- – ಶ್ಯಾಮ್ ಹೆಬ್ಬಾರ್.ಎಸ್
ಬೆಂಗಳೂರು, ಜ.2 www.bengaluruwire.com : ಒಂದು ಪ್ಲೇಟ್ ಇಡ್ಲಿ, ಮಸಾಲೆ ದೋಸೆ ತಿಂದು ಕಾಫಿ ಕುಡಿದ್ರೆ ಲಾಲ್ ಬಾಗ್ ನಲ್ಲಿ ವಾಕಿಂಗ್ ಮಾಡಿ ಬಂದು ಕೂತವರಿಗೆ ದಣಿವು ಹೋಗಿ ಇಡೀ ದಿನ ಉಲ್ಲಾಸಭರಿತವಾಗುತ್ತೆ. ಸಾವಿರಾರು ಮಂದಿಗೆ ಈ ರೀತಿ ಪ್ರತಿದಿನದ ಆರಂಭ ಇದೇ ಹೋಟೆಲ್ ನಿಂದ. ಲಕ್ಷಾಂತರ ಜನರಿಗೆ ತಮ್ಮ ಅನುಪಮ ನೆನಪಿನ ಗ್ಯಾಲರಿಯಲ್ಲಿ ಮಾವಳ್ಳಿ ಟಿಫನ್ ರೂಮ್ (MTR) ಎಂಬ ಹೋಟೆಲ್ ಒಂದು ಅಚ್ಚಳಿಯದ ಅನುಭವಾಗಿ ಉಳಿದಿದೆ. ರಾಜಧಾನಿಯ ಕೇಂದ್ರ ಭಾಗದಲ್ಲಿ ಈ ಹೋಟೆಲ್ ಶುರುವಾಗಿ ನೂರನೇ ವರ್ಷ ತಲುಪಿದೆ!!!
ಹೌದು 100 ವರ್ಷಗಳ ಹಿಂದೆ ಲಾಲ್ ಬಾಗ್ ಬಳಿ 1924ರಲ್ಲಿ ಆರಂಭವಾದ ಶುದ್ಧ ಶಾಖಾಹಾರಿ, ಫಲಾಹಾರಮಂದಿರ ಎಂಟಿಆರ್. ಒಂದು ಹೋಟೆಲ್ ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ 5 ವರ್ಷ ನಡೆದರೆ ಹೆಚ್ಚೆಚ್ಚು. ಅಂತಹುದರಲ್ಲಿ ಒಂದು ಶತಮಾನ ಪೂರೈಸಿದೆ ಎಂದಾದರೆ ಮೂರ್ನಾಲ್ಕು ತಲೆಮಾರುಗಳ ಕಾಲದ ಜನರ ಆಹಾರದ ಅವಶ್ಯಕತೆಗಳನ್ನು ಪೂರೈಸಿ ಆಗಿನ ಸಂಸ್ಕೃತಿ, ಕಾಲಘಟ್ಟಕ್ಕೆ ತಕ್ಕಂತೆ ನಾಗರೀಕ ಸಮಾಜದಲ್ಲಿ ಬೆಸೆದುಕೊಂಡಿರುವ ಕಾರಣದಿಂದಲೇ ಎಂಟಿಆರ್ ದೇಶ ವಿದೇಶಗಳಲ್ಲೂ ಮನೆ ಮಾತಾಗಿ ಉಳಿದಿದೆ. ಅತಿಥಿ ಸತ್ಕಾರ ಮಾಡುತ್ತಲೇ ಒಂದೀಡಿ ಸಮುದಾಯವನ್ನು ರುಚಿ- ಶುಚಿಯಾದ ತಿಂಡಿ ತಿನಿಸು ನೀಡುತ್ತಾ ಪೋಷಿಸುವುದು ಸಾಮಾನ್ಯದ ಮಾತಲ್ಲ.
