಿದೆ. ಪಾಕೃತಿಕ ವಿಪತ್ತನ್ನು ಸಂಪೂರ್ಣವಾಗಿ ತಡೆಯಲಾಗದಿದ್ದರೂ, ಭೂ ಕುಸಿತ ನಿಯಂತ್ರಣ ಕ್ರಮವಾಗಿ ಫೆಬ್ರವರಿ 2021ರಲ್ಲಿ ‘ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾರ್ಗೋಪಾಯಗಳು’ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್ ಡಿಎಂಎ) ಭೂಕುಸಿತ ಪ್ರಕರಣಗಳ ನಿರ್ವಹಣೆಗಾಗಿ 2022ರಲ್ಲಿ ಕಾರ್ಯಯೋಜನೆಯನ್ನು ರಾಜ್ಯ ಸರ್ಕಾರ ಪರಿಗಣಿಸದೆ ಹಾಗೂ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಈ ಅವಘಡಗಳ ಸಂಭವಿಸಲು ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದಾದ್ಯಂತ ಪ್ರತಿ ಗ್ರಾಮಪಂಚಾಯಿತಿಯೂ ಸೇರಿದಂತೆ ಒಟ್ಟಾರೆ 6505 ಸ್ಥಳಗಳಲ್ಲಿ ಅಳವಡಿಸಿರುವ ಮಳೆ ಮಾಪನ ಕೇಂದ್ರಗಳ ಪೈಕಿ 5785 ಕೇಂದ್ರಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಉಳಿದ 720 ಕೇಂದ್ರಗಳು ಸ್ಥಗಿತಗೊಂಡಿದೆ. ಇನ್ನು 935 ಹೋಬಳಿಗಳಲ್ಲಿ ಟೆಲಿಮೆಟ್ರಿ ಹವಾಮಾನ ಕೇಂದ್ರದ ಪೈಕಿ 85 ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಸೂಕ್ತ ಕಾಲಾವಧಿಯಲ್ಲಿ ಮಳೆ ಮುನ್ಸೂಚನೆಯನ್ನು, ಹವಾಮಾನ ಪರಿಸ್ಥಿತಿಯನ್ನು ಹಾಗೂ ಅದರಿಂದ ಸಂಭವಿಸಬಹುದಾದ ಪರಿಣಾಮಗಳನ್ನು ವಿಶ್ಲೇಷಿಸಿ ಭೂ ಕುಸಿತ ಸಂಭವಿಸುವ ಪ್ರದೇಶಗಳಲ್ಲಿನ ಜನರಿಗೆ ಎಚ್ಚರಿಕೆ ನೀಡುವ ಕಾರ್ಯದಲ್ಲಿ ವಿಫಲವಾಗಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ. 2022ರಲ್ಲಿ ಕರ್ನಾಟಕದಲ್ಲಿ 56 ಕಡೆ, ಬರದಿಂದಾಗಿ ಹೆಚ್ಚಿನ ಮಳೆಯಾಗದ ಕಾರಣ 2023ರಲ್ಲಿ 2 ಕಡೆಗಳಲ್ಲಿ ಹಾಗೂ 2024ರಲ್ಲಿ ಭಾರೀ ಮಳೆಗೆ ಈ ತನಕ 46 ಕಡೆಗಳಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತ ಪ್ರಕರಣಗಳು ಜರುಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಒಂದು ದಶಕದಿಂದೀಚೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕುಸಿತ ಒಂದು ಸಾಮಾನ್ಯ ವಿದ್ಯಮಾನದಂತಾಗಿದ್ದು, ರಾಜ್ಯದ ಗಂಭೀರ ಸಮಸ್ಯೆಗಳಲ್ಲೊಂದಾಗಿ ಬದಲಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಏಳು ಜಿಲ್ಲೆಗಳ 30 ತಾಲ್ಲೂಕುಗಳು ಪ್ರತಿ ಮಳೆಗಾಲದಲ್ಲಿ ಭೂಕುಸಿತದ ಭೀತಿ ಸಾಮಾನ್ಯ ಎನ್ನುವಂತಾಗಿದೆ. ಕಾರವಾರ ಸಮೀಪದ ಕಡವಾಡದಲ್ಲಿ 2009ರಲ್ಲಿ ಸಂಭವಿಸಿದ ಭಾರಿ ಭೂಕುಸಿತವೇ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಈ ಶತಮಾನದ ಮೊದಲ ದೊಡ್ಡ ಭೂಕುಸಿತ ಎಂದು ಹೇಳಲಾಗುತ್ತಿದೆ. ಆ ಬಳಿಕ ಗುಡ್ಡ ಕುಸಿತ ಘಟಿಸುತ್ತಲೇ ಇದ್ದು, 2016ರ ನಂತರ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೊಡಗಿನಲ್ಲಿ 2018ರಲ್ಲಿ ಘಟಿಸಿದ ಭೂಕುಸಿತ ಪ್ರಾಕೃತಿಕ ವಿಕೋಪ ಘಟನೆಯು ಬದಲಾಗುತ್ತಿರುವ ಹವಾಮಾನದ ಸಂಕೇತವಾಗಿ ನಿಸರ್ಗ ನೀಡಿದ ದೊಡ್ಡ ಎಚ್ಚರಿಕೆ ಗಂಟೆಯಾಗಿತ್ತು. ಆ ವರ್ಷದ ಮುಂಗಾರು ಮಳೆಯು, ಕೊಡಗಿನಲ್ಲಿ ಕಳೆದ 20 ವರ್ಷಗಳಲ್ಲಿ ಸುರಿಯುತ್ತಿದ್ದ ಸರಾಸರಿ ಮಳೆಗಿಂತ ಶೇ 32ರಷ್ಟು ಹೆಚ್ಚು ಮಳೆ ಸುರಿದಿತ್ತು. ಅದರಿಂದಾಗಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಭೂಕುಸಿತ ಸಂಭವಿಸಿದ್ದವು. 