ಬೆಂಗಳೂರು, ಮಾ.02 www.bengaluruwire.com : ಬೃಹತ್ ಬೆಂಗಳೂರು ಕೇಂದ್ರ ಕಚೇರಿ ಕೂಗಳತೆ ದೂರುದಲ್ಲಿ ಚೆನ್ನಾಗಿರೋ ಗಟ್ಟುಮುಟ್ಟಾದ ಕಬ್ಬನ್ ಪೇಟೆ ಅಡ್ಡರಸ್ತೆಯಲ್ಲಿ ಹಾಕಿದ್ದ ಕಾಂಕ್ರಿಟ್ ರಸ್ತೆಯನ್ನು ಅಗೆದು ಅದೇ ಜಾಗದಲ್ಲಿ ಹೊಸ ಕಾಂಕ್ರಿಟ್ ರಸ್ತೆ ಮಾಡೋ ದುಸ್ಸಾಹಸಕ್ಕೆ ಬಿಬಿಎಂಪಿಯ ಎಂಜಿನಿಯರ್ ಗಳು ಮುಂದಾಗಿರೋದನ್ನು ಖುದ್ದು ಬೆಂಗಳೂರು ವೈರ್ ಜಿಪಿಎಸ್ ಆಧಾರಿತ ಚಿತ್ರದೊಂದಿಗೆ ಸೆರೆ ಹಿಡಿದಿದೆ.
ಕಬ್ಬನ್ ಪೇಟೆ ಸುತ್ತಮುತ್ತಲಿನ ಸ್ಥಳಗಳಲ್ಲಿ 2017-18ನೇ ಸಾಲಿನಲ್ಲಿ ಕಾಂಕ್ರಿಟ್ ರಸ್ತೆಯನ್ನು ಹಾಕಲಾಗಿತ್ತು. ಆದರೂ ಬಿಡಬ್ಲ್ಯುಎಸ್ಎಸ್ ಬಿಯವರು ಇತ್ತೀಚೆಗೆ ಪೈಪ್ ಅಳವಡಿಕೆಗಾಗಿ ಎರಡೂವರೆ ಅಡಿಯಷ್ಟು ಅಗಲದಲ್ಲಿ ರಸ್ತೆ ಗುಂಡಿ ತೋಡಿ ಪುನಃ ಅಲ್ಲಿನ ಕಾಂಕ್ರಿಟ್ ರಸ್ತೆಯನ್ನು ಕಾಂಕ್ರಿಟ್ ಹಾಕಿ ಮುಚ್ಚಿದ್ದರು. ಆದರೆ ಇದನ್ನೇ ಪಿಳ್ಳೆ ನೆಪ ಮಾಡಿಕೊಂಡ ಬಿಬಿಎಂಪಿಯ ಎಂಜಿನಿಯರ್ ಗಳು, ಗುತ್ತಿಗಾರರೊಂದಿಗೆ ಶಾಮೀಲಾಗಿ ಚೆನ್ನಾಗಿರೋ ರಸ್ತೆಯನ್ನು ಜೆಸಿಬಿಯಿಂದ ಕಿತ್ತು ಹಾಕಿದ್ದಾರೆ. ಮೊದಲೇ ಚಿಕ್ಕಪೇಟೆ, ಅಕ್ಕಿಬೇಟೆ, ಬಳೆಪೇಟೆ, ತರಗುಪೇಟೆ, ನಗರ್ತಪೇಟೆಯಂತಹ ಬೆಂಗಳೂರಿನ ಅತಿ ಹಳೆಯ ಪ್ರದೇಶದಲ್ಲಿ ಐದಾರು ಅಡಿಯಿಂದ 15-20 ಅಡಿಯಷ್ಟು ಕಿಷ್ಕಿಂಧೆಯಂತಹ ರಸ್ತೆಗಳೇ ಹೆಚ್ಚು. ಕಬ್ಬನ್ ಪೇಟೆ ಸುತ್ತಮುತ್ತಲಲ್ಲಿ ಈಗಾಗಲೇ ಹಿಂದಿನ ಚಿಕ್ಕಪೇಟೆ ಶಾಸಕರಾದ ಆರ್.ವಿ.ದೇವರಾಜ್ 2017-18ರಲ್ಲೇ ಕಾಂಕ್ರಿಟ್ ರಸ್ತೆಯನ್ನು ಹಾಕಿಸಿದ್ದರು. ಇದನ್ನು ಖುದ್ದು ಅವರೇ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ 2017-18ನೇ ಸಾಲಿನಲ್ಲಿ ಒಳಚರಂಡಿ ಪೈಪ್, ಪ್ರತಿ ಮನೆಗೆ ಕುಡಿಯಲು ಬೋರ್ ವೆಲ್ ಸಂಪರ್ಕ ಹಾಗೂ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಈ ರಸ್ತೆಗಳು ಕನಿಷ್ಠ 