ಲಾಲ್ ಬಾಗ್ ಎಂಟಿಆರ್ ನಲ್ಲಿ ಪೂರಿ, ವಡೆ ಬಿಟ್ಟರೆ ಉಳಿದೆಲ್ಲ ತಿಂಡಿಗಳನ್ನು ತುಪ್ಪದಲ್ಲೇ ಮಾಡುವುದು ವಿಶೇಷ. ಚಿಕೋರಿ ರಹಿತ ಕಾಫಿ, ತುಪ್ಪದ ಜೊತೆಗಿನ ರವೆಇಡ್ಲಿ, ಗಮ ಗಮಿಸುವ ತುಪ್ಪದ ದೋಸೆ, ವಾರಕ್ಕೊಮ್ಮೆ ಮಾಡುವ ಸಿಹಿ ತಿಂಡಿ ಚಂದ್ರಾಹಾರ ಲಕ್ಷಾಂತರ ತಿಂಡಿ ಪ್ರಿಯರ ರುಚಿಗೆ ಫಿದಾ ಆಗುವಂತೆ ಮಾಡಿದೆ. ದಕ್ಷಿಣ ಭಾರತದ ಅದರಲ್ಲೂ ಉಡುಪಿ ಶೈಲಿಯ ಶುಚಿ-ರುಚಿಯಾದ ಊಟಕ್ಕೆ ಕುಟುಂಬ, ಸ್ನೇಹಿತರ ಸಮೇತ ಬಂದು ಊಟ ಮಾಡಿ ಹೋಗುತ್ತಾರೆ. ಬೆಳಗ್ಗೆ 6.30ರಿಂದ ರಾತ್ರಿ 8.30ರ ತನಕ ಮಧ್ಯೆ ಕೆಲವು ಸಮಯದ ಹೋಟೆಲ್ ಬಾಗಿಲು ಹಾಕಿರುವುದು ಬಿಟ್ಟರೆ ವಾರದ ಆರು ದಿನವೂ ಬೆಂಗಳೂರಿನ ಜನರ ಊಟ ತಿಂಡಿಯ ಅವಶ್ಯಕತೆಯನ್ನು ಪೂರೈಸುತ್ತಾ ಬಂದಿದೆ. ಸೋಮವಾರ ಹೋಟೆಲ್ ಗೆ ರಜಾದಿನವಾಗಿದೆ.
ಎಂಟಿಆರ್ ವಿಧ ವಿಧವಾದ ತಿಂಡಿ, ತಿನಿಸು, ಮಸಾಲೆ ಪದಾರ್ಧಗಳನ್ನು ತಯಾರಿಸುವ ತನ್ನ ಬ್ರಾಂಡ್ ನಡಿ ದೊಡ್ಡ ಆಹಾರ ಕಾರ್ಖಾನೆಯನ್ನು ಸಾವಿರಾರು ಜನರಿಗೆ ಉದ್ಯೋಗ ನೀಡಿತು. ಈಗ್ಗೆ 2007ರಲ್ಲಿ ನಾರ್ವೆ ರಾಷ್ಟ್ರ ಓರ್ಕ್ಲಾ ಎಂಬ ಹೂಡಿಕೆ ಕಂಪನಿಯು ಎಂಟಿಆರ್ ಫುಡ್ಸ್ ಕಂಪನಿಗೆ ನೂರಾರು ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಿತು. ಆದರೆ ಎಂಟಿಆರ್ ಲಾಲ್ ಬಾಗ್ ನಲ್ಲಿರುವ ತನ್ನ ಮೂಲ ಎಂಟಿಆರ್ ಹೋಟೆಲ್ ಅನ್ನು ಹಾಗೆ ಉಳಿಸಿಕೊಂಡು ಎಂದಿನಂತೆ ಎಂಟಿಆರ್ ಬ್ರಾಂಡ್ ನಡಿ ಬೆಂಗಳೂರಿನಲ್ಲೇ ಇತರ 8 ಬ್ರಾಂಚ್ ಗಳನ್ನು ತೆರೆದಿದೆ. ಇಷ್ಟೆ ಅಲ್ಲದೆ ಉಡುಪಿ, ಹಾಸನ ಹೆದ್ದಾರಿ ಬೆಳ್ಳೂರು ಕ್ರಾಸ್ ಬಳಿ ಮತ್ತು ವಿದೇಶದ ಲಂಡನ್, ಸಿಂಗಾಪುರ, ದುಬೈ, ಮಲೇಷ್ಯಾ, ಅಮೆರಿಕಾದ ಸಿಯಾಟೆಲ್ ನಲ್ಲೂ ಎಂಟಿಆರ್ ಹೋಟೆಲ್ ಜನರಿಗೆ ದೇಶೀಯ ಸವಿರುಚಿಯನ್ನು ಉಣಬಡಿಸುತ್ತಿದೆ. ನೇಪಾಳದಲ್ಲಿ ಸದ್ಯದಲ್ಲೇ ಹೋಟೆಲ್ ಆರಂಭವಾಗಲಿದೆ ಎಂದು ಎಂಟಿಆರ್ ಮೂಲಗಳು ತಿಳಿಸಿವೆ.
1924ರಲ್ಲಿ ಯಜ್ಞನಾರಾಯಣ ಮಯ್ಯ ಹಾಗೂ ಪರಮೇಶ್ವರ ಮಯ್ಯ ಸಹೋದರರು ಆರಂಭಿಸಿದ ಹೋಟೆಲ್ ಅನ್ನು ಇದೀಗ ಮೂರನೇ ತಲೆಮಾರಿನ ಹೇಮಾಮಾಲಿನಿ ಮಯ್ಯ ಅವರು ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ. ಎಂಟಿಆರ್ ಹೋಟೆಲ್ ದೇಶೀಯವಾಗಿ 600ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ.
