ಬೆಂಗಳೂರು, ಫೆ.3 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿಗೆ 40ಕ್ಕೂ ಹೆಚ್ಚಿನ ಫ್ಲೈಓವರ್, ಅಂಡರ್ ಪಾಸ್, ರಸ್ತೆ ಅಗಲೀಕರಣ ಮಾಡಿದ್ರೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಅಸ್ತ್ರಂ (Action Intelligence For Sustainable Traffic Management Application – ASTraM APP) ಯೋಜನೆ ಜಾರಿಗೆ ತಂದಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ ಈಗಿನ ವಾಹನ ದಟ್ಟಣೆ ನಿವಾರಣೆ ಹಾಗೂ ಭವಿಷ್ಯದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಲು ನಗರ ಸಂಚಾರ ಪೊಲೀಸರು ಕೃತಕ ಬುದ್ಧಿಮತ್ತೆ (AI) ಆಧಾರಿತ ಅಸ್ತ್ರಂ ಎಂಬ ವಿನೂತನ ಯೋಜನೆಯೊಂದನ್ನು (Bengaluru traffic police launch ASTraM) ರೂಪಿಸಿದ್ದಾರೆ. ಇದು ಸ್ಮಾರ್ಟ್ ಎಂಜಿನ್ ವ್ಯವಸ್ಥೆ ಎಂದು ಹೇಳಲಾಗುತ್ತಿದೆ.
ಈ ಎಐ ಆಧಾರಿತ ಅಸ್ತ್ರಂ ಆಪ್ ನಲ್ಲಿ ಏನೇನಿದೆ? :
ಅಸ್ತ್ರಂನಲ್ಲಿ ಕನ್ವೆಷನ್ ಅಲರ್ಟ್‍ಗಳು, ಬಿಒಟಿ ಆಧಾರಿತ ಇನ್ಸಿಡೆಂಟ್ ರಿಪೋರ್ಟಿಂಗ್ ಹಾಗೂ ಇವೆಂಟ್ ಮ್ಯಾನೇಜ್‍ಮೆಂಟ್ ಮತ್ತು ಡ್ಯಾಶ್‍ಬೋರ್ಡ್ ಅನಾಲಿಟಿಕ್ಸ್ ಗಳನ್ನು ಬಳಸಿಕೊಂಡು ಸಂಚಾರ ದಟ್ಟಣೆಯ ಉದ್ದ, ವಾಹನಗಳ ಸಂಖ್ಯೆ, ವಾಹನಗಳ ವಿಧ, ನೈಜ್ಯ ಸಮಯದಲ್ಲಿ ದತ್ತಾಂಶವನ್ನು ಪಡೆದು ಸುಗಮ ಸಂಚಾರದ ಅನುವು ಮಾಡಿಕೊಡಲಿದೆ.
ಪ್ರತಿ 15 ನಿಮಿಷಕ್ಕೊಮ್ಮೆ ಸಂದೇಶ ರವಾನೆ :
ಕೃತಕ ಬುದ್ಧಿಮತ್ತೆ ಅಡಿಯಲ್ಲಿ ನಗರದ ಯಾವ ಭಾಗದಲ್ಲಿ ವಾಹನ ದಟ್ಟಣೆ ಇದೆ ಎನ್ನುವುದನ್ನು ಗುರುತಿಸಿ, ಡೇಟಾ ಆಧರಿಸಿ ಸ್ಮಾರ್ಟ್ ಎಂಜಿನ್ ಆಪ್ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ. ಇದನ್ನು ಆಧರಿಸಿ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಯಾವ ಯಾವ ಸಮಯದಲ್ಲಿ ವಾಹನ ದಟ್ಟಣೆ ಇರುತ್ತದೆ ಎಂಬುದನ್ನು ಸಂಚಾರ ಠಾಣೆಯ ಸಿಬ್ಬಂದಿಗೆ 15 ನಿಮಿಷಕ್ಕೊಮ್ಮೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತೆ. ಈ ಮಾಹಿತಿ ಟ್ರಾಫಿಕ್ ದಟ್ಟಣೆ ಇರುವ ಸಂಚಾರ ಪೊಲೀಸರಿಗೆ ಲಭ್ಯವಾಗಲಿದೆ. ಇದನ್ನು ಆಧರಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಜಂಕ್ಷನ್‌ಗಳಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳ ಮಾಹಿತಿ, ವಾಹನಗಳ ಸಂಖ್ಯೆ, ವಾಹನಗಳ ಮಾದರಿ, ಭವಿಷ್ಯದಲ್ಲಿ ಉಂಟಾಗಬಹುದಾದ ದಟ್ಟಣೆ ಮಾಹಿತಿಯೂ ಲಭ್ಯವಾಗಲಿದೆ. ರಸ್ತೆಗಳಲ್ಲಿ ನಡೆಯುವ ಅಪಘಾತಗಳ ಬಗ್ಗೆಯೂ ವಾಹನ ಸವಾರರಿಗೆ ಬಿಒಟಿ ಮೂಲಕ ಸಂದೇಶ ತಲುಪಲಿದೆ ಎಂದು ತಿಳಿಸುತ್ತಾರೆ.
