ಇತರ ದೊಡ್ಡ ಮಂಗಗಳಂತೆ, ಒರಾಂಗುಟನ್‌ಗಳು ಅನೇಕ ಮಾನವ ತರಹದ ಅಭ್ಯಾಸಗಳನ್ನು ಹೊಂದಿರುವುದನ್ನು ನಾವು ಆಗಾಗ ಮಾಧ್ಯಮಗಳಲ್ಲಿ, ಇಂಟರ್ ನೆಟ್ ನಲ್ಲಿ ಓದಿರುತ್ತೇವೆ, ನೋಡಿರುತ್ತೇವೆ. ಅವು ಉಪಕರಣಗಳನ್ನು ಬಳಸುವುದು, ತಮ್ಮ ಗೂಡುಗಳ ಮೇಲೆ ಛಾವಣಿ ಹಾಕುವುದು ಇತ್ಯಾದಿ ಚಟುವಟಿಕೆ ಮಾಡುವುದನ್ನು ಪ್ರಾಣಿತಜ್ಞರು ಗಮನಿಸಿದ್ದಾರೆ. ಆದರೆ ಈಗ ಸಂಶೋಧಕರು ಮತ್ತೊಂದು ಬೆರಗುಗೊಳಿಸುವ ಹೋಲಿಕೆಯನ್ನು ಗಮನಿಸಿದ್ದಾರೆ.
ಸುಮಾತ್ರಾದಲ್ಲಿ ಒರಾಂಗುಟನ್ ಜಾತಿಯ ಮಂಗವು ತನಗಾದ ಗಾಯವನ್ನು ಗುಣಪಡಿಸಲು ಔಷಧೀಯ ಸಸ್ಯವನ್ನು ಬಳಸುವುದನ್ನು ಪತ್ತೆಹಚ್ಚಿದ್ದಾರೆ. ಅದನ್ನು ವೈಜ್ಞಾನಿಕ ರೀತಿಯಲ್ಲಿ ಮೊದಲ ಬಾರಿಗೆ ದಾಖಲಿಸಿದ್ದಾರೆ. ಈ ಕುರಿತಂತೆ ವಿಜ್ಞಾನ ಪತ್ರಿಕೆ ಸೈನ್ಸ್ ಡಾಟ್ ಆರ್ಗ್ ನಲ್ಲಿ ಇತ್ತೀಚೆಗೆ ಈ ಬಗ್ಗೆ ವೈಜ್ಞಾನಿಕ ವರದಿ ಪ್ರಕಟವಾಗಿದೆ. ತಾಜಾ ಗಾಯಕ್ಕೆ ಚಿಕಿತ್ಸೆ ನೀಡಲು ವೈಜ್ಞಾನಿಕವಾಗಿ ಸಾಬೀತಾಗಿರುವ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವನ್ನು ಬಳಸಿದ ಮೊದಲ ದಾಖಲಿತ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ.
“ಇದು ನಿಜವಾಗಿಯೂ ಉತ್ತಮವಾದ ದಾಖಲಿತ ಅಧ್ಯಯನವಾಗಿದೆ. ಸಸ್ತನಿಗಳಿಂದ ಗಾಯಗಳ ಚಿಕಿತ್ಸೆಯ ಬಗ್ಗೆ ಬಹಳಷ್ಟು ಹೊಸ ಮಾಹಿತಿಯು ಬೆಳಕಿಗೆ ಬರುತ್ತಿದೆ ಮತ್ತು ಇದು ಇತರ ಪ್ರಾಣಿಗಳಲ್ಲಿಯೂ ಸಹ ಸಂಭವಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ “ಎಂದು ನಾಗಸಾಕಿ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಫಾರ್ ಟ್ರಾಪಿಕಲ್ ಮೆಡಿಸಿನ್‌ನ ಪ್ರೈಮಟಾಲಜಿಸ್ಟ್ ಮೈಕೆಲ್ ಹಫ್ಮನ್ ಹೇಳುತ್ತಾರೆ.
