ಬೆಂಗಳೂರು, ಜು.06 www.bengaluruwire.com : ನಗರದ ಎಂ.ಜಿ.ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್(ಪಿ.ಯು.ಬಿ) ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಛೇರಿ ಬಿಬಿಎಂಪಿಗೆ ಒಟ್ಟಾರೆ 19.86 ಕೋಟಿ ರೂ. ಬಾಕಿ ಬಾಡಿಗೆ ಪಾವತಿಸದ ಕಾರಣ ಆ ಎರಡೂ ಸ್ವತ್ತುಗಳಿಗೆ ಬೀಗ ಹಾಕಿದೆ.
ಪಿ.ಯು.ಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ (ಹಿಂದಿನ ವಿಜಯಾ ಬ್ಯಾಂಕ್) 2011 ಇಸವಿಯಿಂದ ಮತ್ತು ಅಂಚೆ ಕಛೇರಿಯು 2006ರಿಂದ ಹಳೆಯ ಬಾಡಿಗೆಯನ್ನೇ ಹಲವು ವರ್ಷಗಳಿಂದ ಪಾಲಿಕೆಗೆ ಪಾವತಿಸುತ್ತಿತ್ತು. ಈ ನಡುವೆ ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆಕಚೇರಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರಲಿಲ್ಲ. ಅಲ್ಲದೆ ಡಿಸೆಂಬರ್ 2022 ರಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಕೂಡ ಬಾಡಿಗೆಯನ್ನು ಪಾವತಿಸಿರುವುದಿಲ್ಲ.
ಬ್ಯಾಂಕ್ ಆಫ್ ಬರೋಡಾ ಪಾವತಿಸಬೇಕಾದ ಬಾಡಿಗೆ ಮೊತ್ತ, 7,61,70,155 ರೂ. ಆಗಿದ್ದರೆ, ಬಡ್ಡಿ ಮೊತ್ತವೇ 8,69,22,095 ಆಗಿರುತ್ತೆ. ಬಾಕಿ ಜಿಎಸ್ ಟಿ, ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್)ರವರು 2011 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಒಟ್ಟಾರೆ ಪಾಲಿಕೆಗೆ 17.56 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಇನ್ನು ಅಂಚೆ ಕಛೇರಿಯಿಂದ 2.32 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿತ್ತು. ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಈ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಛೇರಿಯನ್ನು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಬಂದೋಬಸ್ತ್ ನೊಂದಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.