ಬೃಹತ್ ಕಾರ್ಯಕ್ರಮ ಸಂದರ್ಭದಲ್ಲಿ ವಾಹನ ದಟ್ಟಣೆ ನಿರ್ವಹಣೆ :
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರ್ಷದ ಉದ್ದಕ್ಕೂ ಬೃಹತ್ ಕಾರ್ಯಕ್ರಮಗಳು, ಪ್ರತಿಭಟನೆ, ಸಮಾವೇಶಗಳು ನಡೆಯುತ್ತಲೇ ಇರುತ್ತವೆ. ಇದರಿಂದಲೂ ವಾಹನ ದಟ್ಟಣೆ ಉಂಟಾಗುವುದು ಸರ್ವೇ ಸಾಮಾನ್ಯ. ಇಂತಹ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ವಾಹನ ದಟ್ಟಣೆ ಪರಿಸ್ಥಿತಿಯನ್ನು ಅವಲೋಕಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಹಾಯವಾಗುತ್ತದೆ. ಇಂತಹ ವೇಳೆ ಕೇಂದ್ರ ಕಚೇರಿಯಿಂದ ವಾಹನ ಸಂಚಾರ ನಿರ್ವಹಿಸಲು ಸಂದೇಶ ರವಾನೆಯಾಗುತ್ತದೆ.
ಆಂಬ್ಯುಲೆನ್ಸ್ ಸಂಚಾರಕ್ಕೆ ಸೂಕ್ತ ವ್ಯವಸ್ಥೆ :
ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನೋಂದಣಿಯಾದ ಅಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಅಸ್ತ್ರಂ ಯೋಜನೆಯ ಮತ್ತೊಂದು ಉದ್ದೇಶ. ಆಂಬುಲೆನ್ಸ್ ಪ್ರಯಾಣ ಆರಂಭ, ತಲುಪಬೇಕಾದ ಸ್ಥಳದ ವಿವರವನ್ನು ಮುಂಚಿತವಾಗಿ ತಿಳಿಸಿದರೆ ಆಂಬುಲೆನ್ಸ್ನ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಒಂದು ವೇಳೆ ಆಂಬುಲೆನ್ಸ್ 120 ಸೆಕೆಂಡ್‌ಗಳಿಗೆ ಮೀರಿ ಆಂಬುಲೆನ್ಸ್ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರೆ ಆಗ ಎಸ್‌ಒಎಸ್ ಬಟನ್ ಸಕ್ರಿಯವಾಗಿ ಸಂಚಾರ ದಟ್ಟಣೆ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ಕಳುಹಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
10 ಕಡೆ ಈಗಾಗಲೇ ಡ್ರೋಣ್ ಕ್ಯಾಮರಾ ಬಳಕೆ :
ನಗರದ ಸಂಚಾರ ಪೊಲೀಸರು ಈಗಾಗಲೇ 10 ಕಡೆ ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆಯ ದಟ್ಟಣೆ ಅವಧಿಯಲ್ಲಿ ಸಂಚಾರ ನಿರ್ವಹಣೆ ಮಾಡಲಾಗುತ್ತಿದೆ. ಡ್ರೋಣ್ ಸೆರೆಹಿಡಿಯುವ ದೃಶ್ಯಗಳು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನೇರ ಪ್ರಸಾರವಾಗುತ್ತಿವೆ. ರಸ್ತೆಗಳಲ್ಲಿ ಅಪಘಾತ ಅಥವಾ ಇತರೆ ಘಟನೆಗಳು ಸಂಭವಿಸಿದರೆ ಘಟನಾ ಸ್ಥಳಕ್ಕೆ ತಕ್ಷಣ ಹೋಗಲು ಇದರಿಂದ ನೆರವಾಗುತ್ತಿದೆ ಎಂದು ಪೊಲೀಸರು ಅಭಿಪ್ರಾಯಪಡುತ್ತಾರೆ.