ಬೆಂಗಳೂರು, ಮಾ.1 www.bengaluruwire.com : ಬೆಂಗಳೂರಿನ 15ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗುರುವಾರ ಚಾಲನೆ ದೊರತಿದ್ದು, ಒರಾಯನ್ ಮಾಲ್, ಸುಚಿತ್ರ ಸಿನಿಮಾ ಅಕಾಡೆಮಿ, ಕಲಾವಿದರ ಸಂಘಗಳ 14 ಸ್ಕ್ರೀನ್ ಗಳಲ್ಲಿ ಚಿತ್ರಗಳು ಪ್ರದರ್ಶನ ಆರಂಭವಾಗಿದೆ. ಇಂದು ಚಲನಚಿತ್ರರಂಗದ ನಿರ್ದೇಶಕರು, ನಟ, ನಟಿಯರು, ಸಹಕಲಾವಿದರು, ರಂಗಭೂಮಿ ಕಲಾವಿದರು, ಸಿನಿಮಾ ಆಸಕ್ತರು ಸೇರಿದಂತೆ ಸಾವಿರಾರು ಮಂದಿ ದೇಶ ವಿದೇಶಗಳ ಸಿನಿಮಾವನ್ನು ಕಣ್ತುಂಬಿಕೊಂಡರು.
15 ವಿಭಾಗಗಳಲ್ಲಿ 60 ದೇಶಗಳ 200ಕ್ಕೂ ಹೆಚ್ಚು ಚಲನಚಿತ್ರಗಳು ಫೆ.29ರಿಂದ ಮಾರ್ಚ್ 7ನೇ ತಾರೀಖಿನವರೆಗೆ ನಗರದಲ್ಲಿ ಸಿನಿಪ್ರಿಯರಿಗೆ ವಿವಿಧ ಪ್ರಯೋಗತ್ಮಕ, ಮನರಂಜನಾ, ಮಾನವೀಯ ನೆಲೆಯುಳ್ಳ ಹೀಗೆ ನಾನಾ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇಂದು ಚಲನಚಿತ್ರೋತ್ಸವದ ಎರಡನೇ ದಿನ ಒರಿಯನ್ ಮಾಲ್ ಸೇರಿದಂತೆ ಹಲವು ಸ್ಕ್ರೀನ್ ಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಸಾಲಲ್ಲಿ ನಿಂತು ಚಿತ್ರ ವೀಕ್ಷಿಸಿದರು. ನಾವು ಆಸ್ಟ್ರೇಲಿಯಾದ ಡ್ಯಾಮೇಜ್ ಚಲನಚಿತ್ರ, ಫಿನ್ಲಾಂಡ್ ದೇಶದ ಫಿನಿಶ್ ಭಾಷೆಯಲ್ಲಿ ತಯಾರಾದ ಫಾಲನ್ ಲೀವ್ಸ್ ಹಾಗೂ ನೆದರ್ ಲ್ಯಾಂಡ್ ದೇಶದ ಸ್ವೀಟ್ ಡ್ರೀಮ್ಸ್ ಚಲನಚಿತ್ರವನ್ನು ವೀಕ್ಷಿಸಿದೆವು.