105 ಭೂಕುಸಿತಗಳನ್ನು ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ದೃಢಪಡಿಸಿತ್ತು. ಈ ದುರ್ಘಟನೆಯಲ್ಲಿ 20 ಮಂದಿ ಸಾವಿಗೀಡಾಗಿ ಸಾಕಷ್ಟು ಆಸ್ತಿಪಾಸ್ತಿ, ರೈತರ ಬೆಳೆ ಹಾನಿಯಾಗಿತ್ತು. ಇದಾದ ಬಳಿಕ ಆಗಿನ ಬಿಜೆಪಿ ಸರ್ಕಾರವು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಆಶೀಸರ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿಯು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ, ಸಂಬಂಧಪಟ್ಟ ತಜ್ಞರ ಅಭಿಪ್ರಾಯದೊಂದಿಗೆ 2021ರ ಫೆಬ್ರವರಿಯಂದು ಅಂತಿಮ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಅದಾದ ನಂತರ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್‌ಡಿಎಂಎ) ಭೂಕುಸಿತ ಪ್ರಕರಣಗಳ ನಿರ್ವಹಣೆಗಾಗಿ 2022ರಲ್ಲಿ ಕಾರ್ಯಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಹೆಚ್ಚು ಮಳೆ ಬೀಳುವ, ಗುಡ್ಡಕುಸಿತದ ಸಂಭವನೀಯತೆ ಇರುವ ಸ್ಥಳಗಳನ್ನು ಗುರುತಿಸುವುದು, ಸೂಚನಾ ಫಲಕ ಅಳವಡಿಸುವುದು, ತಡೆಗೋಡೆ ನಿರ್ಮಿಸುವುದು, ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವುದು, ವಿವಿಧ ಇಲಾಖೆಗಳ ಸಮನ್ವಯ ಸಾಧಿಸುವುದು, ತುರ್ತು ಕ್ರಮಕ್ಕೆ ಸಿದ್ಧವಾಗಿರುವುದು ಸೇರಿದಂತೆ ಹಲವು ಕಾರ್ಯಸೂಚಿಗಳನ್ನು ಪ್ರಸ್ತಾಪಿಸಿತ್ತು. ಆದರೆ, ಭೂ ಕುಸಿತ ಅಧ್ಯಯನ ಸಮಿತಿ ವರದಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯ ಯೋಜನೆ, ಈ ಎರಡೂ ವರದಿಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತ ಎರಡು ದಾಖಲೆಗಳು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ರಾಜ್ಯದ ಸುಮಾರು ಶೇ13 ಭಾಗದ ಪ್ರದೇಶದಲ್ಲಿ ಭೂಕುಸಿತವಾಗುತ್ತದೆ ಎಂದು 2021ರ ಭೂ ಕುಸಿತ ಅಧ್ಯಯನ ಸಮಿತಿ ಅಂದಾಜಿಸಿತ್ತು. ಆದರೆ ಕೆಎಸ್ ಎನ್ ಡಿಎಂಸಿ ರಾಜ್ಯದ ವಿಸ್ತೀರ್ಣದ ಶೇ.15.30ರಷ್ಟು ಭೂ ಭೂಗಗಳಲ್ಲಿ ಭೂ ಕುಸಿತವಾಗುತ್ತದೆ ಎಂದು ಹೇಳಿದೆ. 2009ರಲ್ಲಿ ಕೇವಲ 27 ಭೂ ಕುಸಿತ ಪ್ರಕರಣಗಳು ವರದಿಯಾಗಿತ್ತು. 2009ರಿಂದ 2021ರ ವರೆಗೆ ಒಟ್ಟಾರೆ 13 ವರ್ಷಗಳಲ್ಲಿ 1,272 ಭೂ ಕುಸಿತಗಳಾಗಿವೆ. ಆ ಪೈಕಿ 2016ರಿಂದ ಭೂ ಕುಸಿತವಾಗುವ ಪ್ರಕರಣ ಹೆಚ್ಚಾಗಿದೆ ಹಾಗೂ ಸಾವು-ನೋವುಗಳು ಸಂಭವಿಸಿವೆ. 2016ರಲ್ಲಿ 125, 2017ರಲ್ಲಿ 219, 2018ರಲ್ಲಿ 462, 2019ರಲ್ಲಿ 161, 2020ರಲ್ಲಿ 264 ಹಾಗೂ 2021ರಲ್ಲಿ 66 ಭೂಮಿ ಅಥವಾ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸಿದ್ದವು. ಇನ್ನು ಈ ಪ್ರಾಕೃತಿಕ ವಿಕೋಪದಿಂದ 6 ವರ್ಷಗಳಲ್ಲಿ 44 ಮಂದಿ ಮೃತಪಟ್ಟಿದ್ದರು.