10-15 ವರ್ಷ ಬಾಳಿಕೆ ಬರುತ್ತೆ. ಆದರೆ ಈಗ ಮತ್ತೆ ಬೆಂಗಳೂರು ಜಲಮಂಡಳಿ ಒಳಚರಂಡಿ ಪೈಪ್ ಹಾಕಿದ ಮೇಲೆ ಕಾಂಕ್ರಿಟ್ ಹಾಕಿ ರಸ್ತೆ ಸರಿ ಮಾಡಿದ್ದಾರೆ. ಆದರೆ ಪುನಃ ಆ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹೊಸದಾಗಿ ಕಾಂಕ್ರಿಟ್ ಹಾಕುವ ಅಗತ್ಯವೇನಿತ್ತು? ಕಾಂಟ್ರಾಕ್ಟರ್, ಎಂಜಿನಿಯರ್ ಗಳು ಜನರ ಹಣ ಲೂಟಿ ಮಾಡಲು ಹೀಗೆ ಮಾಡ್ತಿದ್ದಾರೆ. ಇವರ ಮೇಲೆ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳಬೇಕು” ಎಂದು ಚಿಕ್ಕಪೇಟೆಯ ಮಾಜಿ ಶಾಸಕರಾದ ಆರ್.ವಿ.ದೇವರಾಜ್ ಆಗ್ರಹಿಸಿದ್ದಾರೆ.
ಒಬ್ಬ ಮಾಜಿ ಮತ್ತು ಹಿರಿಯ ಶಾಸಕರು ಮತ್ತು ಮಾಜಿ ಸಚಿವರು ಆಗಿದ್ದ ಆರ್.ವಿ.ದೇವರಾಜ್ ಅವರೇ ಹೇಳುವಂತೆ ತಾವು ಹಾಕಿಸಿದ್ದ ಕಾಂಕ್ರಿಟ್ ರಸ್ತೆ ಕನಿಷ್ಠ ಪಕ್ಷ 10 ರಿಂದ 15 ವರ್ಷ ಬಾಳಿಕೆ ಬರುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಬಿಬಿಎಂಪಿಯ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ಸಹಾಯಕ ಎಂಜಿನಿಯರ್ ಸತ್ಯ ಅವರನ್ನು ಕೇಳಿದ್ರೆ, “ಕಬ್ಬನ್ ಪೇಟೆಯಲ್ಲಿನ 11 ಅಡ್ಡರಸ್ತೆ ಹಾಗೂ ಸುತ್ತಮುತ್ತ ಕಡೆಗಳಲ್ಲಿ 15 ವರ್ಷಗಳ ಹಿಂದೆ ಕಾಂಕ್ರಿಟ್ ರಸ್ತೆ ಹಾಕಲಾಗಿತ್ತು. ಆನಂತರ ಬೆಂಗಳೂರು ಜಲಮಂಡಳಿ ಪೈಪ್ ಹಾಕಲು ಅಗೆದು ಆನಂತರ ಸರಿಯಾಗಿ ಕಾಂಕ್ರಿಟ್ ಹಾಕಿಲ್ಲ. ಹಾಗಾಗಿ 11ನೇ ಅಡ್ಡರಸ್ತೆಗೆ ಪುನಃ ಕಾಂಕ್ರಿಟ್ ಹಾಕಲಾಗುತ್ತಿದೆ” ಎಂದು ಜಾರಿ ಕೊಂಡರು. ಬಳಿಕ ಬೆಂಗಳೂರು ವೈರ್ ಹೆಚ್ಚಿನ ಮಾಹಿತಿ ನೀಡುವಂತೆ, ಈ ರಸ್ತೆಗಳ ರಸ್ತೆ ಇತಿಹಾಸದ ಮಾಹಿತಿಯನ್ನು ನೀಡುವಂತೆ ಸಂಪರ್ಕಿಸಿದರೂ, ಅವರಾಗಲಿ, ಅವರ ಮೇಲಿನ ಅಧಿಕಾರಿಗಳಾದ ಎಇಇ ಪ್ರದೀಪ್ ಕುಮಾರ್, ಚಿಕ್ಕಪೇಟೆ ವಿಭಾಗದ ಇಇ ಯರ್ರಪ್ಪಾ ರೆಡ್ಡಿ ಹಾಗೂ ಸಿಇ ರಾಜೇಶ್ ಕೂಡ ಈ ಬಗ್ಗೆ ಸ್ಪಂದಿಸಿಲ್ಲ.