ಆಸ್ಟ್ರೇಲಿಯಾದ ನಿರ್ದೇಶಕಿ ಮೆಡಿಲಿನ್ ಬ್ಲಾಕ್ ವೆಲ್ ಅವರ 84 ನಿಮಿಷಗಳ “ಡ್ಯಾಮೇಜ್” ಚಿತ್ರವು 2023ರಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಬ್ರಿಟನ್ ಚಲನಚಿತ್ರೋತ್ಸವದಲ್ಲಿ ವಿಶೇಷವಾಗಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈ ಚಿತ್ರವು ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಚಿತ್ರದ ಈ ಕುರಿತಂತೆ ಹೇಳುವುದಾದರೆ ;
ಚಿತ್ರ : ಡ್ಯಾಮೇಜ್
ಅಲಿ ಸ್ಥಳೀಯನಲ್ಲ. ಬೇರೊಬ್ಬನ ಹೆಸರಿನಲ್ಲಿರುವ ಲೈಸೆನ್ಸ್ ಇಟ್ಟುಕೊಂಡು ಟ್ಯಾಕ್ಸಿ ಓಡಿಸುತ್ತಿರುತ್ತಾನೆ. ಆ ಊರಿನ ರಸ್ತೆಗಳ ಪರಿಚಯವೇ ಇಲ್ಲದ ಕಾರಣ ಆತ ಆ ಟ್ಯಾಕ್ಸಿಗೆ ಜಿಪಿಎಸ್ ಅಳವಡಿಸಿಕೊಂಡಿರುತ್ತಾನೆ. ಅವನ ಟ್ಯಾಕ್ಸಿಯನ್ನು ಹತ್ತಿರುವ ಎಸ್ತರ್ ಎಂಬ ವೃದ್ಧೆಗೆ ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದೇ ಗೊತ್ತಿಲ್ಲ. ಮರವಿನ ಗುಣ. ತನ್ನದೆಲ್ಲವನ್ನೂ ಕಳೆದುಕೊಂಡ, ತನಗೆ ಪರಿಚಿತವಾದದ್ದನ್ನೇ ಗುರುತಿಸಲಾಗದ ಸ್ಥಿತಿಯಲ್ಲಿರುವ ವೃದ್ಧೆಯು ಅದ್ಹೇಗೋ, ಪ್ರಯಾಣಿಕರ ನಿರೀಕ್ಷೆಯಲ್ಲಿದ್ದಾಗ ಅಚಾನಕ್ಕಾಗಿ ಅಲಿಯ ಕಾರನ್ನು ಏರುವ ವಯಸ್ಸಾದ ಮಹಿಳೆಯು ತಾನು ತಲುಪಬೇಕಾದ ಗಮ್ಯ ಎಲ್ಲೆಂದು ಹೇಳಲು ಆಗದೆ, ಚಾಲಕ ಎಸ್ತರ್ ನೀಡಿದೆ ಸಣ್ಣ ವಿಳಾಸದ ಸುಳಿವನ್ನು ಹಿಡಿದು ಇಡೀ ರಾತ್ರಿ ಆ ಟ್ಯಾಕ್ಸಿ ಚಾಲಕ ವೃದ್ಧೆಯ ಜೊತೆ ಸಂಚರಿಸುತ್ತಾನೆ. ಆ ಸಂದರ್ಭದಲ್ಲಿ ನಡೆಯುವ ಅವರ ಮಧ್ಯದ ಸಂಭಾಷಣೆ, ಜಗಳ, ನಾಟಕೀಯ ಬೆಳವಣಿಗೆಗಳು, ಆ ವಯೋವೃದ್ಧ ಮಹಿಳೆಯ ಅಸಹಾಯಕತೆ ನೋಡುಗರನ್ನು ಆವರಿಸುತ್ತದೆ. ಸಿಸಿ ಕ್ಯಾಮರಾಗಳು ಈ ಅಡ್ಡಾದಿಡ್ಡಿ ಸಂಚಾರವನ್ನು ಸೆರೆ ಹಿಡಿದು, ಹಿಂಬಾಲಿಸುತ್ತಿರುತ್ತವೆ. ಪೊಲೀಸರು ಎಸ್ತರ್ ಮನೆಯವರ ದೂರಿನ ಹಿನ್ನಲೆಯಲ್ಲಿ ಹುಡುಕಾಟ ನಡೆಸುತ್ತಿರುತ್ತಾರೆ.