ಭೂಕುಸಿತವು ಎಲ್ಲಿ ಆಗುತ್ತಿದೆ?:
ಕೇಂದ್ರ ಸರ್ಕಾರದ ಅಧೀನದ ಇಸ್ರೋ (ISRO) ಅಂಗಸಂಸ್ಥೆಯಾದ National Remote Sensing Centre- NRSC(ISRO, GoI) ಮತ್ತು ಭಾರತಿಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (GSI) ಈಗಾಗಲೇ ಪಶ್ಚಿಮಘಟ್ಟದಲ್ಲಿ ಈವರೆಗೆ ಘಟಿಸಿರುವ ಎಲ್ಲ ಭೂಕುಸಿತಗಳನ್ನು ಸಮಗ್ರವಾಗಿ ಅಧ್ಯಯನಮಾಡಿ. ಅದರ ಆಧಾರದಲ್ಲಿ ತಮ್ಮ ವೈಜ್ಞಾನಿಕ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ. ಭವಿಷ್ಯದಲ್ಲಿ ಭೂಕುಸಿತವಾಗಬಹುದಾದ ಪ್ರದೇಶಗಳನ್ನೂ ಊಹಿಸಿವೆ (Simulation Models). ಅವುಗಳ ನಿಖರ ಮಾಹಿತಿಯ ಪ್ರಕಾರ, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಎಳು ಜಿಲ್ಲೆಗಳ (ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಗೂ ಉತ್ತರ ಕನ್ನಡ) ಕಡಿದಾದ ಗುಡ್ಡ ಕಣಿವೆಗಳ ಪ್ರದೇಶಗಳಲ್ಲಿ ಈ ಭೂಕುಸಿತವು ಘಟಿಸಿವೆ.
ಮತ್ತು, ಅಲ್ಲಿಯೇ ಭವಿಷ್ಯದಲ್ಲೂ ಭೂಕುಸಿತವಾಗುವ ಸಾಧ್ಯತೆಗಳಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (Karnataka State Natural Disaster Monitoring Centre-KSNDMC) ರಾಜ್ಯದ ಸುಮಾರು ಶೇ13 ಭಾಗದ ಪ್ರದೇಶದಲ್ಲಿ ಭೂಕುಸಿತವಾಗುತ್ತದೆ ಎಂದು ಅಂದಾಜಿಸಿದೆ.
ಭವಿಷ್ಯದಲ್ಲೂ ಭೂ ಕುಸಿತ ಸಾಧ್ಯತೆಯ 23 ತಾಲ್ಲೂಕುಗಳ ವಿವರ :
ಭವಿಷ್ಯದಲ್ಲಿ ಭೂಕುಸಿತದ ಸಾಧ್ಯತೆಗಳಿರುವ ಈ ಜಿಲ್ಲೆಗಳ 23 ತಾಲೂಕುಗಳನ್ನೂ ಅದು ಗುರುತಿಸಿದೆ. ಅವೆಂದರೆ:
ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ (ಕೊಡಗು ಜಿಲ್ಲೆ), ಸಕಲೇಶಪುರ ( ಹಾಸನ ಜಿಲ್ಲೆ), ಕೊಪ್ಪ, ಮೂಡಿಗೆರೆ. ಶೃಂಗೇರಿ ಹಾಗೂ ಚಿಕ್ಕಮಗಳೂರು (ಚಿಕ್ಕಮಗಳೂರು ಜಿಲ್ಲೆ), ಸಾಗರ ( ಶಿವಮೊಗ್ಗ ಜಿಲ್ಲೆ), ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ಹಾಗೂ ಜೋಯ್ತಾ (ಉತ್ತರ ಕನ್ನಡ ಜಿಲ್ಲೆ), ಕಾರ್ಕಳ ( ಉಡುಪಿ ಜಿಲ್ಲೆ), ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ)
ಇವುಗಳ ಜೊತೆಗೆ, ಈ ಕೆಲವು ವರ್ಷಗಳಲ್ಲಿ ಕುಂದಾಪುರ ತಾಲ್ಲೂಕು (ಉಡುಪಿ ಜಿಲ್ಲೆ), ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕು (ಶಿವಮೊಗ್ಗ ಜಿಲ್ಲೆ) ಹಾಗೂ ಖಾನಾಪುರ ತಾಲ್ಲೂಕು (ಬೆಳಗಾಂ ಜಿಲ್ಲೆ)ಯ ಹಲವು ಪ್ರದೇಶಗಳಲ್ಲೂ ಭೂಕುಸಿತವಾಗುತ್ತಿದೆ. ಈ ಎಲ್ಲ ತಾಲ್ಲೂಕು ಪ್ರದೇಶಗಳ ಕಡಿದಾದ ಗುಡ್ಡ-ಕಣಿವೆ ಪ್ರದೇಶಗಳನ್ನು “ಭೂಕುಸಿತವಾಗಬಲ್ಲ ಸೂಕ್ಷ್ಮ ಪ್ರದೇಶ” (Landslide Vulnerable Sensitive Zone) ಎಂದು ಗುರುತಿಸಬೇಕಿದೆ.
