ಬೆಂಗಳೂರು, ಫೆ.13 www.bengaluruwire.com : ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ (KARC-2)ವು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ತಿಳಿದುಕೊಂಡು ಆಡಳಿತವನ್ನು ಸುಧಾರಣೆ ಮಾಡಲು ಬೇಕಿರುವ ಅಗತ್ಯತೆಗಳ ಬಗ್ಗೆ ಸರ್ಕಾರಕ್ಕೆ ಇದುವರೆಗೆ 6 ವರದಿಗಳನ್ನು ಸಲ್ಲಿಕೆ ಮಾಡಿದೆ. ಆದರೆ ಆ ಪೈಕಿ 42 ವಿವಿಧ ಇಲಾಖೆಗಳಿಗೆ ಸಾಮಾನ್ಯ ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದಂತೆ ಮಾಡಿರುವ 4535 ಸೇವೆಗಳ ಪೈಕಿ ಕೇವಲ 99 ಶಿಫಾರಸುಗಳು ಮಾತ್ರವೇ ಅನುಷ್ಠಾನಕ್ಕೆ ಬಂದಿದೆ. ಇದು ಆಯಾ ಇಲಾಖೆಗಳ ಅಧಿಕಾರಿಗಳು ಆಯೋಗದ ವರದಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ತೋರಿರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಎರಡನೇ ಆಡಳಿತ ಸುಧಾರಣಾ ಆಯೋಗವನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದಲ್ಲಿ ರಾಜ್ಯ ಸರ್ಕಾರವು ರಚಿಸಿತ್ತು. ಈ ಆಯೋಗವು ರಾಜ್ಯದಲ್ಲಿನ ದಕ್ಷ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಇಲಾಖೆಗಳಿಗೆ ಖುದ್ದು ಭೇಟಿಕೊಟ್ಟು ನಾಗರೀಕರು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಕಣ್ಣಾರೆ ಕಂಡು, ತಿಳಿದುಕೊಂಡು, ಪರಿಶೀಲಿಸಿ ಸರ್ಕಾರಕ್ಕೆ ಕಾಲ ಕಾಲಕ್ಕೆ ವರದಿ ನೀಡಿತ್ತು. ಇದುವರೆಗೆ ಸರ್ಕಾರಕ್ಕೆ ಜುಲೈ 2021ರಿಂದ ನವೆಂಬರ್ 2023ರ ಮೂರು ವರ್ಷಗಳ ಅವಧಿಯಲ್ಲಿ 6 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಒಟ್ಟಾರೆ 42 ವಿವಿಧ ಇಲಾಖೆಗಳಿಗೆ 4,535 ಸಾಮಾನ್ಯ ಮತ್ತು ನಾಗರೀಕ ಸೇವೆಗಳಿಗೆ ಸಂಬಂಧಿಸಿದಂತೆ ಆಯೋಗವು ಶಿಫಾರಸು ಮಾಡಿರುವ ಪೈಕಿ ಕೇವಲ ಶೇ.2.57ರಷ್ಟು (99 ಶಿಫಾರಸು) ಮಾತ್ರವೇ ಜಾರಿಗೆ ಬಂದಿದೆ ಎಂದರೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಅವರ ಕೈಕೆಳಗಿನ ಅಧಿಕಾರಿಗಳು ನಾಡಿನ ಆಡಳಿತ ಸುಧಾರಣೆ ಮಾಡುವ ನಿಟ್ಟಿನಲ್ಲಿ ಆಯೋಗದ ವರದಿಗಳನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ.