ಈ ಮಧ್ಯೆ ಒಂದೆಡೆ ತನ್ನ ವಯೋಸಹಜ ಅಸಹಾಯಕತೆ, ಮರೆವಿನ ಖಾಯಿಲೆ, ಸ್ವತಂತ್ರ್ಯವಾಗಿರಬೇಕೆಂಬ ತುಡಿತ ಅಜ್ಜಿಯ ಒಳಮನಸ್ಸಿನದ್ದಾದರೆ, ಯುದ್ಧದಿಂದ ತನ್ನವರನ್ನು, ತನ್ನ ನೆಲೆ ಕಳೆದುಕೊಂಡ ಇರಾಕ್ ದೇಶದ ಪ್ರಜೆ ಅಲಿ ತನ್ನ ಜೀವನ ಕಟ್ಟಿಕೊಳ್ಳುವ ಮಧ್ಯೆ ಮರೆವಿನ ಅಜ್ಜಿಯನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾರಾ? ಎಂಬ ಕಥಾ ಹಂದರವನ್ನು ಬಹಳ ಮನೋಜ್ಞವಾಗಿ ನಿರ್ದೇಶಕಿ ಮೆಡಿಲಿನ್ ಬ್ಲಾಕ್ ವೆಲ್ ನೋಡುಗರಿಗೆ ಕಟ್ಟಿಕೊಟ್ಟಿದ್ದಾರೆ.
ಚಿತ್ರ : ಸ್ವೀಟ್ ಡ್ರೀಮ್ಸ್
ನೆದರ್ ಲ್ಯಾಂಡಿನ ನಿರ್ದೇಶಕಿ ಎನಾ ಸೆಂಡಿಜಾರ್ವಿಕ್ ನಿರ್ದೇಶನದ ಡಚ್ ಮತ್ತು ಇಂಡೋನೇಷ್ಯಾ ಭಾಷೆಯಲ್ಲಿ 2023ರಲ್ಲಿ ನಿರ್ಮಾಣವಾಗಿರುವ ಸ್ವೀಟ್ ಡ್ರೀಮ್ಸ್ ಒಟ್ಟು 102 ನಿಮಿಷಗಳ ಚಿತ್ರ. ಈ ಚಿತ್ರವು ಲೊಕಾರ್ನೋ ಐಎಫ್ಎಫ್, ಚಿಕಾಗೋ ಐಎಫ್ಎಪ್ ಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸ್ವೀಟ್ ಡ್ರೀಮ್ಸ್ ಚಿತ್ರದ ಕುರಿತು ಹೇಳುವುದಾದರೆ ;
ದೂರದ ಇಂಡೋನೇಷಿಯಾ ದ್ವೀಪದಲ್ಲಿ ವಸಾಹತುಶಾಹಿ ಆಳ್ವಿಕೆಯಿದ್ದ ಕಾಲ. ಡಚ್‌ನ ಸಕ್ಕರೆ ಕಾರ್ಖಾನೆಯ ಮಾಲಿಕ ಜಾನ್‌ನ ಹಠಾತ್ ನಿಧನದಿಂದಾಗಿ ವಾರಸುದಾರರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಅವನ ಪತ್ನಿ ಅಗಾಥೆಗೆ ತನ್ನ ಸವಲತ್ತುಗಳನ್ನು ಉಳಿಸಿಕೊಳ್ಳುವ ಆಸೆ. ಅದಕ್ಕಾಗಿ ಅವಳು ಪ್ರತ್ಯೇಕವಾಗಿ ದೂರದ ಯೂರೋಪಿನಲ್ಲಿ ವಾಸಿಸುತ್ತಿರುವ ತನ್ನ ಮಗ ಕಾರ್ನೆಲಿಸ್ ಹಾಗೂ ಅವನ ಗರ್ಭಿಣಿ ಪತ್ನಿ ಜೋಸೆಫಿನ್ ಅವರನ್ನು ಕುಟುಂಬದ ಆಸ್ತಿಯನ್ನು ನಿರ್ವಹಿಸುವಂತೆ ಪತ್ರ ಬರೆದು ಆಹ್ವಾನಿಸುತ್ತಾಳೆ. ಪತಿಯ ಅಗಲಿಕೆಯ ನಂತರ ಸಕ್ಕರೆ ಕಾರ್ಖಾನೆಯಲ್ಲಿ ಪರಿಸ್ಥಿತಿ ಕೆಟ್ಟು, ಕಾರ್ಮಿಕರು ಮುಷ್ಕರದ ಹಾದಿ ಹಿಡಿದಿರುತ್ತಾರೆ. ಅಂತಹ ಸಮಯದಲ್ಲಿ ಕಾರ್ನೆಲಿಸ್ ಪ್ರಗತಿಪರ ಯೋಜನೆಯೊಂದನ್ನು ಮುಂದಿಡುತ್ತಾನೆ.