ಪ್ರಮುಖವಾಗಿ ಭೂ ಕುಸಿತ ಅಧ್ಯಯನ ಸಮಿತಿಯು ಭೂ ಕುಸಿತಕ್ಕೆ ಇರುವ ಪ್ರಮುಖ ಕಾರಣಗಳನ್ನು ತನ್ನ ವರದಿಯಲ್ಲಿ ತಿಳಿಸಿತ್ತು. ಆ ವರದಿಯಲ್ಲಿನ ಪ್ರಮುಖಾಂಶಗಳು ಈ ಕೆಳಕಂಡಂತಿದೆ :
ಭೂಕುಸಿತಕ್ಕೆ ಕಾರಣಗಳೇನು?:
ಈವರೆಗಿನ ಎಲ್ಲ ಅಧ್ಯಯನಗಳ ಸಮೀಕ್ಷೆ ಹಾಗೂ ಸಮಾಲೋಚನೆಯ ನಂತರ. ಮಲೆನಾಡು ಹಾಗೂ ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಭೂಗರ್ಭಶಾಸ್ತ್ರದ ಅಧ್ಯಯನದಂತೆ, ಪಶ್ಚಿಮಘಟ್ಟವು ಮೂಲತಃ ಭೂಕುಸಿತದ ಸಾಧ್ಯತೆಯಿರುವ ಸೂಕ್ತ ಪ್ರದೇಶವೇ ಆಗಿದೆ. ಇಲ್ಲಿನ ಕಲ್ಲುಮಿಶ್ರಿತ ಸಡಿಲವಾದ ಮಣ್ಣಿನ ರಚನೆ. ಕಡಿದಾದ ಗುಡ್ಡಗಳು, ತೆಳುವಾದ ಮೇಲ್ಪಣ್ಣಿನ ಹೊದಿಕೆ ಇವೆಲ್ಲ ಭೂಕುಸಿತಕ್ಕೆ ಪೂರಕವಾಗಬಲ್ಲ ಸನ್ನಿವೇಶ ಸೃಷ್ಟಿಸಬಲ್ಲವು. ಕಲ್ಲುಬಂಡೆಗಳ ಅದಿರಿನ ಸ್ವರೂಪ ಮತ್ತು ರಚನೆ. ಮೇಲ್ಮಣ್ಣು ಹಾಗೂ ಕೆಳಸ್ಥರದ ಭೂರಚನೆ. ಮೇಲ್ಪದರದ ಹಸಿರು ಮರಗಿಡಗಳ ಹೊದಿಕೆ ಅಥವಾ ಕಾಡಿನ ನಾಶ, ಇಳಿಜಾರಿನ ಪ್ರದೇಶದ ಭೂಸ್ವರೂಪ ಬದಲಾವಣೆ, ನೀರಿನ ಹರಿವಿನ ನೈಸರ್ಗಿಕ ಬಸಿಗಾಲುವೆಗಳ ನಾಶ ಅಥವಾ ಹೂಳು ತುಂಬಿರುವದು ಅಥವಾ ಅವನ್ನು ಆನ್ಯ ಉದ್ದೇಶಕ್ಕೆ ಬದಲಾಯಿಸಿರುವುದು, ರಸ್ತೆ, ಸೇತುವೆ ಅಥವಾ ಕಟ್ಟಡ ಕಟ್ಟುವ ಉದ್ದೇಶಕ್ಕಾಗಿ ಇಳಿಜಾರನ್ನು ಅತಿಯಾಗಿ ಕತ್ತರಿಸಿರುವುದು, ಮಣ್ಣು ಸಡಿಲವಾದ ಪ್ರದೇಶದಲ್ಲಿಯೇ ಮಳೆನೀರು ಹರಿಯತೊಡಗುವುದು ಮತ್ತು ಇಂಗುವುದು.