ಒಂದು ದಿನ ವೀಕ್ಷಕರು ಅಸಮಾನ್ಯವಾದುದನ್ನು ಗಮನಿಸಿದರು :
ಜ್ಯೂರಿಚ್ ವಿಶ್ವವಿದ್ಯಾನಿಲಯ, ಇಂಡೋನೇಷ್ಯಾದ ರಾಷ್ಟ್ರೀಯ ವಿಶ್ವವಿದ್ಯಾನಿಲಯ ಮತ್ತು ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಬಿಹೇವಿಯರ್ (MPGAB) ಜಂಟಿಯಾಗಿ ನಿರ್ವಹಿಸಲ್ಪಡುವ ಅರಣ್ಯ ಮೀಸಲು ಪ್ರದೇಶದಲ್ಲಿ ರಾಕಸ್ ಎಂಬ ಅಡ್ಡ ಹೆಸರಿನ ವಯಸ್ಕ ಗಂಡು ಒರಾಂಗುಟಾನ್ ಸೇರಿದಂತೆ 150 ಸುಮಾತ್ರಾನ್ ಒರಾಂಗುಟಾನ್‌ಗಳಿವೆ. (ರಾಕಸ್ ಹೆಸರಿನ ಅರ್ಥ “ದುರಾಸೆ”) ಕಳೆದ 3 ದಶಕಗಳಲ್ಲಿ, ಇಲ್ಲಿನ ಕ್ಷೇತ್ರ ತಂಡಗಳು ವಾಡಿಕೆಯಂತೆ ಮಂಗಗಳ ಮೇಲೆ ಅಧ್ಯಯನ ನಡೆಸಿದ್ದು, ಸುಮಾರು 30,000 ಗಂಟೆಗಳ ಅವಲೋಕನಗಳನ್ನು ದಾಖಲಿಸಿವೆ. ಒಂದು ದಿನ ಅವರು ಅಸಾಮಾನ್ಯವಾದುದನ್ನು ಗಮನಿಸಿದರು.
ರಾಕುಸ್ ಎಂಬ ಒರಾಗುಂಟಾನ್ ಗಾಯವಾದಾಗ ಹೀಗೆ ಮಾಡಿತ್ತು :
2022 ರಲ್ಲಿ, ರಾಕಸ್ ತನ್ನ 30ನೇ ವಯಸ್ಸಿನ ಆರಂಭದಲ್ಲಿ ಕೆಲವು ವೈಯಕ್ತಿಕ ಚಟುವಟಿಕೆಗಳನ್ನು ಮಾಡುತ್ತಿತ್ತು. ಆ ಒರಾಗುಂಟಾನ್ “ಫ್ಲ್ಯಾಂಗ್ಡ್” ಎಂಬ ವಿಶಿಷ್ಟವಾದ ದ್ವಿತೀಯ ಲೈಂಗಿಕ ಬೆಳವಣಿಗೆಯಾದಾಗ ಹೆಚ್ಚು ಆಕ್ರಮಣಕಾರಿಯಾಗಿತ್ತು. ಇತರ ಪುರುಷ ಒರಾಗುಂಟಾನ್ ಜೊತೆ ಹಲವು ಘರ್ಷಣೆಗಳಲ್ಲಿ ತೊಡಗುತ್ತಿತ್ತು. ಜೂನ್ ತಿಂಗಳ ಅಂತ್ಯದಲ್ಲಿ ಒಂದು ದಿನ, ವೀಕ್ಷಕರು ಒರಾಂಗುಟನ್‌ಗಳ ನಡುವಿನ ಘರ್ಷಣೆಯ ಶಬ್ದಗಳನ್ನು ಕೇಳಿದರು. ಸ್ವಲ್ಪ ಸಮಯದ ನಂತರ, ಅವುಗಳ ಘರ್ಷಣೆಯಲ್ಲಿ, ರಾಕುಸ್ ಒರಾಗುಂಟಾನ್ ಕೋತಿಯ ಬಲ ಕೆನ್ನೆಯ ಮೇಲೆ ಆಳವಾದ ಕೆಂಪು ಗಾಯ ಮತ್ತು ಅದರ ಬಾಯಿಯೊಳಗೆ ಮತ್ತೊಂದು ಗಾಯವನ್ನು ಗುರುತಿಸಿದರು.