ಆದರೆ ಅಲ್ಲಿ ಜಾನ್ ಉಪಪತ್ನಿ ಸಿತಿ, ಕುಟುಂಬದ ಎಸ್ಟೇಟಿನ ಉಸ್ತುವಾರಿಯನ್ನು ಈಗಾಗಲೇ ಕೈಗೆತ್ತಿಕೊಂಡಿರುತ್ತಾಳೆ. ಸಿತಿ, ತನ್ನ ಅನಧಿಕೃತ ಪತಿ ಹಾಗೂ ಕೆಲಸದ ಮಾಲೀಕ ಜಾನ್ ನಿಂದ ಹುಟ್ಟಿದ ತನ್ನ ಮಗನಿಗೆ ಸಮಸ್ತ ಆಸ್ತಿ ಸಿಗುವಂತೆ ಮಾಡುವಲ್ಲಿ ಯಾವೆಲ್ಲಾ ಹಾದಿ ಹಿಡಿಯುತ್ತಾಳೆ? ಅಗಾಥೆಯ ಮಗ ಕಾರ್ನೆಲಿಸ್ ಗೆ ತನ್ನ ತಂದೆಯ ಆಸ್ತಿ ಲಭಿಸುತ್ತಾ? ಎಂಬ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಲಭಿಸುತ್ತೆ.
ಚಿತ್ರ : ಫಾಲನ್ ಲೀವ್ಸ್
ಫಿನ್ಲೆಂಡಿನ ನಿರ್ದೇಶಕ ಅಕಿ ಕೌರಿಸ್ಮಕಿ ನಿರ್ದೇಶನದ ಫಿನ್ನಿಶ್ ಭಾಷೆಯಲ್ಲಿ 2023ರಲ್ಲಿ ನಿರ್ಮಾಣವಾಗಿರುವ ಫಾಲನ್ ಲೀವ್ಸ್ ಒಟ್ಟು 81 ನಿಮಿಷಗಳ ಚಿತ್ರ. ಈ ಚಿತ್ರವು ಖ್ಯಾನೆ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ, ಮ್ಯೂನಿಚ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಫಿನ್ನಿಶ್ ಭಾಷೆಯಲ್ಲಿ ತಯಾರಾದ ಫಾಲನ್ ಲೀವ್ಸ್ ಕುರಿತು ಹೇಳುವುದಾದರೆ ;
ಫಿನ್ಲೆಂಡಿನ ಹೆಲ್ಸಿನ್ಕಿ ನಗರದಲ್ಲೊಂದು ದಿನ ಏಕಾಂಗಿತನ ಅನುಭವಿಸುತ್ತಿರುವ ಇಬ್ಬರು ಯುವಕ ಮತ್ತು ಯುವತಿ ಆಕಸ್ಮಿಕವಾಗಿ ಮುಖಾಮುಖಿಯಾಗುತ್ತಾರೆ. ಜೀವನದಲ್ಲಿ ಸಿಕ್ಕ ಮೊದಲ ಪ್ರೀತಿಯನ್ನೂ ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಾರೆ. ಇದೇ ಸಂದರ್ಭದಲ್ಲಿ ಮೊದಲ ನೋಟದಲ್ಲೇ ತನ್ನನ್ನು ಸೆಳೆದಿದ್ದ ಪ್ರಿಯಕರನಿಗೆ ತನ್ನನ್ನು ಭೇಟಿ ಮಾಡಲು ಆಕೆ ನೀಡಿದ ದೂರವಾಣಿ ಸಂಖ್ಯೆಯು ಇಬ್ಬರ ಪ್ರೀತಿಗೆ ತೊಡಕಾಗುತ್ತೆ. ಅದ್ಹೇಗೋ ಇಬ್ಬರು ಮತ್ತೆ ಭೇಟಿಯಾಗಿ ಎಲ್ಲವೂ ಸರಿಯಾಯಿತು ಎನ್ನುವಷ್ಟರದಲ್ಲಿ, ಜೀವನಕ್ಕಾಗಿ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡುವ ಪ್ರಿಯಕರನ ವಿಪರೀತ ಮಧ್ಯಪಾನ ಚಟ ಪ್ರೀತಿಯಲ್ಲಿ ಬಿದ್ದಿದ್ದ ಮಹಿಳೆಯು ಕಂಡ ಕನಸಿಗೆ ಇನ್ನಿಲ್ಲದ ಘಾಸಿ ಮಾಡುತ್ತೆ. ಜೀವನದಲ್ಲಿ ಸಂತೋಷದ ಹಾದಿ ಹುಡುಕಿಕೊಳ್ಳುವ ಮಾರ್ಗದಲ್ಲಿ ಎದುರಾಗುವ ಅಡೆತಡೆಗಳನ್ನು ದಾಟಿ ಅವರಿಬ್ಬರು ಒಂದಾಗ್ತಾರಾ? ಎಂಬಲ್ಲಿಗೆ ಒಂದು ಸಾಮಾನ್ಯ ಕಥೆಯನ್ನು ಸೊಗಸಾಗಿ ಚಿತ್ರದಲ್ಲಿ ತೋರಿಸಿದ್ದಾರೆ ಫಿನ್ಲೆಂಡಿನ ನಿರ್ದೇಶಕ ಅಕಿ ಕೌರಿಸ್ಮಕಿ.
90 ವರ್ಷ ಪೂರೈಸಿದ ಕನ್ನಡ ಚಿತ್ರರಂಗ:
ಕನ್ನಡ, ಏಷಿಯನ್ ಸಿನಿಮಾ ಸ್ಪರ್ಧಾತ್ಮಕ ವಿಭಾಗ, ಸಮಕಾಲಿನ ವಿಶ್ವ ಸಿನಿಮಾ, ವಿಮರ್ಶಕರ ವಾರ, ಸಾಕ್ಷ್ಯ ಚಿತ್ರ ವಿಭಾಗ, ಜೀವನ ಚರಿತ್ರೆ, ಸಂಸ್ಮರಣೆ ಹಲವು ವಿಭಾಗಗಳಲ್ಲಿ ಚಿತ್ರಗಳು ಪ್ರದರ್ಶನ ಕಾಣಲಿದೆ. ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿದೆ. ಫೆ.29ರಂದು ಆರಂಭವಾಗಿರುವ ಬಿಐಐಇಎಸ್ ಸಿನಿಮಾ ಹಬ್ಬವು ಮಾ.7ರಂದು ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ ನಲ್ಲಿ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನವಾಗಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದೇಶದಲ್ಲಿ ಅತಿ ಕಡಿಮೆ ಮಾತನಾಡುವ ಅಪರೂಪದ ಭಾಷೆಗಳಾಗಿರುವ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ ಭಾಷೆಗಳ 9 ಚಿತ್ರಗಳು ಪ್ರದರ್ಶನವಾಗುತ್ತಿದೆ.
ಚಲನಚಿತ್ರೋತ್ಸವದ ಎರಡನೆಯ ದಿನವಾದ ಇಂದು ಸಂವಿಧಾನದ ಮೌಲ್ಯಗಳು ಹಾಗೂ ಭಾರತೀಯ ಸಿನಿಮಾ ಕುರಿತಂತೆ ಡಾ.ಜಬ್ಬಾರ್ ಪಟೇಲ್ ಅವರಿಂದ ಒರಿಯನ್ ಮಾಲ್ ನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ನಟಿ ಜಲಮಾಲ ಅವರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಡೈಲಿ ಬುಲಿಟಿನ್ ಕೈಪಿಡಿ ಬಿಡುಗಡೆ ಮಾಡಿದರು.