ಇಳಿಜಾರು ಪ್ರದೇಶದ ಕ್ವಾರಿಗಳು, ಕಡಿದಾದ ಇಳಿಜಾರಿನಲ್ಲಿನ ಕಾಮಗಾರಿಗಳು, ಗುಡ್ಡಗಳ ಬುಡದಲ್ಲಿ ಮಣ್ಣು ಸವೆತ, ತೊರೆ-ಹೊಳೆಯಂಚುಗಳಲ್ಲಿ ಮಣ್ಣು ಸವೆತ, ಅನ್ಯ ಉದ್ದೇಶಕ್ಕಾಗಿ ಆರಣ್ಯಭೂಮಿಯನ್ನು ತ್ವರಿತವಾಗಿ ಹಾಗೂ ವ್ಯಾಪಕವಾಗಿ ಭೂಪರಿವರ್ತನೆ ಮಾಡಿದ್ದು ಇವೆಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಭೂಕುಸಿತಕ್ಕೆ ಪೂರಕ ಪರಿಸ್ಥಿತಿ ನಿರ್ಮಿಸುತ್ತಿವೆ. ಒಟ್ಟಾರೆಯಾಗಿ, ಇದರಿಂದಾಗುವ ಈ ಬಗೆಯ ಭೂಕುಸಿತಗಳನ್ನು “ತೇವಾಂಶಭರಿತ ಮಣ್ಣು ಹಾಗೂ ಕಲ್ಲುಬಂಡೆಗಳ ಚಾರುವಿಕೆ” ಎಂದು ತಜ್ಞರು ಗುರುತಿಸುತ್ತಾರೆ. (Mud- Slides and Rock-Falls).
ಭೂ ಕುಸಿತಕ್ಕೆ ಎರಡು ಬಗೆಯ ಪ್ರಚೋದನೆ ಕಾರಣ :
ಈ ಬಗೆಯ ಭೂಕುಸಿತಕ್ಕೆ ಅಂತಿಮವಾಗಿ ಎರಡು ಬಗೆಯ ಪ್ರಚೋದನೆಗಳು ಕಾರಣ ಎಂದು ಹೇಳಬಹುದು ಒಂದನೆಯದು, ಒಮ್ಮೆಲೆ ಅತಿಯಾಗಿ ಸುರಿಯುವ ಭಾರಿಮಳೆ (ಕರ್ನಾಟಕದಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ ಸರಾಸರಿ ಒಂದೇ ತೆರನಲ್ಲಿದ್ದರೂ. ಕೆಲವೇ ಗಂಟೆಗಳಲ್ಲಿ ಒಮ್ಮೆಲೆ ಅತಿಯಾಗಿ ಮಳೆ ಸುರಿಯುವ ಸಂದರ್ಭಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವದನ್ನು ಹವಾಮಾನ ತಜ್ಞರು ದಾಖಲಿಸಿದ್ದಾರೆ. ಸ್ಥಳೀಯ ಹಾಗೂ ಜಾಗತಿಕ ಪರಿಸರದ ಗುಣಮಟ್ಟದಲ್ಲಿನ ಭಾರಿ ಏರುಪೇರಿನಿಂದಾಗುತ್ತಿರುವ ಒಟ್ಟಾರೆ ಫಲಶೃತಿಯಾದ “ಹವಾಮಾನ ಬದಲಾವಣೆ”ಯ ಪರಿಣಾಮವಿದು ಎನ್ನಬಹುದು). ಎರಡನೇಯದು, ಸಡಿಲವಾದ ಮೇಲಣ್ಣಿನ ಹಸಿರು ಹೊದಿಕೆಯನ್ನು ನಾಶಮಾಡುವ ಹಾಗೂ ಭಾರಿ ಪ್ರಮಾಣದ ಮಳೆನೀರನ್ನು ಒಮ್ಮೆಲೆ ಮಣ್ಣಿನೊಳಕ್ಕೆ ಬಿಟ್ಟು ಕೊಡುವ ತೆರನಾದ ಭೂಸ್ವರೂಪ ಪರಿವರ್ತನೆ. ಇವೆರಡೂ ಪ್ರಮುಖ ಕಾರಣಗಳಾಗಿವೆ. ಒಂದು ಪ್ರದೇಶದಲ್ಲಿ ಏಕಕಾಲಕ್ಕೆ ಇವೆರಡೂ ಪ್ರಚೋದನೆಗಳು ಜೊತೆಯಾದರೆ, ಅಲ್ಲಿ ಭೂಕುಸಿತವಾಗತೊಡಗುತ್ತದೆ.