ಒಂದು ವರ್ಷ ಶತಮಾನ ಪೂರೈಸಿದ ಎಂಟಿಆರ್ ಬಗ್ಗೆ ಇನ್ನು ಮೂರ್ನಾಲ್ಕು ತಿಂಗಳ ಒಳಗಾಗಿ ದೊಡ್ಡ ಕಾರ್ಯಕ್ರಮ ನಡೆಸಿ, ಅದರಲ್ಲಿ ಈ ಹೋಟೆಲ್ ಬೆಳೆದು ಬಂದ ರೀತಿ, ಆಯಾ ಕಾಲಮಾನದಲ್ಲಿ ಗಣ್ಯರು, ಪ್ರಮುಖ ಗ್ರಾಹಕರು ಭೇಟಿ ಕೊಟ್ಟಾಗಿನ ಕ್ಷಣಗಳು ಮತ್ತಿತರ ವಿವರಗಳನ್ನು ಒಳಗೊಂಡು ಪುಸ್ತಕವನ್ನು ಹೊರತರುವ ತಯಾರಿ ನಡೆದಿದೆ. ಅದೇ ರೀತಿ 100 ವರ್ಷ ಹಳೆಯದಾದ ಲಾಲ್ ಬಾಗಿನ ಬಳಿಯಿರುವ ಎಂಟಿಆರ್ ಕಟ್ಟಡವನ್ನು ಗ್ರಾಹಕರಿಗೆ ತೊಂದರೆಯಾಗದಂತೆ ಅಲ್ಲಲ್ಲಿ ನವೀಕರಣ ಮಾಡುವ ಕಾರ್ಯವು ನಡೆಯುತ್ತಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.
ರವೇ ಇಡ್ಲಿ ರೂವಾರಿ ಎಂಟಿಆರ್ :
ಎರಡನೇ ವಿಶ್ವ ಯುದ್ಧ ನಡೆದ ಸಂದರ್ಭದಲ್ಲಿ, ಅಕ್ಕಿ ಸಿಗುವುದು ಬಹಳ ದುರ್ಲಭವಾಗಿತ್ತು. ಇದರಿಂದಾಗಿ ಇಡ್ಲಿ, ತಯಾರಿಸಲು ಬೇರೆ ಪದ್ಧತಿಯನ್ನು ಹುಡುಕಿಕೊಳ್ಳಬೇಕಾಯಿತು. ಆಗ ಎಮ್.ಟಿ.ಆರ್, ಸಣ್ಣಗೆ ಒಡೆದ ಗೋಧಿಯ ರವೆಯಿಂದ ಇಡ್ಲಿ ಮಾಡಿ ಬಡಿಸುತ್ತಿದ್ದರು. ರವೆಯಿಂದ ಮಾಡಿದ್ದ ಇಡ್ಲಿಗಳು ಜನರಿಗೆ ಹೆಚ್ಚು ಪ್ರಿಯವಾಯಿತು. ರವೆಇಡ್ಲಿ, ಅದರ ಮೇಲೆ ಸವರಿದ ತುಪ್ಪ, ಮತ್ತು ಚಟ್ಣಿ, ಸಾಗು, ದಿಢೀರನೆ ಪ್ರಸಿದ್ಧಿಯಾಯಿತು. ಕರ್ನಾಟಕದಲ್ಲಿ ಪ್ರಥಮ ಫಾಸ್ಟ್ ಫುಡ್ ರೆಸ್ಟೋರೆಂಟ್ ಎಂದು ಹೆಸರು ಪಡೆಯಲು, ಎಮ್.ಟಿ.ಆರ್ ನ ಮಾಲೀಕ ಹರಿಶ್ಚಂದ್ರ ಮಯ್ಯಾರವರು, ಕಾರಣಕರ್ತರಾದರು. ಕೇವಲ 7 ಗಂಟೆಗಳಲ್ಲಿ 21,000 ಸಾವಿರ ಇಡ್ಲಿ ಗಳನ್ನು ಮಾಡಿ ಗಿರಾಕಿಗಳಿಗೆ ಬಡಿಸಿದ್ದರು.