ಆಡಳಿತ ಸುಧಾರಣಾ ಆಯೋಗ-2ರಲ್ಲಿ 6 ವರದಿಗಳಲ್ಲಿ ಮಾಡಲಾದ ಶಿಫಾರಸುಗಳ ಕುರಿತ ಸ್ಥಿತಿಗತಿ | ||||
ಒಟ್ಟಾರೆ ಶಿಫಾರಸುಗಳು | ಅನುಷ್ಠಾನಗೊಂಡವು | ಕ್ರಮ ತೆಗೆದುಕೊಳ್ಳಲಾಗುತ್ತಿದೆ | ಸ್ವೀಕೃತವಾಗದ ಶಿಫಾರಸು | ಶಿಫಾಸುಗಳು ಜಾರಿಗೆ ಬಾಕಿ |
4535 | 99 | 432 | 31 | 3846 |
ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸತತ ಮೂರು ವರ್ಷಗಳ 30 ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ 70 ತಾಲ್ಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ, ಜನರನ್ನು ಭೇಟಿ ಮಾಡಿ, ಅಧಿಕಾರಿಗಳ ಜೊತೆ ಸಾಕಷ್ಟು ಸಭೆ, ಚರ್ಚೆಗಳನ್ನು ನಡೆಸಿ ರಾಜ್ಯದ ಆಡಳಿತವನ್ನು ಮತ್ತಷ್ಟು ಸುಧಾರಿಸಿ ಜನರಿಗೆ ಉತ್ತಮ ಸೇವೆಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ 6 ವರದಿಗಳನ್ನು ಈಗಾಗಲೇ ನೀಡಿದೆ. ಆದರೂ ಅತಿಹೆಚ್ಚು ಶಿಫಾರಸುಗಳನ್ನು ನೀಡಿರುವ ಇಲಾಖೆಗಳು ಅವುಗಳನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ತೋರಿವೆ. ಅವುಗಳ ವಿವರ ಈ ಕೆಳಕಂಡಂತಿದೆ :
ಆಡಳಿತ ಸುಧಾರಣಾ ಆಯೋಗ-2ರ ಅತಿಹೆಚ್ಚು ಶಿಫಾರಸು ಮಾಡಿರುವ ಪೈಕಿ ಕಳಪೆ ಸಾಧನೆ ಮಾಡಿದ ಇಲಾಖೆಗಳು | ||
ಇಲಾಖೆಗಳು | ಒಟ್ಟಾರೆ ಶಿಫಾರಸುಗಳು | ಅನುಷ್ಠಾನಗೊಂಡವು |
ನಗರಾಭಿವೃದ್ಧಿ ಇಲಾಖೆ | 489 | 0 |
ಗೃಹ ಇಲಾಖೆ | 191 | 0 |
ಇಂಧನ ಇಲಾಖೆ | 170 | 0 |
ಸಹಕಾರ ಇಲಾಖೆ | 167 | 0 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ | 147 | 0 |
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ | 142 | 0 |
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ | 140 | 0 |
ರಾಜ್ಯದಲ್ಲಿನ 42 ಇಲಾಖೆಗಳ ಪೈಕಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಯೋಗವು 136 ಶಿಫಾರಸುಗಳನ್ನು ಮಾಡಿದ್ದು, 46 ಶಿಫಾರಸುಗಳನ್ನು ಇಲಾಖೆಯ ಅಧಿಕಾರಿಗಳು ಈಗಾಗಲೇ ಜಾರಿಗೆ ತಂದಿರುವುದು ಸಮಾಧಾನಕರ ಸಂಗತಿ. ಏಕೆಂದರೆ 42 ಇಲಾಖೆಗಳಲ್ಲಿ ಅತಿಹೆಚ್ಚು ಶಿಫಾರಸುಗಳನ್ನು ಜಾರಿಗೆ ತಂದಿರುವ ಇಲಾಖೆಯ ಪೈಕಿ ಸಮಾಜ ಕಲ್ಯಾಣ ಇಲಾಖೆ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ 32 ಇಲಾಖೆಗಳಲ್ಲಿ ಆಯೋಗದ ಒಂದೇ ಒಂದು ಶಿಫಾರಸುಗಳನ್ನು ಇದುವರೆಗೆ ಅನುಷ್ಠಾನ ಮಾಡದಿರುವುದು ನಿಜಕ್ಕೂ ದುರದೃಷ್ಟಕರ.
ಮೊದಲ ವರದಿಯ 972 ಶಿಫಾರಸು ಪೈಕಿ ಶೇ.8ರಷ್ಟು ಅನುಷ್ಠಾನ :
ಆಯೋಗವು ರಾಜ್ಯದಲ್ಲಿ ಅತಿಹೆಚ್ಚು ಆಡಳಿತ ಸುಧಾರಣೆ ಕಾಣಬೇಕಾದ ಕಂದಾಯ, ಸಾರಿಗೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕುರಿತಂತೆ ತನ್ನ ಮೊದಲ ವರದಿಯನ್ನು 3ನೇ ಜುಲೈ 2021 ರಂದು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಒಟ್ಟಾರೆ 856 ಶಿಫಾರಸುಗಳನ್ನು ಮಾಡಲಾಗಿತ್ತು. ಆದರೆ ಕೊನೆಯಲ್ಲಿ ಈ ಶಿಫಾರಸುಗಳ ಸಂಖ್ಯೆ 972ಕ್ಕೆ ಏರಿಕೆಯಾಗಿತ್ತು. ಮೊದಲ ವರದಿಯಲ್ಲಿನ ಶಿಫಾರಸುಗಳ ಪೈಕಿ ಕೇವಲ 30 ಶಿಫಾರಸುಗಳನ್ನು ಮಾತ್ರ ಕಂದಾಯ, ಸಾರಿಗೆ ಮತ್ತು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಅನುಷ್ಠಾನ ಮಾಡಿದೆ. ಆದರೆ ಬರೋಬ್ಬರಿ 898 ಶಿಫಾರಸುಗಳನ್ನು ಇನ್ನೂ ಜಾರಿಗೆ ಬಂದಿಲ್ಲ.