ತಜ್ಞರು ಹೇಳುವಂತೆ, ಇಂದು ಸಂಭವಿಸುತ್ತಿರುವ ಬಹುತೇಕ ಎಲ್ಲ ಭೂಕುಸಿತಗಳೂ ಮಾನವ ನಿರ್ಮಿತವೇ ಆಗಿವೆ. ಅದರಲ್ಲೂ ಮುಖ್ಯವಾಗಿ ಅರಣ್ಯ ಒತ್ತುವರಿ, ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳು, ರಸ್ತೆ, ಮನೆ ಇತ್ಯಾದಿಗಳ ನಿರ್ಮಾಣಕ್ಕಾಗಿ ಕಾಡು ಹಾಗೂ ಗುಡ್ಡಗಳನ್ನು ಕಡಿಯುವುದು ಗುಡ್ಡ ಕುಸಿತಕ್ಕೆ ಕಾರಣವಾಗುತ್ತಿವೆ. ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಮಿತಿಮೀರಿದರೆ ಇಂಥ ಅನಾಹುತಗಳು ಸಂಭವಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಗಾಗ ಕೈ ಕೊಡುತ್ತಿವೆ ಮಳೆ ಮಾಪನ ಕೇಂದ್ರಗಳು :
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ರಾಜ್ಯದಾದ್ಯಂತ ಬ್ಯಾಟರಿ ಮತ್ತು ಸೌರ ಫಲಕ ಆಧಾರಿತ 6505 ಮಳೆ ಮಾಪನ ಕೇಂದ್ರ (TRG), ಹೋಬಳಿ ಮಟ್ಟಗಳಲ್ಲಿ 935 ಟೆಲಿಮೆಟ್ರಿಕ್ ಹವಾಮಾನ ಕೇಂದ್ರ (TWS) ಸ್ಥಾಪಿಸಲಾಗಿದೆ. 6505 ಟಿಆರ್ ಜಿ ಕೇಂದ್ರಗಳ ಪೈಕಿ 5,500 ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆಯಷ್ಟೆ ಎಂದು ಮೂಲಗಳು ತಿಳಿಸಿವೆ.
ದಟ್ಟ ಮೋಡ- ಭಾರೀ ಮಳೆ ಜಿಪಿಆರ್ ಎಸ್ ನಿಂದ ದತ್ತಾಂಶ ರವಾನೆಗೆ ತೊಡಕು :
ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಮೋಡ ಜಾಸ್ತಿಯಿರುವ ಕಾರಣ ಜಿಪಿಆರ್ ಎಸ್ ಮೂಲಕ ದತ್ತಾಂಶ ಸಮರ್ಪಕವಾಗಿ ಕೆಎಸ್ ಎನ್ ಡಿಎಂಸಿಗೆ ರವಾನೆಯಾಗುವದರಲ್ಲಿ ಸಮಸ್ಯೆಯಿದೆ. ಆಗಾಗ ಬ್ಯಾಟರಿ ಕೈಕೊಡುವುದರಿಂದ ಮಳೆ ಮಾಪನ ಕೇಂದ್ರಗಳಿಂದ ಮಳೆ ಮಾಹಿತಿ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ನಿರಂತರವಾಗಿ ಮಾಹಿತಿ ರವಾನೆ ಕಷ್ಟವಾಗುತ್ತಿದೆ. ಆದರೂ ದಿನನಿತ್ಯ ಕೇಂದ್ರದಿಂದ ಉಸ್ತುವಾರಿ ನಡೆಸಿ ಸೇವಾದಾರರಿಗೆ ಸಂಪರ್ಕಿಸಿ ಮಳೆ ಮಾಪನ ಕೇಂದ್ರದ ಸಮಸ್ಯೆಯನ್ನು ಮೂರು ದಿನಗಳ ಒಳಗೆ ರಿಪೇರಿ ಮಾಡುತ್ತಾರೆ. ಒಂದೊಮ್ಮೆ ಟಿಆರ್ ಜಿ ಅಥವಾ ಟಿಡಬ್ಲ್ಯುಎಸ್ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಪಕ್ಕದ ಕೇಂದ್ರದ ಮಾಹಿತಿಯನ್ನು ಆಧರಿಸಿ ಹವಾಮಾನ ವರದಿ ನೀಡುತ್ತೇವೆ.
ಇದನ್ನೂ ಓದಿ : Nandi Hills| ನಂದಿ ಗಿರಿಧಾಮದಲ್ಲಿ ಭೂರಮೆಯ ಶೃಂಗಾರ : ಮಂಜು- ಮಳೆ ನಡುವೆ ಚುಮು ಚುಮು ಚಳಿ!!