ಜಗತ್ತಿನ 150 ಐತಿಹಾಸಿಕ ರೆಸ್ಟೋರೆಂಟ್ ಪಟ್ಟಿಯಲ್ಲಿ ಎಂಟಿಆರ್ :
ಟೇಸ್ಟ್ ಅಟ್ಲಾಸ್ ಎಂಬ ಸಂಸ್ಥೆ ಇತ್ತೀಚೆಗೆ ಜಗತ್ತಿನ 150 ಐತಿಹಾಸಿಕ ರೆಸ್ಟೋರೆಂಟ್ ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಎಂಟಿಆರ್ ಹೋಟೆಲ್ 32ನೇ ಪಟ್ಟಿಯಲ್ಲಿದ್ದು ಹಾಗೂ ಇಲ್ಲಿನ ಪ್ರಸಿದ್ಧವಾದ ರವೆ ಇಡ್ಲಿ ತಿಂಡಿಯ ಬಗ್ಗೆಯೂ ತಿಳಿಸಿದೆ. ಮೈಸೂರು ನಗರದಲ್ಲಿನ ರಕ್ಷಣಾ ಇಲಾಖೆಯ “ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟೊರಿ”(DFRL) ಯಿಂದ ‘ಫುಡ್ ಪ್ಯಾಕೇಜ್ ಟೆಕ್ನೋಲಜಿ,’ ಯನ್ನು ಎಂಟಿಆರ್ ಬಹು ಹಿಂದೆಯೇ ಖರೀದಿ ಮಾಡಿತ್ತು. ಆಹಾರ ಪ್ಯಾಕ್ ಮಾಡುವಾಗ ‘ಪ್ರಿಸರ್ವೇಟರ್’ಗಳನ್ನು ಸೇರಿಸದ ರೀತಿ ಆಹಾರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಭಾರತದ ಪ್ರಥಮ ‘ಪ್ರಮಾಣಿತ, ಪ್ರೋಸೆಸ್ಡ್ ಫುಡ್ ಕಂಪೆನಿ,’ ಎಂಬ ಹೆಗ್ಗಳಿಕೆಯೂ ಎಮ್.ಟಿ.ಆರ್ ಸಂಸ್ಥೆಯದ್ದಾಗಿದೆ.
ಒಂದು ವರ್ಷವಿಡೀ ಎಂಟಿಆರ್ 100ರ ಸಂಭ್ರಮ ಆಚರಣೆ :
“ಹೋಟೆಲ್ ಉದ್ಯಮದಲ್ಲಿ ಮಾವಳ್ಳಿ ಟಿಫನ್ ರೂಮ್ ಒಂದು ಶತಮಾನದ ಕಾಲ ತನ್ನ ಗ್ರಾಹಕರಿಗೆ ವಿವಿಧ ಕಾಲಘಟ್ಟದಲ್ಲಿ ಗುಣಮಟ್ಟ, ಶುಚಿ-ರುಚಿಯಾದ ಆಹಾರವನ್ನು ಒದಗಿಸುತ್ತಾ ಬಂದಿರುವುದು ನಿಜಕ್ಕೂ ನಮಗೆ ಖುಷಿಯಾಗಿದೆ. ಈ 100 ವರ್ಷದಲ್ಲಿ ದೇಶ-ವಿದೇಶಗಳ ಲಕ್ಷಾಂತರ ಗ್ರಾಹಕರು ನಮ್ಮ ಅಡುಗೆಯ ಸವಿಯನ್ನು ಸವಿದು ಸಂತೋಷ ವ್ಯಕ್ತಪಡಿಸಿದ್ದಾರೆ. ನಮಗೆ ಬೆಂಬಲ ನೀಡಿದ್ದಾರೆ. ಅವರಿಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಎಂಟಿಆರ್ 100 ವರ್ಷದ ಸಂಭ್ರಮವನ್ನು ಒಂದು ವರ್ಷವಿಡೀ ಹಮ್ಮಿಕೊಳ್ಳಲು ತಯಾರಿ ನಡೆಯುತ್ತಿದೆ. ಸಂಸ್ಥೆಯು ಬೆಳೆದು ಬಂದ ಬಗೆಯ ಬಗ್ಗೆ ವಿಭಿನ್ನವಾದ ಪುಸ್ತಕವನ್ನು ಹೊರತರುತ್ತಿದ್ದೇವೆ. ಎಂಟಿಆರ್ 100 ವರ್ಷ ಪೂರೈಸಲು ಪ್ರಮುಖ ಕಾರಣ ಶಿಸ್ತು ಅಳವಡಿಸಿಕೊಂಡು ಗುಣಮಟ್ಟದ ಆಹಾರ, ರಾಜಿಯಿಲ್ಲದೆ ಕೆಲಸ ಮಾಡುತ್ತಾ ಬಂದಿರುವುದಾಗಿದೆ. ನಮ್ಮ ಬಲದ ಮೇಲೆ ನಂಬಿಕೆಯಿಟ್ಟು ಅದರ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ.”
– ಹೇಮಾಮಾಲಿನಿ, ಎಂಟಿಆರ್ ಮಾಲೀಕರು
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.