ಆಯೋಗವು ತನ್ನ ಎರಡನೇ ಮತ್ತು ಮೂರನೇ ವರದಿಗಳನ್ನು 18ನೇ ಫೆಬ್ರವರಿ 2022 ರಂದು 1165 ಶಿಫಾರಸುಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಿತ್ತು. ಎರಡನೇ ವರದಿಯಲ್ಲಿ ಗೃಹ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಒಳಗೊಂಡಿದ್ದವು. ಇನ್ನು ಮೂರನೇ ವರದಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಮತ್ತು ಇಂಧನ ಇಲಾಖೆಗಳ ಕುರಿತಂತೆ ಶಿಫಾರಸ್ಸುಗಳನ್ನು ಒಳಗೊಂಡಿದ್ದವು.
ಆಯೋಗವು ತನ್ನ ನಾಲ್ಕನೇ ಮತ್ತು ಐದನೇ ವರದಿಗಳನ್ನು 2023ರ ಫೆಬ್ರವರಿ 03 ರಂದು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಉನ್ನತ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಯುವ ಸಬಲೀಕರಣ, ಕ್ರೀಡೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಮತ್ತು ಕಾರ್ಮಿಕ ಇಲಾಖೆಗಳನ್ನು ಒಳಗೊಂಡ 1609 ಶಿಫಾರಸುಗಳೊಂದಿಗೆ ವರದಿಯನ್ನು ಆಡಳಿತ ಸುಧಾರಣಾ ಆಯೋಗ-2 ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು.
ಮತ್ತು ತನ್ನ ಐದನೇ ವರದಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಮೀನುಗಾರಿಕೆ, ಎಚ್ ರಾಮಸ್ವಾಮಿ ಅವರ ಒಂದನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಕುರಿತು ಕ್ರಮ ತೆಗೆದುಕೊಂಡ ವರದಿ (ATR), ಸಾಮಾನ್ಯ ಶಿಫಾರಸುಗಳು, ಗ್ರಾಮೀಣ ಕೋಟಾ ಕುರಿತ ಸುಧಾರಣೆ, ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳ ಪ್ರತ್ಯಾಯೋಜನೆ (Delegation Of Power), ಇ ಪ್ರೊಕ್ಯೂರ್‌ಮೆಂಟ್‌ಗೆ ಸಂಬಂಧಿಸಿದ ಶಿಫಾರಸುಗಳು, ಕರ್ನಾಟಕ ಸಾರ್ವಜನಿಕರಿಗೆ ಸಂಬಂಧಿಸಿದ ಶಿಫಾರಸುಗಳು, ಸೇವಾ ಆಯೋಗ, ಬಿಬಿಎಂಪಿ (BBMP) ಯ ಮರುಸಂಘಟನೆ, ಐಐಎಂಬಿ (IIMB)ಯ ಅಧ್ಯಯನ ವರದಿ, ಸಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ISEC) ಯ ಅಧ್ಯಯನ ವರದಿ, ಸರ್ಕಾರಿ ನೌಕರರ ಕೆಲಸ ಸುಧಾರಣಾ ತಂಡಗಳ ಸಂವಿಧಾನ ಮತ್ತು ಮಧ್ಯಸ್ಥಗಾರರ ಮಂಡಳಿಗಳ ಸ್ಥಾಪನೆ ಕುರಿತಂತೆ ಹಲವಾರು ಶಿಫಾರಸುಗಳನ್ನು ಆಡಳಿತ ಸುಧಾರಣಾ ಆಯೋಗ-2 ಕೈಗೊಂಡಿತ್ತು.