ಜಿಪಿಆರ್ ಎಸ್ ಗಿಂತ ಜಿಸ್ಯಾಟ್ ಉತ್ತಮ ಆದರೆ ವಚ್ಚದಾಯಕ :
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮೋಡ ಜಾಸ್ತಿಯಾದಾಗ ಜಿಪಿಆರ್ ಎಸ್ ಮೂಲಕ ದತ್ತಾಂಶ ರವಾನೆಗೆ ತೊಡಕಾಗುತ್ತದೆ. ಜಿಪಿಆರ್ ಎಸ್ ಆಧಾರಿತ ಮಳೆ ಮಾಪನ ಕೇಂದ್ರದಲ್ಲಿ ಬ್ಯಾಟರಿ ಕೈಕೊಡುವ, ಸೂರ್ಯನ ಶಾಖವಿಲ್ಲದೆ ಸೌರಫಲಕದಿಂದ ವಿದ್ಯುತ್ ಇಲ್ಲದೆ ಸಮಸ್ಯೆಯಾಗುತ್ತದೆ. ಜಿಪಿಆರ್ ಎಸ್ ಸೌಲಭ್ಯಕ್ಕೆ ಕೇಂದ್ರವೊಂದಕ್ಕೆ ವರ್ಷಕ್ಕೆ 10 ಸಾವಿರ ರೂ. ತನಕ ಜಿಪಿಆರ್ ಎಸ್ ಸೌಲಭ್ಯಕ್ಕೆ ಖರ್ಚಾಗುತ್ತದೆ. ಅದರ ಬದಲು ಟಿಆರ್ ಜಿ ಕೇಂದ್ರದಲ್ಲಿ ಮೋಡಮ್ ಹಾಕಿ ಯಾವುದೇ ತೊಡಕಿಲ್ಲದೆ ನೇರವಾಗಿ ಉಪಗ್ರಹ ಆಧಾರಿತ ವಿಸ್ಯಾಟ್ (VSAT) ಗೆ ಮಳೆ ಮಾಹಿತಿ ರವಾನಿಸಿ ಅಲ್ಲಿಂದ ಕೆಎಸ್ ಡಿಎಂಸಿ ಸರ್ವರ್ ಗೆ ಡೇಟಾ ರವಾನಿಸಬಹುದು. ಇದು ವೆಚ್ಚದಾಯಕ. ಕೇಂದ್ರವೊಂದಕ್ಕೆ ವರ್ಷಕ್ಕೆ ಒಂದು ಲಕ್ಷ ರೂ. ವೆಚ್ಚವಾಗುತ್ತದೆ. ತೀವ್ರ ಅಗತ್ಯವಿರುವ ಕಡೆ ಸರ್ಕಾರ ಇದನ್ನು ಅಳವಡಿಸಬಹುದು ಎಂದು ಕೆಎಸ್ ಡಿಎಂಸಿ ಉನ್ನತ ಮೂಲಗಳು ತಿಳಿಸಿದೆ.
ಭೂ ಕುಸಿತ : ಜನರನ್ನು ಎಚ್ಚರಿಸುವ ಕೆಲಸ ಸಕಾಲದಲ್ಲಾಗುತ್ತಿಲ್ಲ :
“ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಪಶ್ಚಿಮಘಟ್ಟ, ಕರಾವಳಿ ಭಾಗಗಳಲ್ಲಿ ಗುಡ್ಡ ಕುಸಿತ ಸಾಮಾನ್ಯ ಎನ್ನುವಂತಾಗಿರುವುದು ದುರದೃಷ್ಟಕರ. ಭೂ ಕುಸಿತ ಶಾಶ್ವತ ತಡೆಗೆ ರಾಜ್ಯ ಸರ್ಕಾರ ವಿಜ್ಞಾನ ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರದ ನವೀನ ಮಾರ್ಗಗಳನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಗೆ ಗಮನ ಕೊಡಬೇಕು. ಒಂದೇ ದಿನ 250 ಮಿ.ಮೀನಿಂದ 400 ಮಿ.ಮೀ ಮಳೆಯಾದರೆ ಗುಡ್ಡ ಅಥವಾ ಭೂಕುಸಿತ ಸಾಮಾನ್ಯವಾಗಿ ಆಗುತ್ತದೆ. ಭೂ ಕುಸಿತದ ಅಪಾಯವಿರುವ ಪ್ರದೇಶಗಳನ್ನು ಈಗಾಗಲೇ ರಾಜ್ಯದಲ್ಲಿ ಗುರ್ತಿಸಲಾಗಿದೆ. ಹೀಗಿರುವಾಗ ಜೋರು ಮಳೆ ಬರುವ 24 ಗಂಟೆಗಳ ಮೊದಲೇ ಇಂತಹ ಸ್ಥಳಗಳಲ್ಲಿ ಅಳವಡಿಸಿರುವ ಮಳೆ ಮಾಪನ ಕೇಂದ್ರಗಳ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿ ಭೂ ಕುಸಿತ ಸಂಭವಿಸುವ ಕಡೆ, ಸ್ಥಳೀಯರನ್ನು ಅಪಾಯದ ಸ್ಥಳದಿಂದ ಬೇರೆಡೆ ಸ್ಥಳಾಂತರವಾಗುವಂತೆ ಎಚ್ಚರಿಕೆ ನೀಡುವ ಪ್ರಮುಖ ಕೆಲಸ ಸರಿಯಾಗಿ ಆಗುತ್ತಿಲ್ಲ” ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಹಾಗೂ ವಿಜ್ಞಾನಿ ವಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಅಗತ್ಯ ಸ್ಥಳಗಳಲ್ಲಿ 3 ಡಿ ಸಬ್‌ಸರ್ಫೇಸ್ ಇಮೇಜಿಂಗ್ ಬಳಕೆ :
“ರಾಜ್ಯದಲ್ಲಿ ಹಲವು ಕಡೆ ಮಳೆ ಮಾಪನ ಕೇಂದ್ರಗಳು, ಟೆಲಿಮೆಟ್ರಿ ಹವಾಮಾನ ಕೇಂದ್ರಗಳು ಕಾರ್ಯ ಸ್ಥಗಿತಗೊಳಿಸಿವೆ. ಈ ಬಗ್ಗೆ ಕೂಡಲೇ ಕಂದಾಯ ಇಲಾಖೆ ತುರ್ತು ಗಮನ ಹರಿಸಬೇಕಿದೆ. ಭೂಕುಸಿತದ ಹೆಚ್ಚಿನ ಅಪಾಯದ ವಲಯಗಳಲ್ಲಿ, ಭೂಗರ್ಭ ನಿರೋಧಕ ಚಿತ್ರಣದಿಂದ ಮ್ಯಾಪಿಂಗ್ ಮಾಡಬೇಕಾಗಿದೆ. ಅಗತ್ಯವಿರುವ ಕಡೆಗಳಲ್ಲಿ ನಿರ್ದಿಷ್ಟ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಮಧ್ಯಸ್ಥಿಕೆಗಳಿಗೆ ಒಳನೋಟ ಪಡೆದುಕೊಳ್ಳಲು 3 ಡಿ ಸಬ್‌ಸರ್ಫೇಸ್ ಇಮೇಜಿಂಗ್ ಬಳಸಬೇಕು. ಭೂ ಕುಸಿತ ಪ್ರದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಪುನಃ ಅದೇ ರೀತಿಯ ಕುಸಿತದ ಪ್ರಕರಣ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪದ್ಧತಿಯೇ ನಮ್ಮಲ್ಲಿಲ್ಲದಿರುವುದು ಬೇಸರದ ಸಂಗತಿ. ಭೂ ಕುಸಿತ ನಿಯಂತ್ರಣಕ್ಕೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಈ ವಲಯದಲ್ಲಿ ಹೆಚ್ಚಿನ ಅನುಭವ ಹೊಂದಿದ ವಿಜ್ಞಾನಿಗಳು ಹಾಗೂ ತಜ್ಞರನ್ನು ರಾಜ್ಯ ಸರ್ಕಾರ ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು” ಎಂದು ವಿ.ಎಸ್.ಪ್ರಕಾಶ್ ಹೇಳಿದ್ದಾರೆ.
ಭೂಕುಸಿತ ತಡೆಗೆ ಹಸಿರು ಕವಚ ಯೋಜನೆ ಜಾರಿಗೆ ಆಗ್ರಹ :
“ಕರ್ನಾಟಕದ ಪಶ್ಚಿಮಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗೆ ಹಸಿರು ಕವಚ ಯೋಜನೆ ಜಾರಿಯ ಜೊತೆಗೆ 2021ರ ಭೂ ಕುಸಿತ ತಡೆ ಅಧ್ಯಯನ ವರದಿಯ ಶಿಫಾರಸ್ಸುಜಾರಿ ಮಾಡಬೇಕು. ಪಶ್ಚಿಮ ಘಟಕ್ಕೆ ಸುಸ್ಥಿರ ರಸ್ತೆ ಅಭಿವೃದ್ಧಿ ನೀತಿ, ಗುಡ್ಡಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ನಿಯಮಾವಳಿಗಳಲ್ಲಿ ಬದಲಾವಣೆ ಸೇರಿದಂತೆ ಮೊದಲಾದ ತುರ್ತು ಕ್ರಮ ಕೈಗೊಳ್ಳಬೇಕು. ಭೂ ಕುಸಿತ ತಡೆಗೆ ನಿಶ್ಚಿತ ಕಾರ್ಯ ಯೋಜನೆ ರೂಪಿಸಿ ಅದನ್ನು ಆದ್ಯತೆ ಮೇರೆಗೆ ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧತೆ ತೋರಿಸಬೇಕು” ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸರ್ಕಾರವನ್ನು ಆಗ್ರಹಿಸಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.