ಬೆಂಗಳೂರು, ಜು.16 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bengaluru Development Authority -BDA) ವು ಅನಧಿಕೃತ ಬಡಾವಣೆಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಹೂಡಿ ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸುವ ಸಲುವಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ 172 ಅನಧಿಕೃತ ಬಡಾವಣೆಗಳಿರುವುದನ್ನು ಪತ್ತೆಹಚ್ಚಿದೆ. ಈ ಕುರಿತ ಅನಧಿಕೃತ ಲೇಔಟ್ ಗಳ ಪಟ್ಟಿಯಿರುವ ಸಂಪೂರ್ಣ ವಿವರವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಇಂತಹ ಅಕ್ರಮ ಲೇಔಟ್ ಗಳಲ್ಲಿ ನಿವೇಶನ ಅಥವಾ ಮನೆ ಖರೀದಿಸದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಅನಧಿಕೃತ ಬಡಾವಣೆಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡಿಎ 279 ಅನಧಿಕೃತ ಲೇಔಟ್ ಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ಲೇಔಟ್ ನಿರ್ಮಿಸಿದ ವಿಸ್ತೀರ್ಣ ಮತ್ತಿತರ ವಿವರಗಳಿರಲಿಲ್ಲ. ಬಳಿಕ ಬಿಬಿಎಂಪಿ ಮತ್ತು ಬಿಡಿಎ ವ್ಯಾಪ್ತಿಯಲ್ಲಿನ ಅಕ್ರಮ ಬಡಾವಣೆಗಳ ನಿಖರ ಸಂಖ್ಯೆ ತಿಳಿಯಲು ತಾಲ್ಲೂಕು ಪಂಚಾಯತ್ ಇಲಾಖೆ ಸದಸ್ಯರು ಹಾಗೂ ಇಂಜಿನಿಯರ್ ಸದಸ್ಯರ ವಿಭಾಗದ ಎಂಜಿನಿಯರ್‌ಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಅಂತಿಮವಾಗಿ 172 ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿದ ಅದರ ಮಾಲೀಕರ ಹೆಸರು, ಸ್ವತ್ತಿನ ವಿಸ್ತೀರ್ಣ, ಸರ್ವೇ ನಂಬರ್, ಆ ಆಸ್ತಿಯು ಇರುವ ಸರ್ವೆ ನಂಬರ್, ಗ್ರಾಮ, ಹೋಬಳಿ, ತಾಲ್ಲೂಕುಗಳ ಮಾಹಿತಿಗಳ ಸಂಪೂರ್ಣ ವಿವರವನ್ನು ಬಿಡಿಎ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲೇ ಅತಿಹೆಚ್ಚು ಅನಧಿಕೃತ ಬಡಾವಣೆ :
ಈ 172 ಅನಧಿಕೃತ ಬಡಾವಣೆಗಳಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನಲ್ಲೇ ಅತಿಹೆಚ್ಚು ಅಂದರೆ 81ಕ್ಕೂ ಹೆಚ್ಚು ಬಡಾವಣೆಗಳನ್ನು ಬಿಡಿಎ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 59ಕ್ಕೂ ಹೆಚ್ಚು ಅಕ್ರಮ ಬಡಾವಣೆಗಳಿವೆ. ಒಟ್ಟು 16 ಹೋಬಳಿಗಳಲ್ಲಿ ಅನಧಿಕೃತ ಬಡಾವಣೆ ರಚನೆಯಾಗಿದೆ. ಉತ್ತರಹಳ್ಳಿ ಹೋಬಳಿ, ಕೆಂಗೇರಿ ಹೋಬಳಿ, ಯಶವಂತಪುರ ಹೋಬಳಿ, ಅತ್ತಿಬೆಲೆ ಹೋಬಳಿ, ವರ್ತೂರು ಹೋಬಳಿ, ಬೇಗೂರು ಹೋಬಳಿ, ಜಿಗಣಿ ಹೋಬಳಿ, ಕೆ.ಆರ್.ಪುರ ಹೋಬಳಿ, ಭಟ್ಟರಹಳ್ಳಿ ಹೋಬಳಿ, ಬಿದರಹಳ್ಳಿ ಹೋಬಳಿ, ಯಲಹಂಕ ಹೋಬಳಿ, ಜಾಲ ಹೋಬಳಿ, ಕಸಬಾ ಹೋಬಳಿ, ದಾಸನಪುರ ಹೋಬಳಿ, ಸರ್ಜಾಪುರ ಹೋಬಳಿ, ಹೆಸರಘಟ್ಟ ಹೋಬಳಿಗಳ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ನಿರ್ಮಿಸುವ ಬಡಾವಣೆಗಳ ಬಗ್ಗೆ ಸಾರ್ವಜನಿಕರು ಪರಿಶೀಲಿಸಿ ನಿವೇಶನ ಅಥವಾ ಮನೆಯನ್ನು ಕೊಂಡರೆ ಉತ್ತಮ. ಇಲ್ಲವಾದಲ್ಲಿ ಅನಗತ್ಯವಾಗಿ ಸಮಸ್ಯೆಗೆ ಒಳಗಾಗುತ್ತೀರ. ಈ ಹೋಬಳಿಗಳ ಪೈಕಿ ಅತಿಹೆಚ್ಚು ಅನಧಿಕೃತ ಬಡಾವಣೆಗಳು ಉತ್ತರಹಳ್ಳಿ, ಕೆಂಗೇರಿ, ಯಶವಂತಪುರ, ದಾಸನಪುರ, ಬೇಗೂರು ಹಾಗೂ ಕೆ.ಆರ್.ಪುರ ಹೋಬಳಿಗಳಲ್ಲಿ ಕಂಡು ಬಂದಿದೆ.
ಇದನ್ನೂ ಓದಿ : * BW EXCLUSIVE | BDA PRR TENDER FLOP | ಬಿಡಿಎ ಪೆರಿಫಿರಲ್ ರಿಂಗ್ ರೋಡ್ ಮೂರನೇ ಬಾರಿ ಕರೆದ ಟೆಂಡರ್ ವಿಫಲ : ಪ್ರಾಧಿಕಾರ ಎಡವುತ್ತಿರುವುದು ಎಲ್ಲಿ?
ಅನಧಿಕೃತ ಲೇಔಟ್ ಗಳೆಂದರೆ ಏನು? :
ಅಕ್ರಮ ಲೇಔಟ್‌ಗಳೆಂದರೆ ಮೂರು ಹಂತಗಳನ್ನು ಅನುಸರಿಸದೆ ವಸತಿ ಭೂಮಿಯಾಗಿ ಪರಿವರ್ತಿಸಲಾದ ಕೃಷಿ ಭೂಮಿಯಾಗಿರುತ್ತದೆ. ಇಂತಹ ಲೇಔಟ್ ಗಳಲ್ಲಿ ಅಕಸ್ಮಾತ್ ಮನೆ ಅಥವಾ ನಿವೇಶನಗಳನ್ನು ಕೊಂಡರೆ ಬ್ಯಾಂಕ್ ಲೋನ್ ಸಿಗುವುದಿಲ್ಲ. ಸೂಕ್ತ ರೀತಿಯಲ್ಲಿ ನಿಯಮಾವಳಿಯಂತೆ ಕನಿಷ್ಠ 30 ಅಡಿ ರಸ್ತೆಯನ್ನು ಮಾಡಿರುವುದಿಲ್ಲ. ಪಾರ್ಕ್, ನಾಗರೀಕ ಸೌಲಭ್ಯಗಳಿಗಾಗಿ ತೆರೆದ ಪ್ರದೇಶ ಬಿಟ್ಟಿರುವುದಿಲ್ಲ. ಸರ್ಕಾರಿ ಕರಾಬು, ಕೆರೆಯನ್ನು ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿದ್ದರೆ, ಮುಂದೆ ಅಂತಹ ಸ್ಥಳದಲ್ಲಿ ನಿವೇಶನಕೊಳ್ಳವ ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಬಹುದು. ಹೀಗಾಗಿ ಅನಧಿಕೃತ ಬಡಾವಣೆಗಳ ಪಟ್ಟಿಯನ್ನು ಪರಿಶೀಲಿಸಿ, ಎಚ್ಚೆತ್ತುಕೊಳ್ಳಬೇಕು ಎಂದು ಬಿಡಿಎ ನಗರ ಯೋಜನಾ ಸದಸ್ಯ ಎಲ್.ಶಶಿಕುಮಾರ್ ಹೇಳಿದ್ದಾರೆ.
ಭೂ ಬಳಕೆ ಬದಲಾವಣೆಗೆ ಬಿಡಿಎಯಿಂದ ಪರಿವರ್ತನೆಗೆ ಅಗತ್ಯವಾದ ಅನುಮತಿಯನ್ನು ತೆಗೆದುಕೊಳ್ಳುವುದು, ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಒಪ್ಪಿಗೆ ಮತ್ತು ಲೇಔಟ್ ರಚನೆಗೆ ಬಿಡಿಎ ಅನುಮೋದನೆ ಪಡೆದುಕೊಂಡಿರುವ ಬಡಾವಣೆಯಾಗಿರುತ್ತದೆ ಎಂದು. ಯಾವುದೇ ಲೇಔಟ್‌ನಲ್ಲಿ ನಿವೇಶನ ಅಥವಾ ಮನೆಗಳನ್ನು ಖರೀದಿಸಲು ಹೆಚ್ಚು ಹಣವನ್ನು ಹೂಡಿಕೆ ಮಾಡುವ ಸಾರ್ವಜನಿಕರು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು. ತಮ್ಮ ಆಸ್ತಿ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆ ಮಾಡುವಂತೆ ನಾವು ಸಾರ್ವಜನಿಕರನ್ನು ಪದೇ ಪದೇ ಒತ್ತಾಯಿಸುತ್ತೇವೆ. ಈ ಅಕ್ರಮ ಬಡಾವಣೆಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮೂಲ ಸೌಕರ್ಯಗಳನ್ನು ಸರಿಯಾಗಿ ಒದಗಿಸಿರುವುದಿಲ್ಲ.
ಅನೇಕರು ಪಂಚಾಯಿತಿಯಿಂದ ಅನುಮೋದನೆ ಪಡೆದು ಅನುಮೋದನೆ ನೀಡಲು ಅಧಿಕಾರ ಹೊಂದಿಲ್ಲದಿದ್ದರೂ ಒಪ್ಪಿಗೆ ನೀಡುತ್ತಾರೆ. ಅಕ್ರಮವಲ್ಲದ ಲೇಔಟ್‌ಗಳಿಗೆ ನೀರು, ವಿದ್ಯುತ್ ನೀಡದಿದ್ದರೆ ನಿಯಂತ್ರಣ ಸುಲಭವಾಗುತ್ತದೆ. ಅಕ್ರಮ ಬಡಾವಣೆಗಳು ಅಥವಾ ಕಟ್ಟಡಗಳು ಪತ್ತೆಯಾದಾಗ ಕೆಡವಲಾಗುತ್ತದೆ. ಆದರೆ ಇಲ್ಲಿ ಶಿಕ್ಷೆಗೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ ಎಂದು ಎಂಜಿನಿಯರ್ ಸದಸ್ಯ ಶಶಿಕುಮಾರ್ ಹೇಳಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.