ಸದ್ಯದಲ್ಲೇ 7ನೇ ಹಾಗೂ ಅಂತಿಮ ವರದಿ ಸರ್ಕಾರಕ್ಕೆ :
ಆಯೋಗವು ವಸತಿ, ಅರಣ್ಯ, ಇಲಾಖೆ, ಪರಿಸರ ಮತ್ತು ಪರಿಸರ, ಜಲ ಸಂಪನ್ಮೂಲಗಳು, ಸಣ್ಣ ನೀರಾವರಿ, ಸಾರ್ವಜನಿಕ ಕೆಲಸಗಳು, ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಗಳನ್ನು ಒಳಗೊಂಡ 882 ಶಿಫಾರಸುಗಳಿರುವ ತನ್ನ 6 ನೇ ವರದಿಯನ್ನು 2023ರ ನವೆಂಬರ್ 25ರಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿತು. ಈ ಎಲ್ಲಾ ವರದಿಗಳನ್ನು ಟಿ.ಎಂ.ವಿಜಯ್ ಭಾಸ್ಕರ್ ಅಧ್ಯಕ್ಷರಾಗಿರುವ ಆಯೋಗವು ಮುಖ್ಯಮಂತ್ರಿಗಳಿಗೆ ಕಾಲ ಕಾಲಕ್ಕೆ ನೀಡಿದೆ. ಕಳೆದ ವರ್ಷ ಡಿಸೆಂಬರ್ 29ರಂದು ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷ ಹುದ್ದೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರಿಗೆ ನೀಡಿದೆ. ಈ ಮಧ್ಯೆ ವಿಜಯ್ ಭಾಸ್ಕರ್ ಅವರ ನೇತೃತ್ವದ ಆಯೋಗವು ತಯಾರಿಸಿದ 7ನೇ ಹಾಗೂ ಕೊನೆಯ ವರದಿಯ ಇಂಗ್ಲೀಷ್ ಪ್ರತಿಯನ್ನು ಈಗಾಗಲೇ ಸರ್ಕಾರದ ಮುದ್ರಾಣಾಲಯಕ್ಕೆ ಪ್ರಿಟಿಂಗ್ ಗಾಗಿ ನೀಡಿದ್ದು, ಸದ್ಯದಲ್ಲೇ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಆಯೋಗವು ಹಸ್ತಾಂತರಿಸಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಆಡಳಿತ ಸುಧಾರಣಾ ಆಯೋಗ-2 ಮಾಜಿ ಅಧ್ಯಕ್ಷರು ಏನಂತಾರೆ? :
“ರಾಜ್ಯದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಮಹತ್ವದ ಆಡಳಿತ ಸುಧಾರಣೆಗಳಾಗಿ ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಸರ್ಕಾರದ ಆಡಳಿತ ಸುಧಾರಣೆಗಾಗಿ, ಆಡಳಿತ ಸುಧಾರಣಾ ಆಯೋಗ-2ನ್ನು ಸರ್ಕಾರ 2021ರ ಜನವರಿಯಲ್ಲಿ ರಚಿಸಿತ್ತು. ಅದರಂತೆ 30 ಜಿಲ್ಲೆಗಳಿಗೆ ಭೇಟಿಕೊಟ್ಟು, ಜನರನ್ನು ಭೇಟಿ ಮಾಡಿ ಅವರ ಸಮಸ್ಯೆ, ಅಹವಾಲುಗಳನ್ನು ಆಲಿಸಿ, ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಬಳಿಕ ಸರ್ಕಾರಕ್ಕೆ 6 ವರದಿಗಳನ್ನು ನೀಡಲಾಗಿದೆ. ಅವುಗಳಲ್ಲಿನ ಶಿಫಾರಸುಗಳನ್ನು ಅನುಷ್ಠಾನ ಮಾಡಿದ ಮಾಹಿತಿಯನ್ನು ಆಯಾ ಇಲಾಖೆಗಳು ಆಯೋಗದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲು ಇಲಾಖೆಗಳ ಮುಖ್ಯಸ್ಥರು ಕ್ರಮ ಕೈಗೊಳ್ಳಲು ಹೆಚ್ಚಿನ ಆಸ್ಥೆವಹಿಸಬೇಕು. ಜನರ ಹಿತದೃಷ್ಟಿಯಿಂದ ಆಯೋಗದ ಶಿಫಾರಸುಗಳ ಅನುಷ್ಠಾನ ಬಹುಮುಖ್ಯವಾಗಿದೆ.”
– ಟಿ.ಎಂ.ವಿಜಯಭಾಸ್ಕರ್, ಮಾಜಿ ಅಧ್ಯಕ್ಷರು, ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.