ಬೆಂಗಳೂರು, ಏ.30 www.bengaluruwire.com : ರಾಜ್ಯದಲ್ಲಿ ಭೀಕರ ಬರದ ನಡುವೆಯೂ ಕೆಎಂಎಫ್ ಹಾಲು ಉತ್ಪಾದನೆ (Milk Production) ಹಾಗೂ ಮಾರಾಟ (Sales)ದಲ್ಲಿ ಕೆಎಂಎಫ್ (Karnataka Milk Federation) ಹೊಸ ದಾಖಲೆ ಸೃಷ್ಟಿಸಿದೆ.
ರಾಜ್ಯದಲ್ಲಿ ಬೇಸಿಗೆ ಕಾಲ(Summer)ದಲ್ಲೂ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಸಾಧನೆ ಮಾಡಿದೆ. ಕಳೆದ ವರ್ಷ ಏಪ್ರಿಲ್ 27ಕ್ಕೆ (77.33 ಲಕ್ಷ ಲೀ.) ಹೋಲಿಸಿದರೆ ಈ ಬಾರಿ (82.12 ಲಕ್ಷ ಲೀ.) ಶೇ.6ರಷ್ಟು ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಹಾಲು ಉತ್ಪಾದನೆ ಮಾತ್ರವಲ್ಲದೆ ಮಾರಾಟ 51 ಲಕ್ಷ ಲೀ. ನಷ್ಟಾಗಿದೆ.
2023ರಲ್ಲಿ ಜನವರಿಯಿಂದ ಏಪ್ರಿಲ್ 27ರ ತನಕ ರಾಜ್ಯದಲ್ಲಿ ಪ್ರತಿದಿನ ಸರಾಸರಿಯಾಗಿ 75.60 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದರೆ, 2024 ಇಸವಿಯಲ್ಲಿ ಜನವರಿ ಆರಂಭದಿಂದ ಏಪ್ರಿಲ್ 27ರ ತನಕ 80.74 ಲಕ್ಷ ಲೀ. ಹಾಲು ಉತ್ಪಾದನೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿಯಾಗಿ ಶೇ.7ರಷ್ಟು ಅಂದರೆ 5.14 ಲಕ್ಷ ಲೀ. ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಏ.27ರಂದು 14.29 ಲಕ್ಷ ಲೀಟರ್ ಹಾಲು, ಹಾಸನದಲ್ಲಿ ನಿತ್ಯ 12.33 ಲಕ್ಷ ಲೀಟರ್, ಮಂಡ್ಯ 9.25 ಲಕ್ಷ ಲೀಟರ್, ಕೋಲಾರದಲ್ಲಿ ನಿತ್ಯ 10.22 ಲಕ್ಷ ಲೀಟರ್, ತುಮಕೂರಿನಲ್ಲಿ 7.72 ಲಕ್ಷ ಲೀಟರ್, ಮೈಸೂರಿನಲ್ಲಿ 7.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
ಬರವಿದ್ದರೂ ಹೈನುಗಾರಿಕೆ ರೈತರಿಗೆ ನಿರಂತರ ಆದಾಯ ಮೂಲ :
ರಾಜ್ಯದಲ್ಲಿ ಬೇಸಿಗೆ ಪರಿಣಾಮ ಹಸಿರು ಮೇವು ಹಾಗೂ ನೀರಿಗೆ ಹಲವು ಭಾಗಗಳಲ್ಲಿ ಕೊರತೆಯಿದೆ. ಆದರೆ ಇದರ ನಡುವೆ ಹಾಲು ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಎಲ್ಲರಲ್ಲೂ ಹುಬ್ಬೇರುವಂತೆ ಮಾಡಿದೆ. ಪರಿಣಾಮ ರಾಜ್ಯದಲ್ಲಿ ಕೆಎಂಎಫ್ ಹಾಲಿನ ಹೊಳೆಯೇ ಹರಿಸಿದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಕೆಎಂಎಫ್ ಹಾಲಿನ ಉತ್ಪಾದನೆ ಕುಸಿಯದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಇದರ ಪರಿಣಾಮವಾಗಿ ತೀವ್ರ ಬರಗಾಲ ನಡುವೆಯೂ ಹಾಲಿನ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್.