ಈ ಗಲಾಟೆಯಾದ ಮೂರು ದಿನಗಳ ನಂತರ, ರಾಕುಸ್ ಮರದ ಮೇಲೆ ಕುಳಿತು, ಅಕಾರ್ ಕುನಿಂಗ್ ಎಂದು ಕರೆಯಲ್ಪಡುವ ಫೈಬ್ರೂರಿಯಾ ಟಿಂಕ್ಟೋರಿಯಾದ ಎಲೆಗಳನ್ನು ತಿನ್ನುತ್ತಿತ್ತು. ಈ ಸಸ್ಯವು ಹಲವು ಔಷಧೀಯ ಗುಣಗಳನ್ನು ಹೊಂದಿದ ಎಲೆಯಾಗಿದ್ದು, ಆಗ್ನೇಯ ಏಷ್ಯಾ ಮತ್ತು ಚೀನಾದಾದ್ಯಂತ ಈ ಎಲೆಗಳನ್ನು ನೋವು ನಿವಾರಕ, ಜ್ವರ ನಿವಾರಣೆ ಮತ್ತು ಮೂತ್ರವರ್ಧಕವಾಗಿ ಬಳಸಲಾಗುತ್ತದೆ. ಒರಾಂಗುಟಾನ್ ಮಂಗವು ಸಾಮಾನ್ಯವಾಗಿ ಫೈಬ್ರೂರಿಯಾ ಟಿಂಕ್ಟೋರಿಯಾ ಎಲೆಯನ್ನು ಅಪರೂಪವಾಗಿ ತಿನ್ನುತ್ತವೆ.
ಆದರೆ ಇತರ ಒರಾಗುಂಟಾನ್ ಜೊತೆ ಗಲಾಟೆಯಾಗಿ ಗಾಯಗೊಂಡ ನಂತರ ರಾಕುಸ್ ಮಂಗವು ಅರ್ಧ ಗಂಟೆಗೂ ಹೆಚ್ಚು ಕಾಲ ಆ ಎಲೆಗಳನ್ನು ತಿನ್ನುತ್ತಿತ್ತು. ನಂತರ ಅದು ಎಲೆಗಳನ್ನು ಚೆನ್ನಾಗಿ ಅಗೆದು ತನ್ನ ಉದ್ದನೆಯ ಬೆರಳುಗಳಿಂದ ಆ ಹಸಿರು ತಿರುಳನ್ನು ಬಾಯಿಂದ ತೆಗೆದು, ತನ್ನ ಕೆನ್ನೆಯ ಮೇಲಿನ ಗಾಯದ ಮೇಲೆ ಅದನ್ನು ಗಾಯ ಗುಣವಾಗುವ ತನಕ ಆಗಾಗ ಮಾಡುತ್ತಲೇ ಇತ್ತು.