ಕಾರ್ಯಾದೇಶದಲ್ಲಿನ ಅವಧಿ ಮುಗಿದು 3 ತಿಂಗಳಾದರೂ ಕಾಮಗಾರಿ ಮುಗಿಸಿಲ್ಲ ಯಾಕೆ?:
ಈ ವಿಷಯದ ಬಗ್ಗೆ ಬೆಂಗಳೂರು ವೈರ್ ಮತ್ತಷ್ಟು ತನಿಖೆ ನಡೆಸಲು ಮುಂದಾದಾಗ, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿನ ಪ್ರಸ್ತುತ ಅಗೆದಿರುವ ರಸ್ತೆಯೂ ಸೇರಿದಂತೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿನ ಕೆಂಪೇಗೌಡನಗರ ಉಪವಿಭಾಗದಲ್ಲಿ ಸಮಗ್ರ ರಸ್ತೆ, ಚರಂಡಿ, ಫುಟ್ ಪಾತ್ ಮತ್ತು ಪಾರ್ಕ್ ಅಭಿವೃದ್ಧಿಪಡಿಸಲು ಎಸ್.ಕೆ.ಕೇಶವಮೂರ್ತಿ ಎಂಬ ಗುತ್ತಿಗೆದಾರರಿಗೆ ಮೇಯರ್ ಅನುದಾನದ ಅಡಿಯಲ್ಲಿ 4.35 ಕೋಟಿ ರೂ. (4,35,69,408 ರೂ.) ಮೊತ್ತದ ಕಾರ್ಯಾದೇಶವನ್ನು (ಕಾರ್ಯಾದೇಶ ನಂಬರ್ : EE (CKP)/Online WO/155/22-23 Dated 23/03/2023) ಬಿಬಿಎಂಪಿ ಚಿಕ್ಕಪೇಟೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ 23-03-2023ರಂದು ನೀಡಿದ್ದು, ಈ ಕಾರ್ಯಗಳೆನ್ನೆಲ್ಲಾ 8 ತಿಂಗಳಲ್ಲಿ ಮುಗಿಸುವಂತೆ ತಿಳಿಸಿದ್ದಾರೆ. ಈ ವರ್ಕ್ ಆರ್ಡರ್ ನಲ್ಲಿರುವಂತೆ 23-11-2023ರ ಒಳಗಾಗಿ ಸಂಪೂರ್ಣ ಕಾಮಗಾರಿಗಳನ್ನು ಎಸ್.ಕೆ.ಕೇಶವಮೂರ್ತಿ ಎಂಬ ಕಾಂಟ್ರಾಕ್ಟರ್ ಮಾಡಿ ಮುಗಿಸಬೇಕಿತ್ತು. ಆದರೆ ಇನ್ನೂ ಕೂಡ ಕಾಮಗಾರಿ ಪೂರ್ಣಗೊಳಿಸಿಲ್ಲದಿರುವುದು ಕಂಡು ಬಂದಿದೆ. ಅಂದರೆ ಕಾರ್ಯಾದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ರಸ್ತೆ ಇತಿಹಾಸ ಏನು ಹೇಳುತ್ತೆ? :
ಇನ್ನು ಹೊಸ ರಸ್ತೆ ಇತಿಹಾಸ 2.0ರಲ್ಲಿನ ಮಾಹಿತಿಯಂತೆ ಇಡೀ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಈ ಮೇಲಿನ ಕಾಮಗಾರಿ ಹೊರತುಪಡಿಸಿ, 2022-23 ಹಾಗೂ 2023-24ನೇ ಸಾಲಿನಲ್ಲಿ ಒಟ್ಟು ನಾಲ್ಕು ಪ್ಯಾಕೇಜ್ ಗಳಲ್ಲಿ ಕಾಮಗಾರಿಗಳನ್ನು ನಾಲ್ಕು ಗುತ್ತಿಗೆದಾರರಿಗೆ ನೀಡಲಾಗಿದೆ. ಮೊದಲನೆಯದಾಗಿ 2022-23ನೇ ಸಾಲಿನಲ್ಲಿ ಪ್ಯಾಕೇಜ್-4ರಲ್ಲಿ 10 ಕೋಟಿ ವೆಚ್ಚದಲ್ಲಿ ರಸ್ತೆ, ಪಾರ್ಕ್, ಚರಂಡಿ, ಪಾದಚಾರಿ ಮಾರ್ಗದ ಸಮಗ್ರ ಅಭಿವೃದ್ಧಿಯನ್ನು ಬಂಬೂ ಬಜಾರ್, ಕುಂಬಾರಗುಂಡಿ, ಕಲಾಸಿಪಾಳ್ಯ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ 103.14 ಮೀಟರ್ ಉದ್ದದ ಕಾಂಕ್ರಿಟನ್ನು 6 ರಸ್ತೆಗಳಲ್ಲಿ ಹಾಕಲಾಗಿದೆ ಎಂದು ರೋಡ್ ಹಿಸ್ಟರಿಯಲ್ಲಿದೆ. ಇನ್ನು 2022-23ರಲ್ಲಿ 21 ಲಕ್ಷದ ಕಾಮಗಾರಿಯಲ್ಲಿ ಕಲಾಸಿಪಾಳ್ಯ ಮತ್ತು ಕಲಾಸಿಪಾಳ್ಯ ಹೊಸ ವಿಸ್ತರಿತ ಪ್ರದೇಶದಲ್ಲಿ ಮಳೆ ಹಾಗೂ ಚರಂಡಿ ಹಾಗೂ ಒಟ್ಟು 65.60 ಮೀಟರ್ ಉದ್ದ 4 ಕಡೆಗಳಲ್ಲಿ ಕಾಂಕ್ರಿಟ್ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಇನ್ನು ಪೋರ್ಟರ್ಸ್ ಕಾಲೋನಿ ಮತ್ತು ಗಂಗಮ್ಮ ಆಚಾರಿ ರಸ್ತೆಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ 25 ರಸ್ತೆಗಳು ಕವರ್ ಆಗುವಂತೆ ಒಟ್ಟಾರೆ 427.65 ಮೀಟರ್ ಕಾಂಕ್ರಿಟ್ ರಸ್ತೆ, ಮಳೆ ನೀರು ಚರಂಡಿ ನಿರ್ಮಿಸಲಾಗಿದೆ. ಇನ್ನು 2023-24ನೇ ಸಾಲಿನಲ್ಲಿ 4 ಕಡೆಗಳಲ್ಲಿ 17.75 ಮೀಟರ್ ಉದ್ದದ ಮಳೆ ನೀರು ಮೋರಿಯನ್ನು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸುತ್ತದೆ.
ಒಟ್ಟಾರೆ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಚೆನ್ನಾಗಿರುವ ಕಬ್ಬನ್ ಪೇಟೆ ರಸ್ತೆ ಸೇರಿದಂತೆ ಇತರ ಕಡೆಗಳ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ನಡೆದ ಕಾಮಗಾರಿಗಳ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತರು ತನಿಖೆ ನಡೆಸಿದಲ್ಲಿ ಸತ್ಯ ಬಯಲಿಗೆ ಬರಲಿದೆ. ಚೆನ್ನಾಗಿರುವ ಕಾಂಕ್ರಿಟ್ ರಸ್ತೆಯನ್ನು ಕಿತ್ತು ಹಾಕಲು ಕಾರಣವಾಗಿರುವ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪ್ರಜ್ಞ ನಾಗರೀಕರ ಅಭಿಪ್ರಾಯವಾಗಿದೆ.