“ಬರಗಾಲದಿಂದಾಗಿ ರೈತರಿಗೆ ಆದಾಯದ ಮೂಲವಿಲ್ಲ. ನಿರಂತರವಾಗಿ ಆದಾಯ ಬರುವ ಮೂಲವೆಂದರೆ ಅದು ಹೈನುಗಾರಿಕೆಯೊಂದೇ. ಹೀಗಾಗಿ ರೈತರು ಹೈನುಗಾರಿಕೆ (Dairy farming) ಮೇಲೆ ಹೆಚ್ಚು ಗಮನಕೊಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 25 ಲಕ್ಷ ಮಂದಿ ಹೈನುಗಾರರಿದ್ದಾರೆ. ಆ ಪೈಕಿ ಕೆಎಂಎಫ್ ಗೆ ಹಾಲು ಹಾಕುವ ಹೈನುಗಾರರ ಪ್ರಮಾಣ 8.5 ಲಕ್ಷ ದಿಂದ 9 ಲಕ್ಷವಿದೆ. ಕೆಎಂಎಫ್ ಪ್ರತಿ ಲೀ. ಗೆ 33 ರೂ. ಹಣ ನೀಡುತ್ತದೆ. ಸರ್ಕಾರವು ಪ್ರತಿ ಲೀ. ಹಾಲಿಗೆ 5 ರೂ.ಸಹಾಯಧನ (Subsidy) ನೀಡುತ್ತದೆ. ಅಲ್ಲಿಗೆ ಒಟ್ಟಾರೆ ರೈತರಿಗೆ ಪ್ರತಿ ಲೀಟರ್ ಗೆ 39 ರೂ. ಸಿಗುತ್ತಿದೆ. ಈ ಬರ ಪರಿಸ್ಥಿತಿಯಲ್ಲೂ ಉತ್ತಮ ಹಾಗೂ ನಿರಂತರ ಆದಾಯ ಮೂಲ ಆಗಿರುವ ಕಾರಣ ಹಾಲು ಉತ್ಪಾದನೆಗೆ ರೈತರು ಶ್ರಮಿಸಿರುವ ಕಾರಣ ಹಾಲು ಸಂಗ್ರಹ ಹೆಚ್ಚಳವಾಗಿರುವ ಸಾಧ್ಯತೆಯಿದೆ” ಎಂದು ಅವರು ಬೆಂಗಳೂರು ವೈರ್ ಗೆ ಹೇಳಿದ್ದಾರೆ.
ಬೇಸಿಗೆಯಲ್ಲಿ ಈ ಬಾರಿ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿಯನ್ನು ಕೆಎಂಎಫ್ ಇಟ್ಟುಕೊಂಡಿತ್ತು. ಆ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮ ಹಾಗೂ ಯೋಜನೆ ಕೈಗೊಂಡ ಪರಿಣಾಮ ಕ್ಷೀರ ಉತ್ಪಾದನೆಯಲ್ಲಿ ಏರಿಕೆಯಾಗಿದೆ.
ಕೆಎಂಎಫ್ ಐಸ್ ಕ್ರೀಮ್ ಮಾರಾಟ ಶೇ.40ರಷ್ಟು ಏರಿಕೆ :
ಈ ಬಾರಿಯ ಬೇಸಿಗೆ ಬಿಸಿಗೆ ಜನರು ತಂಪು ಪಾನೀಯ ಹಾಗೂ ಐಸ್ ಕ್ರೀಮ್ ಸೇವನೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಹೀಗಾಗಿ ಕೆಎಂಎಫ್ ಐಸ್ ಕ್ರೀಮ್ ಮಾರಾಟವು ಕಳೆದ ವರ್ಷ ಪ್ರತಿದಿನ 16,000 ಲೀ. ಮಾರಾಟಕ್ಕೆ ಹೋಲಿಸಿದರೆ ಈ ಬಾರಿ 25,000 ಲೀ. ಗೆ ಹೆಚ್ಚಾಗಿದೆ. ಅಂದರೆ ಐಸ್ ಕ್ರೀಮ್ ಮಾರಾಟ ಶೇ.40ರಷ್ಟು ಹೆಚ್ಚಾಗಿದೆ. ಕೆಎಂಎಫ್ ಬಳಿ ಸದ್ಯ ಫ್ಯಾಮಿಲಿ ಪ್ಯಾಕ್, ಕೋನ್ ಸೇರಿದಂತೆ 35-40 ರೀತಿಯ ಉತ್ಪನ್ನಗಳಿವೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಕುಸಿತ :
ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಹಾಲು ಒಕ್ಕೂಟ ರಾಜ್ಯಾಧ್ಯಂತ ಎಮ್ಮೆ ಹಾಲು ಮಾರಾಟಕ್ಕೆ ಚಾಲನೆ ನೀಡಿತ್ತು. ಆದರೆ ಇದಾದ ನಾಲ್ಕೇ ತಿಂಗಳಿಗೆ ಬೆಂಗಳೂರಿನಲ್ಲಿ ಮಾತ್ರ ಎಮ್ಮೆ ಹಾಲು ಬೇಡಿಕೆ ಇಲ್ಲದ ಕಾರಣ ಮಾರಾಟ ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಎಮ್ಮೆ ಹಾಲು ಮಾರುಕಟ್ಟೆಗೆ ಕೆಎಂಎಫ್ ಬಿಡುಗಡೆ ಮಾಡಿತ್ತು. ಎಮ್ಮೆ ಹಾಲಿಗೆ ಗ್ರಾಹಕರಿಂದ ಬೇಡಿಕೆ ಕುಸಿತ ಆಗಿರುವುದು ಕೆಎಂಎಫ್ ಈ ನಿರ್ಧಾರಕ್ಕೆ ಕಾರಣ. ಆದರೆ ರಾಜ್ಯದಲ್ಲಿ ನಿತ್ಯ ಒಟ್ಟಾರೆ 1 ಲಕ್ಷ ಲೀಟರ್ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದ್ದು, ಉತ್ತರ ಕರ್ನಾಟಕ, ಮಹಾರಾಷ್ಟ್ರ ಭಾಗಕ್ಕೆ ಎಮ್ಮೆ ಹಾಲು ಎಂದಿನಂತೆ ಪೂರೈಕೆಯಾಗುತ್ತಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.