ಬೇರೆ ಮಂಗಗಳಿಂದ ಸ್ವಯಂ ಚಿಕಿತ್ಸೆ ಜ್ಞಾನ ಪಡೆಯುತ್ತವಾ? :
ಬೇರೆ ಮಂಗಗಳ ಜೊತೆಗಿನ ಕಾದಾಟದಲ್ಲಿ ರಾಕುಸ್ ಹೆಸರಿನ ಒರಾಗುಂಟಾನ್ ಗೆ ಆದ ಗಾಯವು 8 ದಿನಗಳಲ್ಲಿ ಗುಣವಾಯಿತು. ಒಂದು ತಿಂಗಳೊಳಗೆ ಸಂಪೂರ್ಣವಾಗಿ ಗಾಯ ವಾಸಿಯಾಯಿತು. ಕೇವಲ ಮಸುಕಾದ ಗಾಯದ ಗುರುತು ಮಾತ್ರ ಉಳಿದಿತ್ತು. ತಮ್ಮ ಲೇಖನದಲ್ಲಿ, ಸಂಶೋಧಕರು ರಾಕಸ್ ಅವರ ನಡವಳಿಕೆಯು “ನೋವು ಕಡಿಮೆ ಮಾಡುವ, ಉರಿಯೂತವನ್ನು ತಡೆಗಟ್ಟುವ ಮತ್ತು ಗಾಯದ ಗುಣಪಡಿಸುವಿಕೆಯನ್ನು ವೇಗಗೊಳಿಸುವ ಸ್ವಯಂ ಔಷಧಿಗಳನ್ನು ಬಳಸುತ್ತಿದೆ ” ಎಂದು ಹೇಳಿದ್ದಾರೆ. ಒರಾಂಗುಟನ್‌ಗಳು ಸಾಮಾಜಿಕ ಕಲಿಯುವ ಮತ್ತು ಗಾಯದ ಸ್ವಯಂ ಚಿಕಿತ್ಸೆಯು ಒಂದು ಕೋತಿಯಿಂದ ಇನ್ನೊಂದಕ್ಕೆ ಹರಡುವ ಸಾಂಸ್ಕೃತಿಕ ಜ್ಞಾನವಾಗಿರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ.
“ಇದು ಖಚಿತವಾಗಿ ಬಹುದೊಡ್ಡ ಆಶ್ಚರ್ಯವಾಗಿದೆ. “ಈ ನಡವಳಿಕೆಗಳು ಎಷ್ಟು ಉದ್ದೇಶಪೂರ್ವಕವೆಂದು ಹೇಳಲು ಯಾವಾಗಲೂ ಕಷ್ಟ, ಆದರೆ ಈ ಸಂದರ್ಭದಲ್ಲಿ ಅದು ಉದ್ದೇಶಪೂರ್ವಕ ಮತ್ತು ಯೋಜಿತವಾಗಿದೆ ಎಂದು ಸ್ಪಷ್ಟವಾಗಿತ್ತು” ಹೇಳುತ್ತಾರೆ, ಮೀಸಲು ಪ್ರದೇಶದಲ್ಲಿ ಒರಾಂಗುಟಾನ್ ಸಂಶೋಧನಾ ಯೋಜನೆ ನಿರ್ದೇಶಿಸಿದ ಮತ್ತು ಸಹಲೇಖಕರಾದ ಎಂಪಿಜಿಎಬಿ ವಿಜ್ಞಾನಿ ಕ್ಯಾರೋಲಿನ್ ಶುಪ್ಲಿ .
ಈ ಹೊಸ ಸಂಶೋಧನೆಯು ನಮ್ಮ ವಿಕಾಸದ ಇತಿಹಾಸದ ಬಗ್ಗೆ ಜಿಜ್ಞಾಸೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈಗ ಹಲವಾರು ವಾನರ ಜಾತಿಗಳ ನಡುವೆ ಸ್ವಯಂ ಔಷಧಿಗಳನ್ನು ದಾಖಲಿಸಲಾಗಿದೆ. ಸಂಶೋಧಕರು ಅಂತಹ ನಡವಳಿಕೆಗಳು ಮಾನವ ಮತ್ತು ಮಂಗಗಳ ಕೊನೆಯ ಸಾಮಾನ್ಯ ಪೂರ್ವಜರ ಸಂಗ್ರಹದ ಭಾಗವಾಗಿರಬಹುದು ಎಂದು ಭಾವಿಸುತ್ತಾರೆ. “ಆ ವಾನರರ ಅರಿವಿನ ಸಾಮರ್ಥ್ಯ ತುಂಬಾ ಹಳೆಯದಾಗಿರಬೇಕು” ಎಂದು ಶುಪ್ಲಿ ಹೇಳಿದ್ದಾರೆ.
ಒಟ್ಟಾರೆ ಹಿಂದಿನ ಅಧ್ಯಯನಗಳು ಮಂಗಗಳು ಮತ್ತು ಇತರ ಪ್ರಾಣಿಗಳಲ್ಲಿ ಇತರ ರೀತಿಯ ಸ್ವಯಂ ಔಷಧಿಗಳ ಬಗ್ಗೆ ವಿವರಿಸಿವೆ. ಉದಾಹರಣೆಗೆ, ಕೆಲವು ಚಿಂಪಾಂಜಿಗಳು ಹುಳಗಳ ಸೋಂಕುಗಳಿಗೆ ಚಿಕಿತ್ಸೆ ನೀಡಲು ಔಷಧೀಯ ಪೊದೆಸಸ್ಯ ವೆರ್ನೋನಿಯಾ ಅಮಿಗ್ಡಲಿನಾ (Vernonia Amygdalina) ದ ಕಹಿ ಎಲೆಗಳನ್ನು ಹುಡುಕಿ ಅವುಗಳನ್ನು ತಿನ್ನುತ್ತವೆ.
ಮತ್ತೊಂದು ಅಧ್ಯಯನ ಬೋರ್ನಿಯೊದಲ್ಲಿನ ಒರಾಂಗುಟಾನ್‌ಗಳು ಡ್ರಾಕೇನಾ ಕ್ಯಾಂಟ್ಲೇಯಿ ಎಲೆಯಿಂದ ಮಸಾಜ್ ಮಾಡಿಕೊಳ್ಳುತ್ತವೆ ಎಂದು ವರದಿ ಮಾಡಿದೆ. ಇದು ಸ್ಥಳೀಯ ಜನರು ನೋಯುತ್ತಿರುವ ಸ್ನಾಯುಗಳು, ಕೀಲು ನೋವು ಮತ್ತು ಊತಕ್ಕೆ ಚಿಕಿತ್ಸೆ ನೀಡಲು ಬಳಸುವ ಉರಿಯೂತದ ಗುಣಲಕ್ಷಣಗಳನ್ನು ನಿವಾರಣೆ ಮಾಡುವ ಔಷದೀಯ ಸಸ್ಯವಾಗಿದೆ. ಮಂಗಗಳು ಎಲೆಗಳನ್ನು ಆರಿಸಿ, ಅವುಗಳನ್ನು ಹಸಿರು ಬಿಳಿ ನೊರೆಯಾಗಿ ಅಗಿಯುತ್ತವೆ. ನಂತರ ಆ ಅಗಿದ ವಸ್ತುವನ್ನು ತಮ್ಮ ಕೈ ಮತ್ತು ಕಾಲುಗಳ ಮೇಲೆ ಉಜ್ಜಿಕೊಳ್ಳುತ್ತವೆ.
ಚಿಂಪಾಂಜಿಗಳು ಪೌಲ್ಟಿಸಿನಂತಹ ಔಷಧೀಯ ಸಸ್ಯಗಳೊಂದಿಗೆ ಗಾಯಗಳಿಗೆ ಚಿಕಿತ್ಸೆ ನೀಡುವುದನ್ನು ಸಹ ವಿವರಿಸಿವೆ. ಈಗ, ಗುನುಂಗ್ ಲೆಯುಸರ್ ರಾಷ್ಟ್ರೀಯ ಉದ್ಯಾನವನದ ಸುವಾಕ್ ಬಾಲಿಂಬಿಂಗ್ ಸಂಶೋಧನಾ ಪ್ರದೇಶದಲ್ಲಿ ಸಂಶೋಧಕರು ಅಂತಹ ನಡವಳಿಕೆಯನ್ನು ಮತ್ತೊಂದು ಮಂಗನ ಜಾತಿಯಿಂದ ವೈಜ್ಞಾನಿಕವಾಗಿ ದಾಖಲಿಸಿದ್ದಾರೆ.